ಗಜೇಂದ್ರಗಡ: ಶಿಕ್ಷಣ ಹಾಗೂ ಸಾಮಾಜಿಕ ಸೇವೆ ಮೂಲಕ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ತಿಳಿಸಿದರು.
ಸಮಾಜಮುಖಿ ಚಿಂತನೆ ಮತ್ತು ಸೇವಾ ಮನೋಭಾವದಿಂದ ಬದುಕಿದ ಚನ್ನು ಪಾಟೀಲರ ಆದರ್ಶ ಯುವಜನತೆಗೆ ಮಾದರಿಯಾಗಿದ್ದು, ಈ ಫೌಂಡೇಷನ್ ಕಳೆದ ಐದು ವರ್ಷಗಳಿಂದ ಶಿಕ್ಷಣ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿವಿಧ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದನ್ನು ಶ್ಲಾಘಿಸಿದರು.
ರೋಣದ ಗುಲಗಂಜಿಮಠ ಗುರುಪಾದ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದ ಅಭಿವೃದ್ಧಿಗೆ ಶಿಕ್ಷಣ ಮತ್ತು ಸಂಸ್ಕಾರ ಅತ್ಯಂತ ಅವಶ್ಯಕ. ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡು ಯುವಜನರು ಉತ್ತಮ ನಾಗರಿಕರಾಗಿ ಬೆಳೆಯಬೇಕು. ಚನ್ನು ಪಾಟೀಲರಂಥ ಮಹನೀಯರ ಜೀವನ ಆದರ್ಶ ಸಮಾಜಕ್ಕೆ ದಾರಿದೀಪವಾಗಿವೆ ಎಂದರು.ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಉತ್ತಮ ಆರೋಗ್ಯಕ್ಕೆ ಯೋಗ ಪೂರಕ
ಗಜೇಂದ್ರಗಡ: ಪಟ್ಟಣದ ಭಗವಾನ ಮಹಾವೀರ ಜೈನ್ ಆಯುರ್ವೇದಿಕ್ ಕಾಲೇಜು, ಆಸ್ಪತ್ರೆ ಹಾಗೂ ಸ್ನಾತಕೋತ್ತರ ಕೇಂದ್ರದ ವತಿಯಿಂದ ಇಲ್ಲಿನ ಜೋಡು ರಸ್ತೆಯ ಬಾಗಮಾರ ಜವಳಿ ಅಂಗಡಿ ಮುಂಭಾಗದಲ್ಲಿ ಭಾನುವಾರ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷ ಅಶೋಕಕುಮಾರ ಬಾಗಮಾರ ಮಾತನಾಡಿ, ಯೋಗ ಎಂಬುದು ಮಾನಸಿಕ, ದೈಹಿಕ ಆರೋಗ್ಯ ಕಾಪಾಡುವ ಅಭ್ಯಾಸವಾಗಿದೆ. ಹೀಗಾಗಿ ಸರ್ಕಾರಗಳು ದೇಶದ ಪರಂಪರೆಯಾಗಿರುವ ಯೋಗದ ಪ್ರಯೋಜನವನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶ ಹಾಗೂ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಹಾಗೂ ನೆಮ್ಮದಿಯ ಜೀವನವನ್ನು ಕಟ್ಟಿಕೊಳ್ಳಬೇಕು ಎಂದರು.ಯೋಗ ತರಬೇತುದಾರರಾದ ಪ್ರಕಾಶ ಬಾಕಳೆ, ಬಸನಗೌಡ ಪಾಟೀಲ, ಮಾರ್ಗದರ್ಶನದಲ್ಲಿ ಸಾರ್ವಜನಿಕವಾಗಿ ನಡೆದ ಯೋಗಾಭ್ಯಾಸದಲ್ಲಿ ಅಜೀತ ಬಾಗಮಾರ, ಡಾ. ಎನ್.ಎಚ್. ಕುಲಕರ್ಣಿ ಸೇರಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.