ಪ್ರತಿಭಾ ಪುರಸ್ಕಾರ, ಲೇಖನ ಸಾಮಾಗ್ರಿ, ನೋಟ್ ಬುಕ್, ಸಮಾಜಕ್ಕೆ ಆರ್ಥಿಕ ಸಹಾಯಧನ ವಿತರಣೆ
ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಸವಿತಾ ಸಮಾಜದ ಬಂಧುಗಳು ಪ್ರಗತಿ ಸಾಧಿಸಲು ಮೊದಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು. ನಗರದ ನೆಹರು ರಸ್ತೆ ಸಮೀಪ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ಶ್ರೀ ಸವಿತಾ ಸಮಾಜ ಟ್ರಸ್ಟ್ ಹಮ್ಮಿಕೊಂಡಿದ್ಧ ಪ್ರತಿಭಾ ಪುರಸ್ಕಾರ, ಲೇಖನ ಸಾಮಾಗ್ರಿ, ನೋಟ್‌ಬುಕ್ ವಿತರಣೆ ಹಾಗೂ ಸಮಾಜಕ್ಕೆ ಆರ್ಥಿಕ ಸಹಾಯ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚೆಗೆ ಸಮಾಜದ ಹಲವಾರು ಮಂದಿ ಸರ್ಕಾರಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಲು ಅಂಬೇಡ್ಕರ್ ನೀಡಿದಂತಹ ಶಿಕ್ಷಣವೇ ಮೂಲ ಕಾರಣ. ಇನ್ನೂ ಕೆಲವೆಡೆ ಸಮಾಜ ಬಲಿಷ್ಟಗೊಳ್ಳುವ ಅಗತ್ಯ ವಿರುವ ಹಿನ್ನೆಲೆಯಲ್ಲಿ ವಿದ್ಯೆ ಎಂಬ ಹಸಿವು ಬೆಳೆಸಿಕೊಂಡು, ಕಲಿಕೆಯೆಂಬ ಆಹಾರ ಸೇವಿಸಿ ಸದೃಢರಾಗಬೇಕು ಎಂದು ಕಿವಿಮಾತು ಹೇಳಿದರು.
ಸಮಾಜದ ಬಂಧುಗಳು ಅಪ್ಪ ಹಾಕಿದ ಆಲದ ಮರಕ್ಕೆ ಜೋತುಬೀಳದೇ ಐಎಎಸ್, ಐಪಿಎಸ್ ಅಥವಾ ಉನ್ನತ ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿದರೆ ಸಮಾಜದ ಅಭಿವೃದ್ಧಿಗೂ ಶ್ರಮಿಸಬಹುದು. ಸಮಾಜದ ಕೆಲವರು ಆರ್ಥಿಕ ಸದೃಢರಾದವರು ಟ್ರಸ್ಟ್‌ಗೆ ಸಹಾಯಧನ ಒದಗಿಸಿದರೆ ಜನಾಂಗ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಮುಂದಿನ ಸಾಲಿನಲ್ಲೂ ಪುರಸ್ಕಾರ ಗಳಿಸುವಷ್ಟು ವಿದ್ಯಾಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಈ ಕಾರ್ಯಕ್ರಮಕ್ಕ ನೈತಿಕವಾಗಿ ಅರ್ಥ ಬರಲಿದೆ. ಸಮಾಜದಲ್ಲಿ ಶಿಕ್ಷಣವೇ ದೊಡ್ಡ ಆಸ್ತಿ. ಕಲಿತಷ್ಟು ಮುಗಿಲೆ ತ್ತರಕ್ಕೆ ಬೆಳೆಯಲು ಸಾಧ್ಯ. ಹೀಗಾಗಿ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.ಸಮಾಜದ ಮುಖಂಡ, ದಾನಿ ಎಂ.ಎಸ್.ಉಮೇಶ್‌ಕುಮಾರ್ ಮಾತನಾಡಿ, ಸಮಾಜದಲ್ಲಿ ಕೆಲವೆಡೆ ಹಿಂದುಳಿದ ವರ್ಗವನ್ನು ಜಾತಿ ವ್ಯವಸ್ಥೆಯಡಿ ಕೀಳಾಗಿ ಕಾಣುವ ಮೂಲಕ ಅವಮಾನಿಸಲಾಗುತ್ತಿದೆ. ಇದನ್ನು ಮೆಟ್ಟಿನಿಲ್ಲಲು ಶಿಕ್ಷಣ ಎಂಬ ಅಸ್ತ್ರವನ್ನು ಸಂಪೂರ್ಣವಾಗಿ ಕರಗತ ಮಾಡಿಕೊಂಡರೆ ಅವಮಾನಿಸುವವರ ಎದುರು ಸದೃಢವಾಗಿ ನಿಲ್ಲಬಹುದು ಎಂದು ತಿಳಿಸಿದರು.