ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಶಾಸಕರ ಕಚೇರಿಯಲ್ಲಿ ಶುಕ್ರವಾರ ನಾಗರಿಕ ಹಿತರಕ್ಷಣಾ ವೇದಿಕೆಯ ಒಕ್ಕೂಟದ ದೂರಿನ ಹಿನ್ನೆಲೆ ಮಹಾನಗರಪಾಲಿಕೆ, ಮೆಸ್ಕಾಂ, ಸ್ಮಾರ್ಟ್‌ಸಿಟಿ, ಪಿಡಬ್ಲ್ಯೂಡಿ, ಒಳಚರಂಡಿ, ಕುಡಿಯುವ ನೀರಿನ ಸರಬರಾಜು ಮೊದಲಾದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಯುಜಿ ಕೇಬಲ್ ಕಾಮಗಾರಿಗೆ ಸಂಬಂಧಿಸಿದ ಇನ್ನೂ 849 ವಿದ್ಯುತ್ ಕಂಬಗಳನ್ನು ತೆಗೆಯುವುದು ಬಾಕಿಯಿದ್ದು, ಇನ್ನು ನಾಲ್ಕು ತಿಂಗಳಲ್ಲಿ ಕಾಮಗಾರಿ ಮುಗಿಸಲಾಗುವುದು. ಈ ಕುರಿತಂತೆ ಎಸ್ಟಿಮೇಟ್ ಆಗಿದೆ. ಭೂಮಿ ಅಗೆದರೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತದೆ. ಈ ಹಿನ್ನಲೆಯಲ್ಲಿ ಆ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಸ್ಮಾರ್ಟ್‌ಸಿಟಿ ಮತ್ತು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.
ನಾವು ಇನ್ನೂ ಸಮಯ ಕೊಡಲಾಗುವುದಿಲ್ಲ. ಗುತ್ತಿಗೆದಾರರನ್ನು ಜವಾಬ್ದಾರರನ್ನಾಗಿ ಮಾಡಿ. ಮಳೆಗಾಲ ಆರಂಭವಾಗುತ್ತಿದೆ. ಅಷ್ಟರೊಳಗೆ ಕಾಮಗಾರಿ ಮುಗಿಸಿ ಎಂದು ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತ್‌ಕುಮಾರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಆರು ಹೊಸ ಬಡಾವಣೆಗಳಲ್ಲಿ ಐದು ಕೋಟಿ ರುಪಾಯಿ ವೆಚ್ಚದಲ್ಲಿ ಯು.ಜಿ. ಕೇಬಲ್ ಅಳವಡಿಸಬೇಕಾಗಿತ್ತು. ಆದರೆ, ಅದು ಅಪೂರ್ಣವಾಗಿದೆ. ಬಸವನಗುಡಿಯಲ್ಲಿ ವಿದ್ಯುತ್ ಕಂಬ, ದೀಪ ಇದೆ, ಆದರೆ ದೀಪ ಹತ್ತುತ್ತಿಲ್ಲ. ತಿಲಕ್‌ನಗರದಲ್ಲಿ ಮರಕ್ಕೆ ಲೈನ್ ಎಳೆದಿದ್ದೀರಿ ಅಲ್ಲಿಯೂ ಕಾಮಗಾರಿ ಅಪೂರ್ಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ಇ-ಶೌಚಾಲಯ ನಿರ್ಮಾಣವಾಗಿ ಮೂರ್‍ನಾಲ್ಕು ವರ್ಷಗಳು ಕಳೆದರೂ ಇನ್ನೂ ಬಳಕೆಗೆ ತೆರೆದುಕೊಂಡಿಲ್ಲ. ಆಗಲೇ ಅವು ದುರಸ್ತಿ ಹಂತಕ್ಕೆ ಬಂದಿದ್ದು ವಿಷಾದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದಾಗ, ಈಗಾಗಲೇ 18 ಇ-ಶೌಚಾಲಯಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 14 ಉಪಯೋಗವಾಗುತ್ತಿವೆ ಎಂದು ಪೌರಾಯುಕ್ತ ಕೆ.ಮಾಯಣ್ಣ ಗೌಡ ಹೇಳಿದರು. ಕೇವಲ ಮಹಿಳೆಯರಿಗಷ್ಟೇ ಅಲ್ಲ ಪುರುಷರಿಗೂ ಉಚಿತ ಟಾಯ್‌ಲೆಟ್ ವ್ಯವಸ್ಥೆಯಾಗಬೇಕು ಎಂದು ಒಕ್ಕೂಟದ ಪದಾಧಿಕಾರಿಗಳು ಆಗ್ರಹಿಸಿದರು.
ಬಿ.ಎಚ್.ರಸ್ತೆಯಲ್ಲಿರುವ ತುಂಗಾನದಿಯ ಹಳೆಯ ಸೇತುವೆ ಇರುವ ಜಾಗದಲ್ಲಿ ಹೊಸಸೇತುವೆ ನಿರ್ಮಾಣಕ್ಕೆ ಈಗಾಗಲೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಜೊತೆ ಚರ್ಚಿಸಿದ್ದು, ಪ್ರಸ್ತಾವನೆ ಸಲ್ಲಿಸುವಂತೆ ಅವರು ತಿಳಿಸಿದ್ದಾರೆ. ಸಧ್ಯದಲ್ಲಿಯೇ ಹಳೆಸೇತುವೆಯ ಜಾಗದಲ್ಲಿ ಹೊಸಸೇತುವೆ ತಲೆ ಎತ್ತಲಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.