ಹರಪನಹಳ್ಳಿ: ಕುಡಿಯುವ ನೀರಿನ ಸಮಸ್ಯೆ ನಿವಾರಿಸಿ ಪ್ರತಿದಿನ ನನಗೆ ಈ ಸಂಬಂಧ ಪೋನ್ ಕರೆ ಬಾರದಂತೆ ನೋಡಿಕೊಳ್ಳಿ...
ವಾಲ್‌ನಿಂದ ನೀರು ಬಿಟ್ಟ ನಂತರ ಬಂದ್ ಮಾಡುವುದೇ ಇಲ್ಲ. ಈ ಕುರಿತು ನೀರುಗಂಟಿಯವರ ಬಗ್ಗೆ ಸಾಕಷ್ಟು ದೂರುಗಳಿವೆ ಎಂದರು. ಪ್ರತಿದಿನ ಬೆಳಿಗ್ಗೆ ನೀರಿನ ಸಮಸ್ಯೆ ಕುರಿತು ಫೋನ್ ಬರುತ್ತವೆ. ನಾನು ಅಲಾರಾಂ ಇಟ್ಟುಕೊಂಡಿಲ್ಲ ಎಂದು ಹಾಸ್ಯಭರಿತವಾಗಿ ನೀರಿನ ಸಮಸ್ಯೆ ನಿವಾರಣೆಗೆ ಸೂಚಿಸಿದರು. ಅಧಿವೇಶನದಲ್ಲಿ ಇದ್ದಾಗಲೂ ನೀರಿನ ಕುರಿತು ದೂರವಾಣಿ ಕರೆ ಬರುತ್ತಿವೆ. ಬೇಸಿಗೆ ಮುಗಿಯುವವರೆಗೂ ನೀವು ಸರಿಯಾಗಿ ಕೆಲಸ ಮಾಡಿದರೆ ನನಗೆ ಕೆಲಸ ಕಡಿಮೆ ಎಂದು ನುಡಿದರು.
ಹುಣಸಿಹಳ್ಳಿಯಲ್ಲಿ ಮಂಜಣ್ಣ ಎಂಬುವವರ ಖಾಸಗಿ ಬೋರ್‌ನಿಂದ ಬಾಡಿಗೆ ಆಧಾರದಲ್ಲಿ ಗ್ರಾಮಕ್ಕೆ ಕುಡಿಯುವ ನೀರು ತೆಗೆದುಕೊಳ್ಳಲು ಇನ್ನೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು ಎಂದು ಅಲ್ಲಿಯ ಪಿಡಿಒ ಹೇಳಿದಾಗ, ಯಾರು ಅವರು ಎಂದು ಶಾಸಕರು ಪ್ರಶ್ನಿಸಿದರು. ಆಗ ಅವರು ಬಿಜೆಪಿಯವರು ಎಂದು ಗೊತ್ತಾಯಿತು. ಆಗ ಶಾಸಕರು ಕುಡಿಯುವ ನೀರು ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್ ಬೇಡ ಎಂದು ಹೇಳಿದರು.ತಾಲೂಕಿನ ಪ್ರತಿ ಗ್ರಾಪಂಗಳ ನೀರಿನ ಸಮಸ್ಯೆ ಕುರಿತು ಪಿಡಿಒಗಳಿಂದ ಮಾಹಿತಿ ಪಡೆದ ಶಾಸಕಿ ಎಂ.ಪಿ.ಲತಾ ಕೂಡಲೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂದು ಸೂಚಿಸಿದರು. ತಾಲೂಕಿನ 14 ಗ್ರಾಪಂಗಳ 20 ಗ್ರಾಮಗಳಲ್ಲಿ 25 ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ ಎಂದು ತಾಪಂ ಇಒ ಚಂದ್ರಶೇಖರ ತಿಳಿಸಿದರು.
ಗ್ರಾಪಂಗಳಿಗೆ ನೇಮಕವಾದ ಕೆಲವೊಂದು ಆಡಳಿತಾಧಿಕಾರಿಗಳು ಸಭೆಗೆ ಗೈರಾಗಿದ್ದಕ್ಕೆ ಅಂತವರಿಗೆ ನೋಟಿಸ್ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಬೇಸಿಗೆ ಆಗಿರುವುದರಿಂದ ಚರಂಡಿಗಳಲ್ಲಿ ನೀರು ಸಂಗ್ರಹವಾಗಿ ಮಲೇರಿಯಾ, ಡೆಂಘೀ, ಚಿಕೂನ್ ಗುನ್ಯಾ ಬರುವ ಸಂಭವವಿದೆ. ಎಲ್ಲ ಪಿಡಿಒಗಳು ಕೂಡಲೇ ಚರಂಡಿಗಳನ್ನು ಸ್ವಚ್ಛತೆಗೊಳಿಸಿ ವಾರಕ್ಕೆ ಎರಡು ದಿನ ಫಾಗಿಂಗ್, ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಎಂದು ತಾಕೀತು ಮಾಡಿದರು. ನಾನು ಯಾವ ಸಮಯದಲ್ಲಾದರೂ ಬರಬಹುದು. ಆಗ ಚರಂಡಿ ಸ್ವಚ್ಛತೆ ಇಲ್ಲದಿದ್ದರೆ ಅಂತಹ ಪಿಡಿಒಗಳು ನಮಗೆ ಬೇಕಾಗಿಲ್ಲ ಎಂದು ಖಡಕ್ ಆಗಿ ಹೇಳಿದರು.
ಕಂದಾಯ ಉಪವಿಭಾಗಾಧಿಕಾರಿ ಸುರೇಶಕುಮಾರ, ತಾಪಂ ಇಒ ಚಂದ್ರಶೇಖರ, ತಹಶೀಲ್ದಾರ ಬಿ.ವಿ. ಗಿರೀಶಬಾಬು ಸೇರಿದಂತೆ ಪಿಡಿಒಗಳು, ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಎಇಇ ಮಂಜನಾಯ್ಕ, ಎಇಇ ಕುಬೇಂದ್ರ ನಾಯ್ಕ, ನರೇಗಾ ಎಡಿ ಸೋಮಶೇಖರ, ಲಕ್ಕಣ್ಣನವರ್, ತೋಟಗಾರಿಕೆಯ ಜಯಸಿಂಹ, ಅಕ್ಷರ ದಾಸೋಹದ ಎಡಿ ನಾಗರಾಜ, ದೈಹಿಕ ಪರಿವೀಕ್ಷಕ ಷಣ್ಮುಖಪ್ಪ ಇದ್ದರು.