ಕಂಪ್ಲಿ: ಅಕ್ಕಮಹಾದೇವಿ ಅಪ್ರತಿಮ ವಚನಕಾರ್ತಿಯಾಗಿದ್ದು, ಅವರ ವಚನಗಳಲ್ಲಿ ಭಕ್ತಿ, ಜ್ಞಾನ, ಸಮಾಜಮುಖಿ ಚಿಂತನೆಗಳು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ ಎಂದು ಕುರುಗೋಡಿನ ಕೊಟ್ಟೂರುಸ್ವಾಮಿ ಶಾಖಾ ವಿರಕ್ತಮಠದ ಜಗದ್ಗುರು ಪ್ರಭು ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಅಕ್ಕಮಹಾದೇವಿಯವರ ಜೀವನವೇ ಒಂದು ಆದರ್ಶವಾಗಿದೆ. ಅವರಿಗೆ ದೊರೆತ ಅಧಿಕಾರ, ಐಶ್ವರ್ಯ ಹಾಗೂ ಸೌಕರ್ಯಗಳನ್ನು ತ್ಯಜಿಸಿ, ಆತ್ಮೋದ್ಧಾರಕ್ಕಾಗಿ ಚೆನ್ನಮಲ್ಲಿಕಾರ್ಜುನನನ್ನು ಪತಿಯಾಗಿ ಆರಾಧಿಸಿದ ಅವರ ನಿಷ್ಠೆ ಮತ್ತು ಭಕ್ತಿ ಅಪೂರ್ವವಾಗಿದೆ. ಈ ಮೂಲಕ ಅವರು ಭಕ್ತಿಯ ಶ್ರೇಷ್ಠತೆಯನ್ನು ಲೋಕಕ್ಕೆ ಪರಿಚಯಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹತ್ತು ಮಹಿಳಾ ಸಾಧಕಿಯರಿಗೆ ಅಕ್ಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಸಂಗೀತ ವಿದ್ಯಾರ್ಥಿನಿ ಕೆ.ಎಂ. ಶ್ರೀರಕ್ಷಾ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಹೊಸಪೇಟೆಯ ಶಿಕ್ಷಕಿ ವಿದ್ಯಾಶ್ರೀ ಹಿರೇಮಠ ವಿಶೇಷ ಉಪನ್ಯಾಸ ನೀಡಿ ಅಕ್ಕಮಹಾದೇವಿಯ ಜೀವನ ಮತ್ತು ಸಂದೇಶಗಳ ಕುರಿತು ವಿಶ್ಲೇಷಣಾತ್ಮಕವಾಗಿ ಮಾತನಾಡಿದರು.ಕಾರ್ಯಕ್ರಮಕ್ಕೆ ವೀರಶೈವ ಸಂಘದ ತಾಲೂಕು ಅಧ್ಯಕ್ಷ ಎಸ್.ಎಂ. ನಾಗರಾಜ ಚಾಲನೆ ನೀಡಿದರು. ಅಕ್ಕಮಹಾದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಡಾ.ಶಾರದಾ ಜಗನ್ನಾಥ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಕೆ.ಎಂ. ಹೇಮಯ್ಯಸ್ವಾಮಿ, ವಾಲಿ ಕೊಟ್ರಪ್ಪ, ಪಿ.ಮೂಕಯ್ಯಸ್ವಾಮಿ, ಎಚ್.ಜಗದೀಶ, ಗೊಗ್ಗ ಚನ್ನಬಸವರಾಜ, ಕಲ್ಗುಡಿ ವಿಶ್ವನಾಥ, ಎಸ್.ಎಸ್.ಎಂ. ಚನ್ನಬಸವರಾಜ, ಎಂ.ಎಸ್. ಶಶಿಧರಸ್ವಾಮಿ ಸೇರಿದಂತೆ ಮಹಿಳಾ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.