ಕನ್ನಡಪ್ರಭ ವಾರ್ತೆ ದಾವಣಗೆರೆ
ತಾಲೂಕಿನ ಆರನೇ ಮೈಲಿಕಲ್ಲು ಗ್ರಾಮದ ಪ್ರೇಮಾ(60 ವರ್ಷ) ತನ್ನ ಮಗ ಆನಂದ ಎಂಬಾತನಿಂದಲೇ ಹತ್ಯೆಯಾದ ದುರ್ದೈವಿ ತಾಯಿ. 15 ವರ್ಷದ ಹಿಂದೆ ಪ್ರೇಮಾ ಪತಿ ಮೃತಪಟ್ಟಿದ್ದು, ಆಗಿಂದಲೂ ತನ್ನ ಎರಡು ಹೆಣ್ಣು ಮಕ್ಕಳು, ಓರ್ವ ಮಗನನ್ನು ಕಂಡವರ ಹೊಲದಲ್ಲಿ ಕೂಲಿ ಕೆಲಸ, ಪಾತ್ರೆ ತೊಳೆಯುವುದೂ ಸೇರಿದಂತೆ ಮನೆಗೆಲಸ ಮಾಡಿಕೊಂಡು ಸಾಕಿದ್ದ ಪ್ರೇಮಾ ತಾನು ಉಪವಾಸವಿದ್ದರೂ ಮಕ್ಕಳಿಗೆ ಒಂದಿಷ್ಟೂ ಕೊರತೆಯಾಗದಂತೆ ಸಾಕಿದ್ದರು.
3 ವರ್ಷದ ಹಿಂದೆ ಓರ್ವ ಹೆಣ್ಣು ಮಗಳು ಸಾವನ್ನಪ್ಪಿದ್ದು, ಮತ್ತೊಬ್ಬ ಮಗಳನ್ನು ಆರನೇ ಮೈಲಿಕಲ್ಲು ಗ್ರಾಮದಲ್ಲೇ ಮದುವೆ ಮಾಡಿಕೊಟ್ಟಿದ್ದರು. ಇನ್ನು ಮಗ ಆನಂದ ದುಡಿಮೆಯನ್ನೂ ಮಾಡದೇ, ಮನೆಗೆ ಮಗನೂ ಅನಿಸಿಕೊಳ್ಳದೇ, ಕುಡಿತದ ಚಟಕ್ಕೆ ದಾಸನಾಗಿದ್ದನು. ಕೆಲಸಕ್ಕೆಂದು ಊರೂರು ಸುತ್ತುತ್ತಿದ್ದ ಆನಂದ ಮುಪ್ಪಿನ ಕಾಲದಲ್ಲಿ ತನ್ನನ್ನು ಸಾಕುತ್ತಾನೆಂಬ ನಿರೀಕ್ಷೆ ತಾಯಿ ಪ್ರೇಮಾಗೆ ಇತ್ತು. ಆದರೆ, ಊರೂರು ಅಲೆಯುತ್ತಿದ್ದ ಆನಂದ ತಿಂಗಳಿಗೊಮ್ಮೆ ಸ್ವಗ್ರಾಮಕ್ಕೆ ಬಂದು ಹೋಗುತ್ತಿದ್ದ. ಬಂದವನು ತಾಯಿ ಜೊತೆಗೆ ಚನ್ನಾಗಿರದೇ, ಕುಡಿದ ನಶೆಯಲ್ಲಿ ಜಗಳ ಮಾಡುತ್ತಾ, ಆಕೆ ದುಡಿದು ತಂದ ಹಣ ಕಿತ್ತುಕೊಂಡು ಹಲ್ಲೆ ಮಾಡುತ್ತಿದ್ದ ಎಂದು ದೂರಲಾಗಿದೆ.ಗಣೇಶನ ಹಬ್ಬಕ್ಕೆಂದು ಊರಿಗೆ ಬಂದಿದ್ದ ಆನಂದ ಗುುರವಾರ ರಾತ್ರಿಯೂ ಕುಡಿದ ಮತ್ತಿನಲ್ಲಿ ತಾಯಿ ಜೊತೆಗೆ ಜಗಳ ಮಾಡಿ, ಹಲ್ಲೆ ಮಾಡಿದ್ದಾನೆ. ಆತನ ಹೊಡೆತಕ್ಕೆ ಬಡಪಾಯಿ ತಾಯಿ ಪ್ರೇಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಕಸ್ಮಿಕವಾಗಿ ಪ್ರೇಮಾ ಮಗಳು ರೂಪಾ ಮನೆಗೆ ಬಂದಾಗ ತಾಯಿಯನ್ನು ಕೊಂದಿದ್ದಾಗಿ ಆನಂದ ದರ್ಪದಿಂದ ಹೇಳುತ್ತಿದ್ದಂತೆ ಆಕೆ ಜೋರಾಗಿ ಕಿರುಚಿದ್ದರಿಂದ ನೆರೆ ಹೊರೆಯವರು, ಬಂಧುಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಎಷ್ಟು ಸಲ ಬುದ್ಧಿ ಹೇಳಿದರೂ ಆನಂದ ತಿದ್ದಿಕೊಳ್ಳಲಿಲ್ಲ. ತಾಯಿ ಪ್ರೇಮಾ ಸಹ ಮಗನ ವಿರುದ್ಧ ದೂರು ನೀಡಲಿಲ್ಲ. ಪೊಲೀಸರಿಗೆ ದೂರು ಯಾಕೆ ಕೊಡಬೇಕು, ಇವತ್ತಲ್ಲ, ನಾಳೆ ತನ್ನ ಮಗ ಸರಿ ಹೋಗುತ್ತಾನೆಂಬ ಆಶಾಭಾವನೆ ತಾಯಿ ಪ್ರೇಮಾ ಅವರಲ್ಲಿ ಬೇರೂರಿತ್ತು. ದೇವರಿಗೆ ಹರಕೆ ಹೊತ್ತು, ಕಷ್ಟಪಟ್ಟು ಸಾಕಿ ಬೆಳೆಸಿದ ಮಗನ ಕ್ರೌರ್ಯಕ್ಕೆ ತಾಯಿ ಬಲಿಯಾಗಿದ್ದು, ಇಂತಹ ಸಾವು, ಇಂತಹ ಮಗ ಯಾರಿಗೂ ಬೇಡ. ಇಂತಹ ರಾಕ್ಷಸಿ ಪ್ರವೃತ್ತಿ ಮೆರೆದ ಆನಂದನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.