ಸರ್ಕಾರಿ ಗೌರವದೊಂದಿಗೆ ಯೋಧ ಶ್ರೀಶೈಲ ಅಂತ್ಯಕ್ರಿಯೆ

KannadaprabhaNewsNetwork | Published : Apr 20, 2025 1:48 AM

ಸಾರಾಂಶ

ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಬಸ್ ನಿಲ್ದಾಣ ಮುಂಭಾಗ ದೆಹಲಿಯಲ್ಲಿ ಗುರುವಾರ ಹೃದಯಾಘಾತದಿಂದ ಮರಣ ಹೊಂದಿದ್ದ ಯೋಧ ಶ್ರೀಶೈಲ ಯಮನಪ್ಪ ಹಿರೋಡಗಿ (೫೪) ಅವರ ಅಂತ್ಯಕ್ರಿಯೆ ಶುಕ್ರವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ತಾಲೂಕಿನ ಉಕ್ಕಲಿ ಗ್ರಾಮದ ಬಸ್ ನಿಲ್ದಾಣ ಮುಂಭಾಗ ದೆಹಲಿಯಲ್ಲಿ ಗುರುವಾರ ಹೃದಯಾಘಾತದಿಂದ ಮರಣ ಹೊಂದಿದ್ದ ಯೋಧ ಶ್ರೀಶೈಲ ಯಮನಪ್ಪ ಹಿರೋಡಗಿ (೫೪) ಅವರ ಅಂತ್ಯಕ್ರಿಯೆ ಶುಕ್ರವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ, ಆಪ್ತರ, ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಯೋಧನ ಪಾರ್ಥಿವ ಶರೀರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೆರವೇರಿತು. ಮೆರವಣಿಗೆಯುದ್ದಕ್ಕೂ ದೇಶದ ಭಾವುಟ ರಾರಾಜಿಸಿದವು. ದೇಶಭಕ್ತಿಗೀತೆಗಳು ಮೊಳಗಿದವು. ಗ್ರಾಮದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

೧೯೯೦ರ ಡಿಸೆಂಬರ್‌ ೧೨ ರಂದು ತಮ್ಮ ೧೯ನೇ ವಯಸ್ಸಿನಲ್ಲಿ ಸಿಆರ್‌ಪಿಎಫ್ ಸೇನೆಗೆ ಸೇರ್ಪಡೆಗೊಂಡಿದ್ದ ಯೋಧ ಶ್ರೀಶೈಲ ಹಿರೋಡಗಿ ಅವರು ಹೈದರಾಬಾದ, ಜಮ್ಮು ಮತ್ತು ಕಾಶ್ಮೀರ, ಪಂಜಾಬ, ಆಸ್ಸಾಂ, ತ್ರಿಪುರ, ಮಣಿಪುರದಲ್ಲಿ ಕಳೆದ ೩೪ ವರ್ಷದಿಂದ ಸಿಆರ್‌ಪಿಎಫ್‌ನ ಎಸ್‌ಐ ,ಕ್ವಾಟರ್ ಮಾಸ್ಟರ್‌ಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಧ್ಯ ದೆಹಲಿಯಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಕರ್ತವ್ಯದ ಸಮಯದಲ್ಲಿ ಹೃದಯಾಘಾತದಿಂದ ಯೋಧ ಶ್ರೀಶೈಲ ಹಿರೋಡಗಿ ಅವರು ಗುರುವಾರ ವೀರಮರಣ ಹೊಂದಿದ್ದಾರೆ. ಮೃತ ಯೋಧನಿಗೆ ಪತ್ನಿ, ಇಬ್ಬರು ಪುತ್ರರು, ಒರ್ವ ಪುತ್ರಿ, ಮೂವರು ಸಹೋದರರು, ಓರ್ವ ಸಹೋದರಿ ಇದ್ದಾರೆ.

ಸಚಿವ ಶಿವಾನಂದ ಪಾಟೀಲ ಮೃತ ಯೋಧನ ಪಾರ್ಥಿವ ಶರೀರಕ್ಕೆ ಮಾಲಾರ್ಪಣೆ ಮಾಡಿ ಅಂತಿಮ ನಮನ ಸಲ್ಲಿಸಿ ಗೌರವ ಸಲ್ಲಿಸಿದರು. ನಂತರ ಜರುಗಿದ ಸರ್ಕಾರಿ ಗೌರವ ಕಾರ್ಯಕ್ರಮ, ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ಅನೇಕ ಅಧಿಕಾರಿಗಳು, ಮುಖಂಡರು, ಜನರು ಮೃತ ಯೋಧನ ಅಂತಿಮ ದರ್ಶನ ಪಡೆದುಕೊಂಡರು. ಯೋಧನ ಅಂತಿಮ ಸಂಸ್ಕಾರದಲ್ಲಿ ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ, ತಾಪಂ ಇಒ ಪ್ರಕಾಶ ದೇಸಾಯಿ, ಮನಗೂಳಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಸ್.ಐ.ರೇವೂರಕರ, ಮನಗೂಳಿ ಪಿಎಸೈ ಶ್ರೀಕಾಂತ ಕಾಂಬಳೆ, ಉಕ್ಕಲಿ ಗ್ರಾಮ ಪಂಚಾಯತಿ ಅಧ್ಯಕ್ಷ ನಿಂಗೊಂಡ ಸಿಂದಗಿ, ಮನಗೂಳಿ ಪಪಂ ಅಧ್ಯಕ್ಷ ಡಾ.ಎಂ.ಡಿ.ಮೇತ್ರಿ, ಸಚಿವರ ಸಹೋದರ ಶಿವಶರಣಗೌಡ ಪಾಟೀಲ, ಸಚಿವರ ಪತ್ನಿ ಭಾಗ್ಯಶ್ರೀ ಪಾಟೀಲ, ಮುಖಂಡರಾದ ಎ.ಎಂ.ಪಾಟೀಲ, ಚಂದ್ರಶೇಖರಗೌಡ ಪಾಟೀಲ, ವಿಶ್ವನಾಥಗೌಡ ಪಾಟೀಲ, ಉಮೇಶ ಕಾರಜೋಳ, ರಾಹುಲ ಕಲಗೊಂಡ, ಸಿದ್ರಾಮ ಕಾಖಂಡಕಿ, ಬಸವನಬಾಗೇವಾಡಿ ತಾಲೂಕಿನ ಮಾಜಿ ಯೋಧರ ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಬಾಕ್ಸ್.... ಸಚಿವ ಶಿವಾನಂದ ಪಾಟೀಲ ಸಂತಾಪ

ಗಡಿಭದ್ರತಾ ಪಡೆಯ ಯೋಧ ತಾಲೂಕಿನ ಉಕ್ಕಲಿ ಗ್ರಾಮದ ಶ್ರೀಶೈಲ ಯಮನಪ್ಪ ಹಿರೋಡಗಿ ಅವರ ನಿಧನಕ್ಕೆ ಸಚಿವ ಶಿವಾನಂದ ಪಾಟೀಲರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಕರ್ತವ್ಯನಿರತರಾದ ವೇಳೆಯಲ್ಲಿ ಯೋಧ ಹೃದಯಾಘಾತದಿಂದ ನಿಧನರಾಗಿದ್ದು ನೋವಿನ ಸಂಗತಿ. ಅವರ ಸಾವು ತೀವ್ರ ನೋವನ್ನುಂಟು ಮಾಡಿದೆ. ಮೃತ ಯೋಧನ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಭಗವಂತ ನೀಡಲಿ. ಮೃತ ಯೋಧನ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲೆಂದು ಸಚಿವ ಶಿವಾನಂದ ಪಾಟೀಲ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Share this article