ಇಂದು ಕೃಷಿಕರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದು, ಅಡಕೆ ಬೆಳೆಗಾರರಿಗೆ ಎಲೆಚುಕ್ಕಿ ರೋಗದಂಥ ಸಂಕಷ್ಟ ಎದುರಾಗಿದೆ.
ಟಿಎಂಎಸ್‌ನಲ್ಲಿ ನವೀಕರಣಗೊಂಡ ಕಟ್ಟಡ ಉದ್ಘಾಟನಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಸಿದ್ದಾಪುರಇಂದು ಕೃಷಿಕರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದು, ಅಡಕೆ ಬೆಳೆಗಾರರಿಗೆ ಎಲೆಚುಕ್ಕಿ ರೋಗದಂಥ ಸಂಕಷ್ಟ ಎದುರಾಗಿದೆ. ಆತಂಕ, ಕಷ್ಟದ ಕಾಲದಲ್ಲಿ ರೈತರ ಕೈಹಿಡಿಯುವ ಜವಾಬ್ದಾರಿ ಡಿಸಿಸಿ ಬ್ಯಾಂಕ್ ಸೇರಿದಂತೆ ಎಲ್ಲ ಸಹಕಾರಿ ಸಂಸ್ಥೆಗಳದ್ದು ಎಂದು ಶಾಸಕ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ಟಿಎಂಎಸ್‌ನಲ್ಲಿ ನವೀಕರಣಗೊಂಡ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ನಮ್ಮ ಹಿಂದಿನ ಸಹಕಾರಿ ಧುರೀಣರು ಸದುದ್ದೇಶವನ್ನಿಟ್ಟುಕೊಂಡು ಸಹಕಾರಿ ರಂಗ ಸ್ಥಾಪಿಸಿದರು. ಆದರೆ ಇಂದು ಸೌಹಾರ್ದ ಸಹಕಾರಿ ರಂಗ ಮನಸೋ ಇಚ್ಛೆ ವ್ಯವಹಾರ ನಡೆಸುವ ಹಂತಕ್ಕೆ ಬೆಳೆದಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದೆ. ಇಂದು ಅಡಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಸಹಕಾರಿ ಕ್ಷೇತ್ರ ಬೆಳೆಯಲು ಬೆನ್ನೆಲುಬಾಗಿ ನಿಂತ ರೈತರ ಕಷ್ಟಕ್ಕೆ ನಾವು ಸದಾ ಸಹಕರಿಸಲು ಬದ್ಧವಾಗಿದ್ದೇವೆ ಎಂದರು.
ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ, ಸಹಕಾರಿ ಕ್ಷೇತ್ರ ರಾಜಕೀಯ ಹಸ್ತಕ್ಷೇಪದಿಂದ ಹೊರಗುಳಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಎಲೆಚುಕ್ಕಿ ರೋಗದಿಂದ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಈಗಾಗಲೇ ಪಡೆದಿರುವ ಸಾಲದ ಬಡ್ಡಿಯನ್ನೂ ಸಹ ಭರಣ ಮಾಡಲು ಸಾಧ್ಯವಾಗದ ಪರಿಸ್ಥಿತಿ ಬಂದೊದಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮತ್ತು ಹೊರ ರಾಜ್ಯಗಳಲ್ಲಿಯೂ ಸಹ ಅಡಕೆ ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ. ಕಾರಣ ರೈತರು ಪರ್ಯಾಯ ಬೆಳೆಗಳತ್ತ ಗಮನವಹಿಸುವುದು ಸೂಕ್ತ ಎಂದರು.ವೇದಿಕೆಯಲ್ಲಿದ್ದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ಉಪಾಧ್ಯಕ್ಷ ಶಿವಕುಮಾರ ಗೌಡ ಎಸ್. ಪಾಟೀಲ್, ಹೈಕೋರ್ಟ್ ವಕೀಲರಾದ ಜಯಕುಮಾರ ಎಸ್. ಪಾಟೀಲ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಿ.ಎನ್. ಭಟ್ ಅಳ್ಳಂಕಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಪ್ರಾಸ್ತಾವಿಕ ಮಾತನಾಡಿದರು.ವೇದಿಕೆಯಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಾಘವೇಂದ್ರ ಶಾಸ್ತ್ರಿ, ರವಿ ಜಿ. ಹೆಗಡೆ ಹುಳಗೋಳ, ತಹಶೀಲ್ದಾರ ಎಂ.ಆರ್. ಕುಲಕರ್ಣಿ, ಕೆಆರ್‌ಎಂ ಅಧ್ಯಕ್ಷ ಅಶೋಕ ನಾಯ್ಕ, ಕ್ಯಾಮ್ಕೊ ನಿರ್ದೇಶಕ ವಿಶ್ವನಾಥ ಹೆಗಡೆ ಕೂಜಳ್ಳಿ, ತಾಲ್ಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಸತೀಶ ಹೆಗಡೆ ಹೆಗ್ಗಾರ್ಕೈ ಇದ್ದರು.
ಕಾರ್ಯಕ್ರಮದಲ್ಲಿ ಸಂಘಕ್ಕೆ ಮಾರ್ಗದರ್ಶನ ಹಾಗೂ ಸಹಕರಿಸಿದ ಮಹನೀಯರಿಗೆ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ವಕೀಲರಾದ ಎಂ.ಎಸ್. ಗೌಡರ್ ಹೆಗ್ಗೋಡಮನೆ, ರವಿ ಹೆಗಡೆ ಹೂವಿನಮನೆ ಮಾತನಾಡಿದರು.ಸಂಘದ ಉಪಾಧ್ಯಕ್ಷ ಎಂ.ಜಿ. ನಾಯ್ಕ ಹಾದ್ರಿಮನೆ ಸ್ವಾಗತಿಸಿದರು. ಉಪ ವ್ಯವಸ್ಥಾಪಕ ಪ್ರಸನ್ನಕುಮಾರ ಭಟ್, ಜಿ.ಜಿ. ಹೆಗಡೆ ನಿರೂಪಿಸಿದರು. ನಿರ್ದೇಶಕ ಜಿ.ಎಂ. ಭಟ್ ಕಾಜಿನಮನೆ ವಂದಿಸಿದರು.