ಕನ್ನಡಪ್ರಭ ವಾರ್ತೆ, ತುಮಕೂರುಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿಯಾಗದೆ ತಳ ಸಮುದಾಯಗಳು ಮುಂದುವರೆಯಲು ಸಾಧ್ಯವಿಲ್ಲ. ನಾವು ಶಿಕ್ಷಣ ಪಡೆದು ಬದಲಾದರೆ ಸಮುದಾಯವೂ ಬದಲಾಗುತ್ತದೆ. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಹಾಗಾಗಿ ಎಲ್ಲ ಸಮಾಜದವರೂ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.ನಗರದ ಸರಸ್ವತಿಪುರಂನಲ್ಲಿ ಭಾನುವಾರ ವಾಲ್ಮೀಕಿ ವಿದ್ಯಾವರ್ಧಕ ಸಂಘ ನಿರ್ಮಿಸಿರುವ ವಿದ್ಯಾರ್ಥಿನಿಲಯ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ವಾಲ್ಮೀಕಿ ಸಮಾಜ ಈಗ ಎಚ್ಚೆತ್ತುಕೊಂಡು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ದೇಶದ ಶೇಕಡ 80 ರಷ್ಟು ಅಕ್ಷರಸ್ಥರಲ್ಲಿ ಎಸ್.ಸಿ, ಎಸ್.ಟಿ. ಸಮಾಜ ಶೇಕಡ 52 ರಷ್ಟು ಅಕ್ಷರಸ್ಥರಿದ್ದಾರೆ ಎಂದು ಹೇಳಲಾಗಿದೆ ಎಂದರು.ಈ ದೇಶಕ್ಕೆ ಸಾಮಾಜಿಕ ಚಿಂತನೆ, ಧಾರ್ಮಿಕ ಚಿಂತನೆ, ದೂರದೃಷ್ಟಿ ಹಾಕಿಕೊಟ್ಟ ಮಹರ್ಷಿ ವಾಲ್ಮೀಕಿಯವರ ಸಮಾಜದ ಇವತ್ತಿನ ಸ್ಥಿತಿಗತಿ ಏನು? ಸಮಾಜ ವರ್ಗೀಕರಣ ಮಾಡಿದ ಪುರೋಹಿತ ಶಾಹಿಗಳು ಇವತ್ತಿಗೂ ವಾಲ್ಮೀಕಿ ರಚಿಸಿದ ರಾಮಾಯಣ ಉಲ್ಲೇಖ ಮಾಡುತ್ತಾರೆ. ಆದರೆ ಅವರ ಸಮಾಜದ ಪರಿಸ್ಥಿತಿ ಏನಾಗಿದೆ ಎಂದು ನಾವು ಚಿಂತನೆ ಮಾಡಬೇಕಾಗಿದೆ ಎಂದು ಹೇಳಿದರು.ಇಂತಹ ಸಮಾಜಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ನೀಡಲು ಸರ್ಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭಿಸಿದೆ.ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಎಸ್ಸಿ, ಎಸ್ಟಿಗಳ ಜನಸಂಖ್ಯೆ 1.9 ಕೋಟಿಯಷ್ಟಿದೆ. ಎಸ್ಸಿ, ಎಸ್ಟಿಗಳು ಕಾನೂನಿನ ಪ್ರಕಾರ ಬೇರೆ ಬೇರೆಯಾದರೂ ಸಾಮಾಜಿಕವಾಗಿ ಬೇರೆ ಬೇರೆ ಅಲ್ಲ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ವಿದ್ಯೆಯಿಂದ ವಂಚಿತವಾಗಿದ್ದ ವಾಲ್ಮೀಕಿ ಸಮುದಾಯದಲ್ಲಿ ಶೈಕ್ಷಣಿಕ ಜಾಗೃತಿ ಮೂಡಿದ್ದು ದೇವರಾಜ ಅರಸು, ಎಲ್.ಜಿ.ಹಾವನೂರರ ಪ್ರವೇಶ ಮಾಡಿದ ನಂತರ. ಆ ನಂತರ ಶಿಕ್ಷಣದ ಪ್ರವೇಶದಲ್ಲಿ ಮೀಸಲಾತಿ ತಂದ ಮೇಲೆ ನಮ್ಮವರು ಡಾಕ್ಟರ್, ಎಂಜಿನಿಯರ್ ಆಗಲು ಸಾಧ್ಯವಾಯಿತು. ವಿದ್ಯೆ ಯಾರಪ್ಪನ ಸ್ವತ್ತೂ ಅಲ್ಲ, ಅದು ಸಾಧಕನ ಸೊತ್ತು. ಶ್ರದ್ಧೆಯಿಂದ ಅಭ್ಯಾಸ ಮಾಡಿದವರಿಗೆ ವಿದ್ಯೆ ಒಲಿಯುತ್ತದೆ ಎಂದರು.
ಜಾತಿ ವ್ಯವಸ್ಥೆ ಹೋಗಬೇಕು ಎಂದು 800 ವರ್ಷಗಳ ಹಿಂದೆ ಬಸವಣ್ಣ ಹೋರಾಟ ಮಾಡಿದರು. ನಂತರ ಗಾಂಧೀಜಿ, ಡಾ.ಅಂಬೇಡ್ಕರ್ ಜಾತಿ ಪದ್ಧತಿ ಹೋಗಿ ಎಲ್ಲರಲ್ಲೂ ಸಮಾನತೆ ಬರಬೇಕು ಎಂದು ಬಯಸಿದ್ದರು. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಜಾತಿ ವಿಜೃಂಭಿಸುತ್ತಿದೆ. ಜಾತಿಗಳಲ್ಲಿ ಉಪಜಾತಿ, ಅದರೊಳಗೆ ಇನ್ನೂ ಉಪಜಾತಿಗಳು ಕಾಣುತ್ತಿವೆ. ನಾವು ಎಲ್ಲಿ ಹೋಗಿ ತಲುಪುತ್ತೇವೆ? - ಡಾ.ಜಿ.ಪರಮೇಶ್ವರ್ , ಗೃಹ ಸಚಿವ