ಶಿರಾಡಿ, ಚಾರ್ಮಾಡಿ ಘಾಟ್‌ ಪರಿಸ್ಥಿತಿ ಅವಲೋಕನಕ್ಕೆ ಉನ್ನತಾಧಿಕಾರಿಗಳಿಗೆ ಸ್ಪೀಕರ್‌ ಸೂಚನೆ

KannadaprabhaNewsNetwork |  
Published : Jul 30, 2024, 12:41 AM IST
ಸ್ಪೀಕರ್‌ ಯು.ಟಿ.ಖಾದರ್‌  | Kannada Prabha

ಸಾರಾಂಶ

ಪ್ರಾಕೃತಿಕ ವಿಕೋಪದ ಭೀತಿ ಎದುರಿಸುತ್ತಿರುವ ಶಿರಾಡಿ ಮತ್ತು ಚಾರ್ಮಾಡಿ ಘಾಟ್‌ಗೆ ಭೇಟಿ ನೀಡಿ ಹೆದ್ದಾರಿ ಪರಿಸ್ಥಿತಿ ಅವಲೋಕಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಪ್ರಾಧಾನ ಕಾರ್ಯದರ್ಶಿ ಸೆಲ್ವಕುಮಾರ್‌ ಹಾಗೂ ದ.ಕ. ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಸ್ಪೀಕರ್‌ ಯು.ಟಿ.ಖಾದರ್ ಹೇಳಿದರು. ನಗರದ ಸರ್ಕ್ಯೂಟ್‌ ಹೌಸ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಪ್ರಾಕೃತಿಕ ವಿಕೋಪದ ಭೀತಿ ಎದುರಿಸುತ್ತಿರುವ ಶಿರಾಡಿ ಮತ್ತು ಚಾರ್ಮಾಡಿ ಘಾಟ್‌ಗೆ ಭೇಟಿ ನೀಡಿ ಹೆದ್ದಾರಿ ಪರಿಸ್ಥಿತಿ ಅವಲೋಕಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಪ್ರಾಧಾನ ಕಾರ್ಯದರ್ಶಿ ಸೆಲ್ವಕುಮಾರ್‌ ಹಾಗೂ ದ.ಕ. ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಸ್ಪೀಕರ್‌ ಯು.ಟಿ.ಖಾದರ್ ಹೇಳಿದರು.

ನಗರದ ಸರ್ಕ್ಯೂಟ್‌ ಹೌಸ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಭೀರ ಸನ್ನಿವೇಶ ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ಸಂಚಾರ ಸ್ಥಗಿತಗೊಳಿಸಬಾರದು, ಇದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ದ.ಕ, ಕೊಡಗು, ಉಡುಪಿ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲಾಡಳಿತ ಸೇರಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಬೇಕು. ಜನರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು ಎಂದಿದ್ದೇನೆ ಎಂದರು.

ಶಿರಾಡಿ. ಚಾರ್ಮಾಡಿ ಹಾಗೂ ಮಂಗಳೂರಿನ ಕೆತ್ತಿಕಲ್‌ ಪ್ರದೇಶಗಳಲ್ಲಿ ಆಗಾಗ ಕುಸಿತ ಉಂಟಾಗುತ್ತಿದೆ. ಈ ಸ್ಥಳಗಳ ಪರಿಶೀಲನೆ ನಡೆಸಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ದ.ಕ. ಜಿಲ್ಲಾಡಳಿತ ಜೊತೆ ಭೇಟ ನೀಡಿ ಚರ್ಚಿಸುವಂತೆ ಅಧಿಕಾರಿ ಸೆಲ್ವ ಕುಮಾರ್‌ಗೆ ಹೇಳಿದ್ದೇನೆ. ಮಳೆಗಾಲದಲ್ಲಿ ಗುಡ್ಡ ಕುಸಿತ ಸಾಮಾನ್ಯ. ಅದಕ್ಕೆ ಹೆದ್ದಾರಿ ಬಂದ್‌ ಪರಿಹಾರ ಅಲ್ಲ. ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡುವುದರಿಂದ ಹೀಗಾಗುತ್ತದೆ ಎಂದರು.

ಹೆದ್ದಾರಿ ಕಾಮಗಾರಿ ತುರ್ತು ಪೂರ್ತಿಗೆ ಸೂಚನೆ:

ಶಿರಾಡಿ ಘಾಟ್‌ನಲ್ಲಿ ಸುರಂಗ ರಚನೆ ಸುಲಭವಲ್ಲ. ರೈಲ್ವೆಗೆ ಅರಣ್ಯ, ಪರಿಸರ ಇಲಾಖೆಗಳ ನಿರಕ್ಷೇಪಣಾ ಪತ್ರ ಬೇಕು. ಸದ್ಯ ಹಾಲಿ ಇರುವ ಹೆದ್ದಾರಿಯನ್ನು ಸುಸ್ಥಿತಿಯಲ್ಲಿ ಇರಿಸುವ ಬಗ್ಗೆ ಚಿಂತನೆ ನಡೆಸಬೇಕು. ಪ್ರತಿ ವರ್ಷ ಗುಡ್ಡ ಕುಸಿತದ ಸ್ಥಳವನ್ನು ಗುರುತಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಮಾರನಬೈಲ್‌-ಸಕಲೇಶಪುರ ನಡುವಿನ ಹೆದ್ದಾರಿ ಕಾಮಗಾರಿ ತುರ್ತಾಗಿ ಪೂರ್ಣಗೊಳ್ಳಬೇಕು. ಘಾಟ್ ಪ್ರದೇಶದಲ್ಲಿ ಕಾಮಗಾರಿ ವೇಳೆ ಒಂದೇ ಕಡೆ ನೀರು ಹರಿದುಹೋಗುವಂತೆ ರಚನೆ ಮಾಡಬೇಕು. ಸಮಸ್ಯೆ ಇತ್ಯರ್ಥಕ್ಕೆ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಅಧಿಕಾರಿ ಸೆಲ್ವ ಕುಮಾರ್‌ಗೆ ಸೂಚಿಸಲಾಗಿದೆ ಎಂದರು.

ಈಶಾನ್ಯ ಭಾರತ ಮಾದರಿ ಅನುಸರಿಸಿ:

ಈಶಾನ್ಯ ಭಾರತದಲ್ಲಿ ಹೆದ್ದಾರಿ ಕಾಮಗಾರಿ ವೇಳೆ ತಡೆಗೋಡೆಯನ್ನೂ ಜೊತೆಯಾಗಿಯೇ ಮಾಡುತ್ತಾರೆ. ಆದರೆ ಇಲ್ಲಿ ಹೆದ್ದಾರಿ ಕಾಮಗಾರಿ ಬಳಿಕ ತಡೆಗೋಡೆ ಪ್ರತ್ಯೇಕವಾಗಿ ಮಾಡುತ್ತಾರೆ. ಗುಡ್ಡಗಾಡು ಪ್ರದೇಶವಾದ ಇಲ್ಲಿ ಇದು ಸರಿಯಾದ ಕ್ರಮವಲ್ಲ, ಹಾಗಾಗಿ ಈಶಾನ್ಯ ಭಾರತ ಮಾದರಿಯಲ್ಲಿ ಇಲ್ಲಿ ಕೂಡ ಹೆದ್ದಾರಿ ಹಾಗೂ ತಡೆಗೋಡೆ ಕಾಮಗಾರಿಯನ್ನು ಏಕಕಾಲದಲ್ಲಿ ಮಾಡುವಂತೆ ಸೂಕ್ತ ಮಾರ್ಪಾಟುಗೊಳಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಬೇಕಾಗಿದೆ ಎಂದರು.

.................

ನನ್ನ ಅಜ್ಜ ಮಾಡಿಸಿದ ರೈಲ್ವೆ ಲೇನ್‌!

ಮಂಗಳೂರು-ಹಾಸನ ರೈಲ್ವೆ ಲೇನ್‌ನನ್ನು ನನ್ನ ಅಜ್ಜ ಮಾಡಿಸಿದ್ದಾರೆ. ನಾನು ಆಗ ಸಣ್ಣವನಿದ್ದೆ. ಅಜ್ಜನ ನೇತೃತ್ವದಲ್ಲಿ ಕಂಪನಿಯೊಂದು ಈ ರೈಲ್ವೆ ಲೇನ್‌ ಕಾಮಗಾರಿ ನಡೆಸಿತ್ತು. ನಾನು ಹಾಸನದಲ್ಲಿ ರೈಲ್ವೆ ಸುರಂಗ ಮಾರ್ಗ ನಿರ್ಮಾಣ ವೇಳೆ ಹೋಗಿ ನೋಡಿದ್ದೆ. ಬೇರೆ ಬೇರೆ ಜಿಲ್ಲೆಯವರು ಆಗಮಿಸಿ ಗುಡ್ಡದೊಳಗೆ ಸುರಂಗ ಕಾಮಗಾರಿ ನಡೆಸಿದ್ದರು. ಆಗಲೇ ಗುಡ್ಡ ಕುಸಿತವನ್ನು ನೋಡಿದ್ದೇನೆ ಎಂದರು ಸ್ಪೀಕರ್‌ ಯು.ಟಿ.ಖಾದರ್‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಷ್ಟದ ಕಾಲದಲ್ಲಿ ರೈತರ ಕೈಹಿಡಿಯುವ ಜವಾಬ್ದಾರಿ ಸಹಕಾರಿ ಸಂಸ್ಥೆಗಳದ್ದು: ಶಿವರಾಮ ಹೆಬ್ಬಾರ
ದತ್ತಾತ್ರೇಯ ಹೊಸಬಾಳೆ ನೇತೃತ್ವದಲ್ಲಿ ಹಂಪಿಗೆ ಆರೆಸ್ಸೆಸ್‌ ಪ್ರಚಾರಕರ ಭೇಟಿ