ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ
ಸಮಾಜಕ್ಕೆ ಹಿರಿಯರ ಮಾರ್ಗದರ್ಶನ ನಿರಂತರವಾಗಿ ಇದ್ದರೆ ಸಮಾಜವು ಸುಸ್ಥಿರವಾಗಿ ಇರಲು ಸಾಧ್ಯ. ಈ ನಿಟ್ಟಿನಲ್ಲಿ ಸಮಾಜವು ಹಿರಿಯರನ್ನು ಗೌರವದಿಂದ ಕಾಣುವಂತಾಗಬೇಕೆಂದು ಸಿವ್ಹಿಲ್ ನ್ಯಾಯಾಧೀಶ ಅಮಿತ ಘಟ್ಟಿ ಹೇಳಿದರು.ಪಟ್ಟಣದ ಕಾಳಿಕಾದೇವಿದ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಸೇವಾ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ಹಿರಿಯರಿಂದ ಅನೇಕ ವಿಷಯಗಳನ್ನು ಕಲಿತುಕೊಂಡು ಜೀವನವನ್ನು ಸನ್ಮಾರ್ಗದಲ್ಲಿ ನಡೆಯುವಂತೆ ರೂಪಿಸಿಕೊಂಡಿದ್ದೇವೆ. ಹಿರಿಯರು ತಮ್ಮ ಕುಟುಂಬದ ಎಲ್ಲ ಸದಸ್ಯರನ್ನು ಚನ್ನಾಗಿ ಬೆಳೆಸುವಲ್ಲಿ ತಮ್ಮ ಜೀವನ ತ್ಯಾಗ ಮಾಡುವದನ್ನು ಕಾಣುತ್ತೇವೆ. ಇಂದು ಕುಟುಂಬ ವ್ಯವಸ್ಥೆಯಲ್ಲಿ ಹಿರಿಯರನ್ನು ತಾತ್ಸಾರ ಭಾವದಿಂದ ಕಾಣುವಂತಾಗಿರುವದು ವಿಷಾದಕರ ಸಂಗತಿ. ಇಂದಿನ ಜನಾಂಗಕ್ಕೆ ಹಿರಿಯರನ್ನು ಗೌರವಿಸುವ ಭಾವನೆ ಬೆಳೆಯುವಂತೆ ಮಾಡಬೇಕಿದೆ. ಹಿರಿಯರಿಗೆ ಯಾವುದೇ ರೀತಿಯ ದೌರ್ಜನ್ಯವಾಗದಂತೆ ನೋಡಿಕೊಳ್ಳಲು ಹಿರಿಯರ ಕಾಯ್ದೆ ಜಾರಿಗೆ ಬಂದಿದೆ. ಒಂದು ವೇಳೆ ಯಾವುದೇ ಹಿರಿಯರ ಮೇಲೆ ದೌರ್ಜನ್ಯ, ಅಗೌರವದಿಂದ ಕಾಣುತ್ತಿದ್ದರೆ, ಈ ಕಾಯ್ದೆಯ ಸದುಪಯೋಗವನ್ನು ಹಿರಿಯರು ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.ಹೆಚ್ಚುವರಿ ನ್ಯಾಯಾಧೀಶ ಈರಪ್ಪ ಢವಳೇಶ್ವರ ಮಾತನಾಡಿ, 60 ವರ್ಷದ ದಾಟಿದವರನ್ನು ಹಿರಿಯರು ಎಂದು ಪರಿಗಣಿಸಲಾಗುತ್ತದೆ. ಎಲ್ಲ ವರ್ಗದ ಹಿರಿಯರಿಗೆ ನೆರವಾಗುವ ಉದ್ದೇಶದಿಂದ ಹಿರಿಯರ ಕಾಯ್ದೆ ಜಾರಿಗೆ ಬಂದಿದೆ. ರೈತರಿಗೆ ಈ ಕಾಯ್ದೆ ಬಗ್ಗೆ ಅಷ್ಟಾಗಿ ತಿಳುವಳಿಕೆ ಇಲ್ಲ. ಹಿರಿಯ ನಾಗರಿಕರ ಸೇವಾ ವೇದಿಕೆಯು ಹಿರಿಯರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನೆರವಾಗುವಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಸಂಘಟನೆಯಲ್ಲಿ ಶಕ್ತಿ ಇರುತ್ತದೆ. ಹಿರಿಯರ ಬಗೆಹರಿಯರ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಈ ವೇದಿಕೆಯು ಆರಂಭವಾಗಿದ್ದು ಶ್ಲಾಘನೀಯ. ಸರ್ಕಾರವು ಹಿರಿಯರಿಗೆ ಸೌಲಭ್ಯ ಒದಗಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬರೂ ಹಿರಿಯರನ್ನು ಗೌರವದಿಂದ ಕಾಣಬೇಕು. ವೇದಿಕೆಯು ಹಿರಿಯ ನಾಗರಿಕರ ಸ್ವಾತಂತ್ರ್ಯದಿಂದ ಬದುಕು ನಡೆಸಲು ಪೂರಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಮಾತನಾಡಿ, ಸಮಾಜದಲ್ಲಿ ಎಲ್ಲಕ್ಕಿಂತಲೂ ಗುರು-ಹಿರಿಯರು ದೊಡ್ಡವರು. ಸಂಘಟನೆ ತಾವು ಸಮಾಜದಲ್ಲಿ ಬೆಳೆಯುವಂತೆ ಮಾಡಿಕೊಳ್ಳದೇ ಸಮಾಜದಲ್ಲಿ ಬದಲಾವಣೆ ಮಾಡಲು ಇದ್ದರೆ ಸಂಘಟನೆ ಸಾರ್ಥಕವಾಗುತ್ತದೆ. ಹಿಂದೆ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಹಿರಿಯರನ್ನು ಗೌರವದಿಂದ ಕಾಣುತ್ತಿದ್ದರು. ಇಂದು ನಾವು ನೋಡುವ ದೃಷ್ಟಿಕೋನ ಬದಲಾಗಿದೆ. ನಾವು ಒಳ್ಳೆಯ ದೃಷ್ಟಿಕೋನದಿಂದ ನೋಡುವಂತಾದರೆ ಸಮಾಜದ ಸೃಷ್ಟಿಯು ಬದಲಾಗುತ್ತದೆ. ಹಿರಿಯರಾದವರ ಮನಸ್ಸು ಸ್ಥಿತಿಯು ಇಂದು ಬದಲಾಗಬೇಕಿದೆ. ತಮ್ಮ ಮಕ್ಕಳಿಗೆ ಚಿಕ್ಕವರು ಇದ್ದಾಗಲೇ ಸಾಮಾಜಿಕ ಜವಾಬ್ದಾರಿ ಕಲಿಸಬೇಕು. ನಾವು ಒಣ ಪ್ರತಿಷ್ಠೆಗೆ ಬಿದ್ದರೆ ನಮ್ಮನ್ನು ಹಾಳುಮಾಡುತ್ತದೆ. ನಮ್ಮ ಜವಾಬ್ದಾರಿಗಳನ್ನು ಸೂಕ್ಷ್ಮವಾಗಿ ಬಳಸಬೇಕಿದೆ ಎಂದರು.ಹಿರಿಯ ನಾಗರಿಕರ ಸೇವಾ ವೇದಿಕೆಯ ಅಧ್ಯಕ್ಷ ಆರ್.ಜಿ.ಅಳ್ಳಗಿ ಮಾತನಾಡಿ, ವೇದಿಕೆಯು ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯ ಮಾಡುವ ಉದ್ದೇಶ ಹೊಂದಿದೆ. ಪ್ರತಿಯೊಬ್ಬ ಹಿರಿಯರು ಸಂತೋಷದ ಜೀವನ ಸಾಗಿಸುವಂತಾಗಬೇಕು. ಹಿರಿಯರಿಗೆ ಅನಾರೋಗ್ಯ ಉಂಟಾಗಿ ಅವರನ್ನು ಯಾರು ನೋಡಿಕೊಳ್ಳದೇ ಇರುವದು ಕಂಡುಬಂದರೆ ಆಗ ವೇದಿಕೆಯು ಅವರ ನೆರವಿಗೆ ಧಾವಿಸಿ ಅವರಿಗೆ ಚಿಕಿತ್ಸೆ ಕೊಡಿಸುವ ಕಾರ್ಯ ಮಾಡಲಿದೆ. ಹಿರಿಯ ನಾಗರಿಕರಿಗೆ ಸೇವೆ ಒದಗಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.ಸಾನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ, ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶಿವನಗೌಡ ಬಿರಾದಾರ, ವಕೀಲ ಬಿ.ಕೆ.ಕಲ್ಲೂರ ಮಾತನಾಡಿದರು. ಅಧ್ಯಕ್ಷತೆಯನ್ನು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕಾಧ್ಯಕ್ಷ ಎಫ್.ಡಿ.ಮೇಟಿ ವಹಿಸಿದ್ದರು. ಸಾಹಿತಿ ಲ.ರು.ಗೊಳಸಂಗಿ ಇತರರು ಇದ್ದರು. ಎಸ್.ಎ.ದೇಗಿನಾಳ ಸ್ವಾಗತಿಸಿದರು. ಎಸ್.ಜಿ.ಮೊಖಾಸಿ ನಿರೂಪಿಸಿದರು. ಎಸ್.ಜೆ.ಹೆಗಡ್ಯಾಳ ವಂದಿಸಿದರು. ಈ ವೇಳೆ 90 ವರ್ಷ ತುಂಬಿದ ಹಿರಿಯರಾದ ಎಫ್.ಡಿ.ಮೇಟಿ, ಎಸ್.ಎಸ್.ಡೋಣೂರ, ಎಲ್.ಎನ್.ನಾಯ್ಕೋಡಿ, ಸೋಮಪ್ಪ ಸಜ್ಜನ, ವೈ.ಎಸ್.ಮನಗೂಳಿ, ಡಿ.ಎಂ.ಗಿಡ್ಡಪ್ಪಗೋಳ, ವೈ.ಎಂ.ಬೂದಿಹಾಳ, ಕೆ.ವೈ.ದೇಶಪಾಂಡೆ, ಶಿವರಾಜ ರಾಯಗೊಂಡ ಅವರನ್ನು ಸನ್ಮಾನಿಸಿದರು.