ಕನ್ನಡಪ್ರಭ ವಾರ್ತೆ ಮೈಸೂರು
ಪ್ರಸ್ತುತ ಮನುಷ್ಯನೇ ಮನುಷ್ಯನನ್ನು ಕದಿಯುವಂತಹ ದಿನಕ್ಕೆ ಬಂದಿದ್ದೇವೆ. ಇದರ ಗಂಭೀರತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಕೆ. ಅಮರ್ ನಾಥ್ ತಿಳಿಸಿದರು.ನಗರದ ಎಸ್ಪಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.ಮೊದಲೆಲ್ಲಾ ಅಡಿಕೆ ಕಳ್ಳರು, ಕುರಿ ಮೆಣಸು ಕಳ್ಳರ ಬಂಧನ ಸುದ್ದಿ ಇರುತ್ತಿತ್ತು. ಕೆಲವು ವರ್ಷಗಳು ಕಳೆದಂತೆ ಪಕ್ಕದ ಮನೆಯ ವಾಹನ ಕಳ್ಳತನ ಎಂದು ಸುದ್ದಿ ಬರಲು ಸ್ಟಾರ್ಟ್ ಆಯ್ತು. ನಂತರ ಮನುಷ್ಯರಿಂದ ಪ್ರಾಣಿಗಳ ಕಳ್ಳತನ, ಅಂತರ ರಾಜ್ಯ ಕಳ್ಳರ ಬಂಧನ, ವಿದೇಶಿ ಕಳ್ಳರ ಬಂಧನ ಎನ್ನುತ್ತಾ ಅಡಿಕೆಯಿಂದ ಮನುಷ್ಯ ಮನುಷ್ಯನನ್ನೇ ಕಳ್ಳತನ ಮಾಡುತ್ತಿರುವ ದಿನಕ್ಕೆ ನಾವಿಂದು ಬಂದಿದ್ದೇವೆ ಎಂದು ಅವರು ವಿಷಾದಿಸಿದರು.ಇದು ನಮ್ಮ ಅಭಿವೃದ್ಧಿಯೋ ಅಸಹನೆಯೋ, ಇಲ್ಲ ನಾವೇ ತಂದುಕೊಂಡಿರುವುದೋ ಎಂಬುದನ್ನು ಯೋಚಿಸಬೇಕಿದೆ. ಮಾನವನನ್ನೇ ಮಾನವ ಕಳ್ಳತನ ಮಾಡುವುದನ್ನು ತಡೆಯಲು ದಿನಾಚರಣೆ ಮಾಡುವ ಹಂತಕ್ಕೆ ತಲುಪಿದ್ದು, ಮುಂದಿನ ದಿನಗಳಲ್ಲಿ ಯಾವ ಇನ್ಯಾವ ಹಂತಕ್ಕೆ ತಲುಪಲಿದೆ ಎಂಬುದರ ಬಗ್ಗೆ ಚಿಂತಿಸಬೇಕಿದೆ ಎಂದರು.ಆಧುನಿಕ ದಿನದ ಗುಲಾಮಗಿರಿಯ ಒಂದು ರೂಪವೇ ಮಾನವ ಕಳ್ಳ ಸಾಗಾಣಿಕೆಯಾಗಿದ್ದು, ವಿದ್ಯೆಯ ಕೊರತೆಯಿಂದ ಹೆಚ್ಚಾಗುತ್ತಿದೆ. ಮಾನವ ಕಳ್ಳ ಸಾಗಾಣಿಕೆ ಭಾಗಿಯಾದವರಿಗೆ 7- 10 ವರ್ಷದವರೆಗೆ ಕಾರಾಗೃಹ ಶಿಕ್ಷೆ. ಒಂದಕ್ಕಿಂತ ಹೆಚ್ಚು ಜನರನ್ನು ಕಳ್ಳ ಸಾಗಾಣಿಕೆ ಮಾಡಿದರೆ 10 ವರ್ಷಕ್ಕೆ ಕಡಿಮೆ ಇಲ್ಲದೆ ಜೀವಾವಧಿ ಶಿಕ್ಷೆ ವಿಧಿಸಲಾಗುವುದು. ಮಕ್ಕಳ ಕಳ್ಳ ಸಾಗಾಣಿಕೆ ಮಾಡಿದರೆ 14 ವರ್ಷದಿಂದ ಜೀವಾವಧಿ ಶಿಕ್ಷೆ ವಿಧಿಸಲಾಗುವುದು ಎಂದು ಅವರು ತಿಳಿಸಿದರು. 3ನೇ ಅತೀ ದೊಡ್ಡ ಅದಾಯಹೆಚ್ಚುವರಿ ಎಸ್ಪಿ ಸಿ. ಮಲ್ಲಿಕ್ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ಪ್ರಪಂಚದಲ್ಲಿ ಮೂರನೇ ಅತೀ ದೊಡ್ಡ ಅದಾಯ ತರುವ ಸಾಗಾಣಿಕೆಯಾಗಿದ್ದು, ಇದರ ವಿರುದ್ಧ ನಾವೆಲ್ಲಾ ಸಂಘಟಿತರಾಗಿ ಕೆಲಸ ಮಾಡಬೇಕಿದೆ. ಭಾರತ ಸಂವಿಧಾನದ ಆರ್ಟಿಕಲ್ 23ರ ಪ್ರಕಾರ ಮಾನವ ಕಳ್ಳ ಸಾಗಾಣಿಕೆ ನಿಷೇಧ ಮಾಡಲಾಗಿದ್ದು, ಅದರನ್ವಯ ನಾವೆಲ್ಲಾ ಕೆಲಸ ಮಾಡಬೇಕಿದೆ ಎಂದರು.ಮದುವೆ ಆಗುವುದಾಗಿ ನಂಬಿಸಿ ಕರೆದೊಯ್ದು ಲೈಂಗಿಕ ಶೋಷಣೆಗೆ ಬಳಸುವುದು, ಬೇರೆಯವರಿಗೆ ಮಾರಾಟ ಮಾಡುವುದು, ಭಿಕ್ಷಾಟನೆಗಾಗಿ ಮಕ್ಕಳ ಕಳ್ಳ ಸಾಗಾಣಿಕೆ, ಜೀತಕ್ಕಾಗಿ ಕಳ್ಳ ಸಾಗಾಣಿಕೆ, ಬಾಲ ಕಾರ್ಮಿಕತೆಗಾಗಿ, ಅಂಗಾಂಗ ಕಸಿಗಾಗಿ, ಬಾಲ್ಯ ವಿವಾಹಕ್ಕಾಗಿ ಮಾನ ಕಳ್ಳ ಸಾಗಾಣಿಕೆ ನಡೆಯುತ್ತಿದೆ. ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವಲ್ಲಿ ಒಗ್ಗಟ್ಟಿನ ಕೆಲಸ ಅನಿವಾರ್ಯವಾಗಿದೆ. ಮನೆ ಮನೆಗೆ ಭೇಟಿ ನೀಡುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಗಮನಿಸಬಹುದಾಗಿದೆ. ಯಾರಾದರೂ ನಾಪತ್ತೆಯಾದ ಕೂಡಲೇ ಪ್ರಕರಣ ದಾಖಲಿಸಿ, ಮುನ್ನಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಪಿ. ಕುಮಾರಸ್ವಾಮಿ, ಹೆಚ್ಚುವರಿ ಎಸ್ಪಿ ಎಲ್. ನಾಗೇಶ್, ಜಿಪಂ ಉಪ ಕಾರ್ಯದರ್ಶಿ ಕೃಷ್ಣಂರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ. ಬಸವರಾಜು, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ, ಜಿಲ್ಲಾ ಮಕ್ಕಳ ಸಂರಕ್ಷಣಾ ಅಧಿಕಾರಿ ರವಿಚಂದ್ರ ಮೊದಲಾದವರು ಇದ್ದರು.----ಕೋಟ್...ಸಾಮಾನ್ಯವಾಗಿ ವ್ಯಕ್ತಿಯೋರ್ವ ಪ್ರಯಾಣ ಮಾಡಿದರೆ, ಅದನ್ನು ಪ್ರಯಾಣ ಎನ್ನುತ್ತೇವೆ. ಆದರೆ, ಅದೇ ವ್ಯಕ್ತಿ ಬೇರೆಯವರ ಹಿಡಿತದಲ್ಲಿ ಅಕ್ರಮವಾಗಿ ಆತನ ಇಚ್ಛೆಗೆ ವಿರುದ್ಧವಾಗಿ ಪ್ರಯಾಣ ಮಾಡುತ್ತಿದ್ದರೆ ಅದನ್ನು ಮಾನವ ಕಳ್ಳ ಸಾಗಾಣಿಕೆ ಎನ್ನಲಾಗುತ್ತದೆ.- ಸಿ. ಮಲ್ಲಿಕ್, ಹೆಚ್ಚುವರಿ ಎಸ್ಪಿ, ಮೈಸೂರು