28.40 ಕೋಟಿ ರು.ವೆಚ್ಚದಲ್ಲಿ ಕೋಟೆಯಲ್ಲಿ ಧ್ವನಿ ಬೆಳಕು

KannadaprabhaNewsNetwork |  
Published : Sep 13, 2025, 02:04 AM IST
ಚಿತ್ರದುರ್ಗ ಎರಡನೇ  ಪುಟದ ಲೀಡ್    | Kannada Prabha

ಸಾರಾಂಶ

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗದ ಕೋಟೆಯಲ್ಲಿ 28.40 ಕೋಟಿ ರು.ವೆಚ್ಚದಲ್ಲಿ ಧ್ವನಿ ಬೆಳಕು ವ್ಯವಸ್ಥೆ, ಪಾದಚಾರಿ ಮಾರ್ಗ ನಿರ್ಮಾಣ ಹಾಗೂ ವಿವಿಧ ಮೂಲ ಸೌಕರ್ಯ ಒದಗಿಸಿ ಅಭಿವೃದ್ಧಿಪಡಿಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋಟೆ ನಾಡು ಚಿತ್ರದುರ್ಗದ ಪ್ರಮುಖ ಪ್ರವಾಸಿ ತಾಣವಾಗಿರುವ ಕೋಟೆಯನ್ನು ಇನ್ನಷ್ಟು ಆಕರ್ಷಕವಾಗಿಸಿ, ಇಲ್ಲಿನ ಇತಿಹಾಸ ಕುರಿತು ವ್ಯಾಪಕ ಪ್ರಚಾರ ನೀಡುವ ನಿಟ್ಟಿನಲ್ಲಿ ಕೋಟೆಯಲ್ಲಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಅನುಮತಿ ಪಡೆಯುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕೂಡ ಕ್ರಮ ವಹಿಸಿದ್ದಾರೆ. ಇದರ ಜೊತೆಗೆ ಕೋಟೆಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಹಾಗೂ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಹೊಸದುರ್ಗ ತಾಲೂಕಿನ ಗವಿರಂಗಾಪುರ ಹಾಗೂ ಹಾಲುರಾಮೇಶ್ವರ ಕ್ಷೇತ್ರ ಅಭಿವೃದ್ಧಿಗೂ ಅಂದಾಜು 2 ಕೋಟಿ ರು. ಅನುದಾನ ಒದಗಿಸಲಾಗಿದೆ. ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಪ್ರಮುಖ ವೀರಗಲ್ಲು, ಮಾಸ್ತಿಗಲ್ಲು ಹಾಗೂ ಸ್ಮಾರಕಗಳ ರಕ್ಷಣೆಗೆ ಕೂಡ ಯೋಜನೆ ರೂಪಿಸಬೇಕು ಎಂದರು.

ಚಿತ್ರದುರ್ಗ ಕೋಟೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಕೆಫೆಟೇರಿಯಾ ನಿರ್ಮಿಸಿ ಸೌಲಭ್ಯ ಒದಗಿಸುವುದು, ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವತಿಯಿಂದ ವಸ್ತು ಸಂಗ್ರಹಾಲಯ ನಿರ್ಮಾಣ ಹಾಗೂ ಕೋಟೆಯೊಳಗಡೆ ಪ್ರಮುಖ ತಾಣಗಳಿಗೆ ಪ್ರವಾಸಿಗರು ತಲುಪಲು ಸಮಸ್ಯೆ ಇರುವ ಸ್ಥಳಗಳಲ್ಲಿ ರೈಲಿಂಗ್ಸ್ ಅಳವಡಿಸುವುದು ಸೇರಿದಂತೆ 5 ಕೋಟಿ ರು. ಗಳ ವೆಚ್ಚದ ವಿವಿಧ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

*ಒತ್ತುವರಿ ತೆರವಿಗೆ ಕ್ರಮ: ಚಿತ್ರದುರ್ಗದ ಕೋಟೆಗೆ ಪ್ರತಿ ತಿಂಗಳು ಸುಮಾರು 35 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿಗರು ತಮ್ಮ ವಾಹನಗಳಲ್ಲಿ ತಲುಪಲು ಸೂಕ್ತ ರಸ್ತೆ ಇಲ್ಲ, ಇರುವ ರಸ್ತೆಗಳೂ ಕೂಡ ಒತ್ತುವರಿಯ ಕಾರಣದಿಂದಾಗಿ ಕಿರಿದಾಗಿದೆ, ಹೀಗಾಗಿ ವಾಹನಗಳ ಮೂಲಕ ಕೋಟೆಗೆ ತೆರಳುವುದು ತ್ರಾಸದಾಯಕವಾಗಿದೆ. ಕೋಟೆಯ ಮುಂಭಾಗದಲ್ಲಿಯೂ ವಾಹನಗಳನ್ನು ನಿಲ್ಲಿಸಲು ತೀವ್ರ ಸಮಸ್ಯೆಯಾಗುತ್ತಿದೆ. ಹೀಗಾಗಿ ಚಿತ್ರದುರ್ಗ ನಗರದ ಗಾಂಧಿ ವೃತ್ತದಿಂದ ಕೋಟೆಗೆ ತೆರಳುವ ಮಾರ್ಗಗಳ ರಸ್ತೆ ಹಾಗೂ ಕೋಟೆಯ ಸುತ್ತಮುತ್ತ ಅಕ್ರಮವಾಗಿ ಆಗಿರುವ ಒತ್ತುವರಿ ತೆರವುಗೊಳಿಸುವ ನಿಟ್ಟಿನಲ್ಲಿ ಮತ್ತು ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶೀಘ್ರ ಸಭೆ ನಿಗದಿಪಡಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಚಿತ್ರದುರ್ಗ ತಾಲೂಕಿನ ಚಂದ್ರವಳ್ಳಿ ಕೆರೆ, ಮಲ್ಲಾಪುರ ಕೆರೆ, ಚಳ್ಳಕೆರೆ ತಾಲೂಕಿನ ಕೆರೆಕಲ್ ಕೆರೆ, ಮೊಳಕಾಲ್ಮೂರು ತಾಲೂಕು ರಂಗಯ್ಯನದುರ್ಗ ದಲ್ಲಿ ಸಾಹಸ ಪ್ರವಾಸೋದ್ಯಮ ಹಾಗೂ ಜಲಕ್ರೀಡೆಗಳನ್ನು ಕೈಗೊಳ್ಳಲು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಬಿವೃದ್ಧಿ ಪ್ರಾಧಿಕಾರವು ಕಳೆದ ವರ್ಷವೇ ಅನುಮತಿ ನೀಡಿದೆ. ಚಂದ್ರವಳ್ಳಿ ಕೆರೆಯಲ್ಲಿ ಜಲಸಾಹಸ ಕ್ರೀಡೆಗಳಾದ ಕಯಾಕಿಂಗ್, ಕನೋಯಿಂಗ್, ವಿಂಡ್ ಸರ್ಫಿಂಗ್, ಜಿಟ್ ಸ್ಕೀಯಿಂಗ್ ವಾಟರ್ ಜಾರ್ಬಿಂಗ್ ಹಾಗೂ ಬೋಟಿಂಗ್ ಕೈಗೊಳ್ಳಲು ಸಣ್ಣ ನೀರಾವರಿ ಇಲಾಖೆ ಹಾಗೂ ನಗರಸಭೆಯು ನಿರಾಪೇಕ್ಷಣ ಪತ್ರ ನೀಡಿದೆ ಎಂದು ಪ್ರವಾಸೋದ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಶೀಘ್ರ ಇದನ್ನು ಅನುಷ್ಟಾನಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಭದ್ರಾ ಮೆಲ್ದಂಡೆ ಯೋಜನೆ ಕಾರ್ಯಪಾಲಕ ಅಭಿಯಂತರ ಚಂದ್ರಪ್ಪ ಬಾರಿಕರ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್, ಪ್ರವಾಸೋದ್ಯಮ, ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆ, ರಾಜ್ಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ