ಸೋಲಾರ್‌ ವಿದ್ಯುತ್‌ ಪಂಪ್‌ಸೆಟ್‌ ಅಳವಡಿಕೆಗೆ ಮುಂದಾಗಿ

KannadaprabhaNewsNetwork |  
Published : Jul 25, 2026, 02:15 AM IST
24ಕೆಕೆಆರ್8:ಕೊಪ್ಪಳ ತಾಲೂಕಿನ ನೆಲೋಗಿಪುರ (ಭೈರಾಪುರ) ಗ್ರಾಮದಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆ ಹಾಗೂ ಮುಂಡರಗಿ-ಬೆಟಗೇರಿ ಎಸ್‌ಸಿ ಲೈನ್‌ನಿಂದ ನೆಲೋಗಿಪುರ ಉಪಕೇಂದ್ರಕ್ಕೆ 6 ಕಿ.ಮೀ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿದರು | Kannada Prabha

ಸಾರಾಂಶ

ರೈತರು ಸೌರಶಕ್ತಿ ಯೋಜನೆಗಳ ಬಗ್ಗೆಯೂ ಗಮನ ಹರಿಸಬೇಕು

ಕೊಪ್ಪಳ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಕುಸುಮ್-ಬಿ ಯೋಜನೆಯಡಿ ರೈತರು ಸೋಲಾರ್ ವಿದ್ಯುತ್ ಪಂಪ್‌ಸೆಟ್‌ ಅಳವಡಿಸಿಕೊಳ್ಳಲು ಮುಂದಾಗಬೇಕೆಂದು ಸಂಸದ ಕೆ.ರಾಜಶೇಖರ ಹಿಟ್ನಾಳ ಹೇಳಿದರು.

ತಾಲೂಕಿನ ನೆಲೋಗಿಪುರ (ಭೈರಾಪುರ) ಗ್ರಾಮದಲ್ಲಿ ಜು.24ರಂದು ₹27.46 ಕೋಟಿ ಅಂದಾಜು ವೆಚ್ಚದಲ್ಲಿ ನೂತನ 2x20ಎಂವಿಎ, 110/11ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪನೆ ಹಾಗೂ ಮುಂಡರಗಿ-ಬೆಟಗೇರಿ ಎಸ್‌ಸಿ ಲೈನ್‌ನಿಂದ ನೆಲೋಗಿಪುರ ಉಪಕೇಂದ್ರಕ್ಕೆ 6 ಕಿಮೀ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ರೈತರು ಸೌರಶಕ್ತಿ ಯೋಜನೆಗಳ ಬಗ್ಗೆಯೂ ಗಮನ ಹರಿಸಬೇಕು.ಕುಸುಮ್-ಬಿ ಯೋಜನೆಯಡಿ ರೈತರಿಗೆ 90% ಸಹಾಯಧನ ಸಿಗುತ್ತಿದ್ದು, ಅದನ್ನು ಸದ್ಭಳಕೆ ಮಾಡಿಕೊಂಡು ತಮ್ಮ ಹೊಲಗಳ ಬೋರ್‌ವೆಲ್‌ಗಳಿಗೆ ಸೋಲಾರ್ ಪಂಪ್‌ಸೆಟ್‌ ಅಳವಡಿಸಿಕೊಂಡು ಹಗಲು ವೇಳೆಯಲ್ಲೇ ಕೃಷಿಗೆ ನೀರುಣಿಸಬಹುದು‌ ಎಂದರು.

ರೈತರು ಆರ್ಥಿಕವಾಗಿ ಸಬಲರಾಗಲು ಮತ್ತು ಕೃಷಿ ಚಟುವಟಿಕೆಗಳಿಗೆ ನಿರಂತರ ವಿದ್ಯುತ್ ಪೂರೈಕೆ ಅತ್ಯಗತ್ಯ. ಈ ಭಾಗದಲ್ಲಿ ನೀರಾವರಿ ಯೋಜನೆಗಳಿಲ್ಲದೆ ರೈತರು ಸಂಪೂರ್ಣವಾಗಿ ಬೋರ್‌ವೆಲ್‌ಗಳ ಮೇಲೆಯೇ ಅವಲಂಬಿತರಾಗಿದ್ದಾರೆ. ಅವರಿಗೆ ಸೂಕ್ತ ಟ್ರಾನ್ಸ್‌ಫಾರ್ಮರ್ ಹಾಗೂ ವಿದ್ಯುತ್ ಮಾರ್ಗಗಳ ಅಗತ್ಯವಿದೆ. 2013 ರ ಅವಧಿಯಲ್ಲಿ ಕೊಪ್ಪಳ ತಾಲೂಕಿನಲ್ಲಿ ತಾಲೂಕುವಾರು 7 ನೂತನ ಉಪಕೇಂದ್ರ ಮಂಜೂರು ಮಾಡಿಸಲಾಗಿತ್ತು. ಜಾಗದ ಅಭಾವದ ನಡುವೆಯೂ ನೆಲೋಗಿಪುರ ಗ್ರಾಮದಲ್ಲಿ ಸರ್ಕಾರಿ ಜಾಗ ಗುರುತಿಸಿ, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಇದೀಗ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನೂತನ ಉಪಕೇಂದ್ರ ಸ್ಥಾಪನೆಯಿಂದ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಮತ್ತು ಸಾರ್ವಜನಿಕರಿಗೆ ಕಡಿಮೆ ವೋಲ್ಟೇಜ್ ಹಾಗೂ ವಿದ್ಯುತ್ ಏರಿಳಿತದ ಸಮಸ್ಯೆ ಬಗೆಹರಿಯಲಿದೆ. ಉಪಕೇಂದ್ರದಿಂದ 15 ಕಿಮೀ ವ್ಯಾಪ್ತಿಯಲ್ಲಿ ಸಮರ್ಪಕ ವೋಲ್ಟೇಜ್ ದೊರೆಯಲಿದೆ.

ರಸ್ತೆ ಅಭಿವೃದ್ಧಿ:ಕೆಸಿಡಬ್ಲ್ಯೂಡಿ ಯೋಜನೆಯಡಿ ₹230 ಕೋಟಿ ವೆಚ್ಚದಲ್ಲಿ ಗಿಣಿಗೇರಿಯಿಂದ ಮುಂಡರಗಿವರೆಗಿನ ರಸ್ತೆ ಸುಧಾರಣೆ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಭಾರತಮಾಲಾ-2 ಯೋಜನೆಯಡಿ ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಈ ಭಾಗದಲ್ಲಿ ಹಾದು ಹೋಗಲಿದ್ದು, ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ನೆಲೋಗಿಪುರ ಹಳ್ಳದ ಸೇತುವೆ ನಿರ್ಮಾಣ ಸೇರಿದಂತೆ ಈ ಭಾಗದ ಮೂಲಸೌಕರ್ಯಗಳ ಕೊರತೆ ಶಾಸಕರೊಂದಿಗೆ ಚರ್ಚಿಸಿ ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಮಾಜಿ ಸಂಸದ ಕರಡಿ ಸಂಗಣ್ಣ ಮಾತನಾಡಿ, ದೇಶದಲ್ಲಿ ಶೇ.70ರಷ್ಟು ಜನರು ಭೂಮಿ ತಾಯಿಯನ್ನೇ ನಂಬಿ ಬದುಕುತ್ತಿದ್ದಾರೆ. ಈ ಭಾಗದಲ್ಲಿ ವಿದ್ಯುತ್ ಅಭಾವ, ಲೋ ವೋಲ್ಟೇಜ್ ಹಾಗೂ ವಿದ್ಯುತ್ ವ್ಯತ್ಯಯದಿಂದ ರೈತರ ಐಪಿ ಸೆಟ್ ಪಂಪ್‌ ಸುಟ್ಟುಹೋಗಿ, ಮರು ಜೋಡಣೆಗಾಗಿ ರೈತರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದರು. ಶಾಸಕ ರಾಘವೇಂದ್ರ ಹಿಟ್ನಾಳ್ ತಾಲೂಕಿನಲ್ಲಿ ಭವಿಷ್ಯದ ಪರಿಕಲ್ಪನೆಯೊಂದಿಗೆ ಆರು ವಿದ್ಯುತ್ ಉಪಕೇಂದ್ರ ತಂದಿದ್ದಾರೆ. ಆ ಮೂಲಕ ರೈತರ ವಿದ್ಯುತ್ ಸಮಸ್ಯೆಗೆ ಮುಕ್ತಿ ನೀಡುವ ಕೆಲಸ ಮಾಡಿದ್ದಾರೆ ಎಂದರು.

ಕೆಪಿಟಿಸಿಎಲ್ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ ಪ್ರಸಾದಬಾಬು ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರಕಾರಿ ಆಸ್ಪತ್ರೆ ಸಮಸ್ಯೆ ಬಗೆಹರಿಸುವಂತೆ ಆರೋಗ್ಯ ಸಚಿವರಿಗೆ ಮನವಿ
ಬಿಸಿಯೂಟ ಅನುದಾನ ಹೆಚ್ಚಳಕ್ಕೆ ಮನವಿ