ಸೋಮವಾರಪೇಟೆ: ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

KannadaprabhaNewsNetwork |  
Published : Apr 04, 2024, 01:04 AM IST
ಚಿತ್ರ : 3ಎಂಡಿಕೆ2 : ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ನಡೆಯಿತು.  | Kannada Prabha

ಸಾರಾಂಶ

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಸ್ವೀಪ್‌ನ ಅಂಗವಾಗಿ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಿಂದ ಬಿ.ಎಲ್‌.ಒ.ಗಳಿಗೆ ಮಾಹಿತಿ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಸೋಮವಾರಪೇಟೆ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ವತಿಯಿಂದ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಸ್ವೀಪ್‌ನ ಅಂಗವಾಗಿ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಿಂದ ಬಿ.ಎಲ್‌.ಒ.ಗಳಿಗೆ ಮಾಹಿತಿ ನೀಡಲಾಯಿತು.

ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ತಹಸೀಲ್ದಾರ್‌ ನವೀನ್‌ ಕುಮಾರ್‌, ಮತಗಟ್ಟೆ ಅಧಿಕಾರಿಗಳು ಬೂತ್ ಮಟ್ಟದ ಸೈನಿಕರಿದ್ದಂತೆ, ಬೂತ್ ಮಟ್ಟದ ಮತಗಟ್ಟೆಯಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆ ಹಾಗೂ ವಿದ್ಯುತ್ ಸಂಪರ್ಕದ ವ್ಯವಸ್ಥೆ ಹೀಗೆ ಇನ್ನಿತರ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚು ಗಮನಹರಿಸಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.

ಮತದಾನ ಪವಿತ್ರವಾದ ಕಾರ್ಯವಾಗಿದ್ದು, ಜನರಿಗೆ ಧ್ವನಿಯನ್ನು ನೀಡುತ್ತದೆ. ಎಲ್ಲ ಜನಸಾಮಾನ್ಯರೂ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು. ಏ.26 ರಂದು ಜರುಗುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವುದರ ಮೂಲಕ ಸುಭದ್ರ ದೇಶವನ್ನಾಗಿ ನಿರ್ಮಿಸೋಣ. ಮತದಾನ ದಿನದಂದು ನಾವು ಸಮಯ ವ್ಯರ್ಥ ಮಾಡದೆ ಚುನಾವಣೆ ಆಯೋಗ ನಿಗದಿಪಡಿಸಿದ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಮತ ಚಲಾಯಿಸಬೇಕು. ಈ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು ಎಂದರು.

ಯಾರೂ, ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ಖುಷಿಯಿಂದ ಮತ ಚಲಾಯಿಸಬೇಕೆಂದು ಹೇಳಿದರು.

18 ವರ್ಷ ಮೇಲ್ಪಟ್ಟಂತ ಯುವಕರು, ವೃದ್ಧರು, ವಿಕಲಚೇತನ ಮತದಾರರು ನಿರ್ಭೀತಿಯಿಂದ ಏ.26ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿ ಶೇ.100ರಷ್ಟು ಮತದಾನ ಮಾಡಿ ಯೋಗ್ಯ ಹಾಗೂ ಸಮರ್ಥ ನಾಯಕರನ್ನು ಆಯ್ಕೆ ಮಾಡಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ಮಾತನಾಡಿ, ಬಿಎಲ್‌ಒ ಗಳು ಬೂತ್ ಮಟ್ಟದಲ್ಲಿ ಜನರಿಗೆ ಚುನಾವಣೆ ಬಗ್ಗೆ ಜಾಗೃತಿ ಮೂಡಿಸಲು ವಹಿಸಬಹುದಾದ ಕಾರ್ಯವೈಖರಿ ಬಗ್ಗೆ ಮಾತನಾಡಿದರು.

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಸೀ ವಿಸಿಲ್ ಆ್ಯಪ್ ಹೇಗೆ ಬಳಸಬೇಕು, ಅದರ ಬಗ್ಗೆ ಜನರಿಗೆ ಯಾವ ರೀತಿ ಮಾಹಿತಿ ನೀಡಬೇಕು ಎಂಬುವುದರ ಬಗ್ಗೆ ತಿಳಿಸಿದರು. ಮತಗಟ್ಟೆ ಅಧಿಕಾರಿಗಳು ಬೂತ್ ಮಟ್ಟದಲ್ಲಿ ವಹಿಸಬಹುದಾದ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿ ಕೆ.ಪಿ.ಜಯಕುಮಾರ್ ಮಾತನಾಡಿ, ಬೂತ್ ಮಟ್ಟದಲ್ಲಿ ಹಾಡಿನ ಮೂಲಕ ಮತದಾರರಿಗೆ ಜಾಗೃತಿ ಮೂಡಿಸುವುದು ಹೇಗೆ, ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿ ಖಾತರಿ ಪಡಿಸುವುದು. ಇ.ವಿ.ಎಂ ಗಳ ಯಾವ ರೀತಿ ಬಳಸಬೇಕು ಎಂಬುದರ ಬಗ್ಗೆ ಮಾಹಿತಿ ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಶನಿವಾರಸಂತೆ ವಿಘ್ನೇಶ್ವರ ಮಹಿಳಾ ಕಾಲೇಜಿನ ಸಹಾಯಕ ಪ್ರಾದ್ಯಾಪಕ ಎಸ್.ಎನ್. ಪೂವಯ್ಯ, ಗೌಡಳ್ಳಿ ಪ್ರೌಡಶಾಲೆಯ ಸಹಾಯಕ ಪ್ರಾಧ್ಯಾಪಕ ಕೆ.ಎಸ್. ಕಿರಣ್ ಕುಮಾರ್, ಕೊಡ್ಲಿಪೇಟೆ ಪ.ಪೂ.ಕಾಲೇಜಿನ ಸಹ ಶಿಕ್ಷಕ, ನೋಡಲ್ ಅಧಿಕಾರಿ ಶಿವಕುಮಾರ್, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಲೋಕ ನಾಯಕ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಕಾಳನಾಯಕ್ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಲೂರು ದೇವಸ್ಥಾನಕ್ಕೆ ಡಿಸಿ ಭೇಟಿ
ವಾಕ್, ಶ್ರವಣ ಸಮಸ್ಯೆ ಪರಿಹರಿಸುವ ಪ್ರಯಾಸ್ ಯೋಜನೆ ಮಾದರಿ