ಮಂಗಳೂರು: ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆ ನೂರಾರು ವಿಶೇಷ ಮಕ್ಕಳಿಗೆ ದಾರಿ ತೋರಿಸಿದೆ. ಇಂತಹ ಸಂಸ್ಥೆಗಳನ್ನ ಮುನ್ನೆಸಲು ಅಗತ್ಯವಿರುವುದು ಮಾನಸಿಕ ನಿರ್ಧಾರಗಳೇ ಹೊರತು ಹಣವಲ್ಲ ಎಂದು ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಹೇಳಿದರು. ವಾಮಂಜೂರಿನ ಎಸ್‌ಡಿಎಂ ಸಮಗ್ರ ಶಾಲೆಯ ರಜತ ಮಹೋತ್ಸವ ಸಂದರ್ಭದಲ್ಲಿ ಶಾಲಾ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ದಿ. ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರ ಸಂಸ್ಮರಣಾರ್ಥ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆ ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.ಸಂಸ್ಥೆಗೆ ಸುಸಜ್ಜಿತ ಗ್ರಂಥಾಲಯ ಒದಗಿಸಲಾಗಿದ್ದು, ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಶಾಲೆಯ ಅಭಿವೃದ್ಧಿಗಾಗಿ ಎಸ್ ಡಿಎಂ ಶಿಕ್ಷಣ ಸಂಸ್ಥೆ ಸಾಕಷ್ಟು ಮುತುವರ್ಜಿ ವಹಿಸಿದ್ದು, ಸಂಸ್ಥೆ ಸಾಕಷ್ಟು ಬೆಳೆದಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಾಲೆಗೆ ಶೇ. ೧೦೦ ಫಲಿತಾಂಶ ಬಂದಿರುವುದು ಇತಿಹಾಸ ಎಂದು ಅವರು ಹೇಳಿದರು. ಅಂಗವಿಕಲರ ಕಲ್ಯಾಣ ಸಂಸ್ಥೆ ಮಂಗಳೂರು ಇದರ ಆಡಳಿತ ಮಂಡಳಿ ಸದಸ್ಯ ಶ್ರುತಾ ಜಿ. ಅವರು ನವೀಕೃತ ಗ್ರಂಥಾಲಯ ಉದ್ಘಾಟಿಸಿದರು. ಇದೇ ವೇಳೆ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹಾಗೂ ಪ್ರಸಕ್ತ ಸೇವೆಯಲ್ಲಿರುವ ಶಿಕ್ಷಕರು ಹಾಗೂ ಶಿಕ್ಷಕೇತರ ವರ್ಗದವನ್ನು ಗೌರವಿಸಲಾಯಿತು.
ಸಾಂಸ್ಕೃತಿಕ ಸ್ಪರ್ಧೆ ಕಲೋತ್ಸವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ೧೧ ಭಿನ್ನಚೇತನ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಫರ್ಧೆಯಲ್ಲಿ ಮಂಗಳೂರು ಶಕ್ತಿನಗರ ಸಾನಿಧ್ಯ ವಿಶೇಷ ಶಾಲೆ ಪ್ರಥಮ, ಸುರತ್ಕಲ್ ನ ಲಯನ್ಸ್ ವಿಶೇಷ ಶಾಲೆಗೆ ದ್ವಿತೀಯ ಹಾಗೂ ಮರ್ದಾಳ ಬೆಥನಿ ಜೀವನ ಜ್ಯೋತಿ ಶಾಲೆಗ ತೃತೀಯ ಬಹುಮಾನ ಪಡೆದಿವೆ.ಅಂಗವಿಕಲರ ಕಲ್ಯಾಣ ಸಂಸ್ಥೆ, ಮಂಗಳೂರು ಇದರ ಕಾರ್ಯದರ್ಶಿ ಪ್ರೊ. ಎ. ರಾಜೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಆನಂದ ಶೆಟ್ಟಿ, ಸಂಸ್ಥೆಯ ಖಜಾಂಚಿ ಡಾ. ಕೆ. ದೇವರಾಜ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸುಚೇತಾ, ಎಸ್‌ಡಿಎಂ ಐಟಿಐ ಉಪನ್ಯಾಸಕಿ ಪ್ರಫುಲ್ಲಾ, ಮುಖ್ಯ ಶಿಕ್ಷಕ ವಿಠಲ ವಾಗ್ಮೋರೆ, ಶಿಕ್ಷಕಿ ಹರಿಣಾಕ್ಷಿ ಇದ್ದರು. ಶಾಲಾ ಆಡಳಿತಾಧಿಕಾರಿ ನರೇಶ್ ಮಲ್ಲಿಗೆಮಾಡು ಸ್ವಾಗತಿಸಿದರು. ಶಿಕ್ಷಕಿ ರಮ್ಯಾ ನಿರೂಪಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ರಮೇಶ್ ಆಚಾರ್ಯ ವಂದಿಸಿದರು.