ಕನ್ನಡಪ್ರಭ ವಾರ್ತೆ ಮೈಸೂರುಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದ ಮೈಸೂರಿನ ದಕ್ಷಿಣ ಪ್ರಾದೇಶಿಕ ಕೇಂದ್ರವು ತನ್ನ ‘ಮಾಡು ಮತ್ತು ಕಲಿ ಕಾರ್ಯಕ್ರಮದಡಿಯಲ್ಲಿ ಸಾಂಪ್ರದಾಯಿಕ ಮೈಸೂರು ವರ್ಣಚಿತ್ರ ಕಲೆಯ ಕುರಿತು 10 ದಿನಗಳ ತರಬೇತಿ ಶಿಬಿರ ಆಯೋಜಿಸಿದೆ.ಮೈಸೂರಿನ ಶ್ರೀಮಂತ ಸಾಂಪ್ರದಾಯಿಕ ಕಲೆ ಮತ್ತು ಸಾಂಸ್ಕೃತಿಕ ಪರಂಪರೆ ಉತ್ತೇಜಿಸುವುದು, ಸಂರಕ್ಷಿಸುವುದು ಹಾಗೂ ಆ ಕುರಿತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಐಜಿಆರ್‌ಎಂಎಸ್ ನ ''''''''ಡೂ ಅಂಡ್ ಲರ್ನ್'''''''' ಉಪಕ್ರಮವು ಭಾಗವಹಿಸುವವರನ್ನು ಸಾಂಪ್ರದಾಯಿಕ ಕಲಾ ಪ್ರಕಾರ ಮತ್ತು ಅನುಭವಿ ಕಲಾವಿದರೊಂದಿಗೆ ಜೋಡಿಸುವ ಮೂಲಕ ಪ್ರಾಯೋಗಿಕ ಕಲಿಕೆ ಪ್ರೋತ್ಸಾಹಿಸಲು ಶ್ರಮಿಸುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ, ಭಾರತದ ಅಮೂರ್ತ ಸಾಂಸ್ಕೃತಿಕ ಪರಂಪರೆ ಕಾಪಾಡಲು ಮತ್ತು ಸಾಂಪ್ರದಾಯಿಕ ಕಲಾ ಜ್ಞಾನ ಮುಂದಿನ ಪೀಳಿಗೆಗೆ ತಲುಪಿಸಲು ಸಂಗ್ರಹಾಲಯವು ನಿರಂತರವಾಗಿ ಶ್ರಮಿಸುತ್ತಿದೆ ಎಂದರು.ಈ 10 ದಿನಗಳ ಕಾರ್ಯಕ್ರಮವು ಅನುಭವಿ ಕಲಾವಿದರ ಮಾರ್ಗದರ್ಶನದಲ್ಲಿ ಮೈಸೂರು ವರ್ಣಚಿತ್ರದ ಸಾಂಪ್ರದಾಯಿಕ ತಂತ್ರ, ಕಲಾತ್ಮಕ ಕೌಶಲ್ಯ ಮತ್ತು ಅದರ ವಿಶಿಷ್ಟ ಲಕ್ಷಣ ಕಲಿಯಲು ಭಾಗವಹಿಸುವವರಿಗೆ ಉತ್ತಮ ಅವಕಾಶ ಒದಗಿಸುತ್ತದೆ. ಈ ಪ್ರಾಯೋಗಿಕ ಕಲಿಕಾ ಅನುಭವದಲ್ಲಿ 20ಕ್ಕೂ ಹೆಚ್ಚು ಆಸಕ್ತರು ನೋಂದಾಯಿಸಿಕೊಂಡಿದ್ದು, ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.ಇದಕ್ಕೂ ಮುನ್ನ, ರಾಜ್ಯ ಪುರಾತತ್ವ ಇಲಾಖೆಯ ಸಂಗ್ರಹಾಲಯ ಪಾಲಕರಾದ (ಕ್ಯುರೇಟರ್) ಸುನಿಲ್ ಕುಮಾರ್ ನಾಯಕ್, ಮುಖ್ಯ ಕಲಾವಿದೆ ಚಂದ್ರಿಕಾ ಮತ್ತು ಸಹಾಯಕ ಕಲಾವಿದೆ ಭಾರತಿ ಅವರು ಕಾರ್ಯಾಗಾರ ಉದ್ಘಾಟಿಸಿದರು. ಐಜಿಆರ್‌ಎಂಎಸ್ ನ ದಕ್ಷಿಣ ಪ್ರಾದೇಶಿಕ ಕೇಂದ್ರದ ಉಸ್ತುವಾರಿ ಅಧಿಕಾರಿ ವಿ. ಅಶೋಕ್ ವರ್ಧನ್ ಅವರು ಸ್ಥಳೀಯ ಸಾಂಸ್ಕೃತಿಕ ಪರಂಪರೆಯ ಮಹತ್ವ ಹಾಗೂ ಅವುಗಳನ್ನು ಸಂರಕ್ಷಿಸುವಲ್ಲಿ ಮತ್ತು ಪ್ರಚಲಿತಗೊಳಿಸುವಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದ ಪಾತ್ರದ ಕುರಿತು ಮಾತನಾಡಿದರು.