ಶಿವಾನಂದ ಗೊಂಬಿ ಹುಬ್ಬಳ್ಳಿ
ಇವು ಸಿದ್ದರಾಮಯ್ಯ ಸರ್ಕಾರದ ಮೇಲೆ ಈ ಭಾಗದ ಜನತೆ ಇಟ್ಟಿರುವ ನಿರೀಕ್ಷೆಗಳು. ಹುಬ್ಬಳ್ಳಿ-ಧಾರವಾಡ ಎಂದರೆ ರಾಜ್ಯದ ಎರಡನೆಯ ದೊಡ್ಡ ನಗರ ಎಂದೆಲ್ಲ ಹೇಳಲಾಗುತ್ತಿದೆ. ಆದರೆ ಸೌಲಭ್ಯಗಳನ್ನು ನೋಡಿದರೆ ಯಾವುದೇ ದೊಡ್ಡ ಹಳ್ಳಿಗಿಂತ ಕಡಿಮೆಯೇನಿಲ್ಲ ಎಂಬುದು ಮಾತ್ರ ಸ್ಪಷ್ಟವಾಗಿ ಗೋಚರಿಸುತ್ತದೆ.
ಯಾವುದೇ ರಸ್ತೆಗೆ ಕಾಲಿಟ್ಟರೂ ಬರೀ ಧೂಳು. ತೆಗ್ಗು ಗುಂಡಿಗಳಿಂದ ಕೂಡಿದ ರಸ್ತೆಗಳು, ಎಂಟ್ಹತ್ತು ದಿನಗಳಿಗೊಮ್ಮೆ ಕುಡಿವ ನೀರು, ಅವ್ಯವಸ್ಥಿತ ಚರಂಡಿ, ರಸ್ತೆಗಳಲ್ಲೇ ಅಡ್ಡಾದಿಡ್ಡಿಯಾಗಿ ನಿಂತಿರುವ ವಾಹನಗಳೇ ಗೋಚರಿಸುತ್ತವೆ. ಈ ನಗರಗಳನ್ನು ಸುವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಬೇಕು. ಅದಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಮೂಲಸೌಲಭ್ಯ ಕಲ್ಪಿಸಲೆಂದೇ ಹುಬ್ಬಳ್ಳಿ-ಧಾರವಾಡಕ್ಕೆ ಕನಿಷ್ಠವೆಂದರೂ ₹1000 ಕೋಟಿ ವಿಶೇಷ ಅನುದಾನ ಘೋಷಿಸಬೇಕು ಎಂಬ ಬೇಡಿಕೆ ಇಲ್ಲಿನ ನಾಗರಿಕರದ್ದು.ಹೊಸ ತಾಲೂಕು: ಇನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಂದಾಯ ಸಚಿವರಾಗಿದ್ದ ವೇಳೆ 43 ಹೊಸ ತಾಲೂಕುಗಳನ್ನು ಘೋಷಿಸಿದ್ದುಂಟು. ಹೊಸ ತಾಲೂಕುಗಳಾಗಿ ಏಳೆಂಟು ವರ್ಷವಾದರೂ ಸರಿಯಾಗಿ ಸರ್ಕಾರಿ ಕಚೇರಿಗಳು ಬಂದಿಲ್ಲ. ಕಚೇರಿಗಳಿದ್ದರೂ ಅಧಿಕಾರಿ ವರ್ಗ ಇಲ್ಲ. ಹೊಸ ತಾಲೂಕು ಎನ್ನುವುದು ಬರೀ ಹೆಸರಿಗಷ್ಟೇ ಸೀಮಿತವಾದಂತಾಗಿವೆ. ಆದಕಾರಣ ಹೊಸ ತಾಲೂಕು ಕೇಂದ್ರಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ಕೆಲವೊಂದಿಷ್ಟು ಯೋಜನೆಗಳನ್ನು ಘೋಷಿಸಬೇಕು.
ವಾಯವ್ಯ ಸಾರಿಗೆಗೆ ₹ 1000 ಕೋಟಿ ಅನುದಾನ ನೀಡಲಿ: ಇನ್ನು ಶಕ್ತಿ ಯೋಜನೆ ಜಾರಿಯಾದ ಮೇಲೆ ಸರ್ಕಾರದ ಶಕ್ತಿ ತುಂಬಿದೆ. ಇನ್ನು ಸದಾಕಾಲ ನಷ್ಟದಲ್ಲಿರುವ 6 ಜಿಲ್ಲೆ 9 ವಿಭಾಗಗಳನ್ನು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡಲಿ.
ನಿವೃತ್ತರಾದವರಿಗೆ ರಜೆ ನಗದೀಕರಣದ ಹಣ ಕೂಡ ಕೊಡಲು ಸಂಸ್ಥೆಗೆ ಸಾಧ್ಯವಾಗುತ್ತಿಲ್ಲ. 2018-19ರಿಂದಲೇ ಬಾಕಿಯುಳಿಸಿಕೊಂಡಿದೆ. ಗ್ರ್ಯಾಚುಟಿ, ಅಪಘಾತವಾದಾಗ ಕೊಡಬೇಕಾದ ಪರಿಹಾರ ₹ 60-70 ಕೋಟಿ ಬಾಕಿಯುಳಿದಿದೆ. ಇನ್ನು ಸಂಸ್ಥೆ ಪ್ರತಿದಿನ ಕನಿಷ್ಠವೆಂದರೂ ₹1 ಕೋಟಿ ನಷ್ಟದಲ್ಲೇ ಸಾಗುತ್ತಿದೆ. ಸಂಸ್ಥೆಯ ಆಸ್ತಿಗಳನ್ನೆಲ್ಲ ಅಡವಿಟ್ಟು ಸಂಸ್ಥೆಯನ್ನು ನಿಭಾಯಿಸಲಾಗುತ್ತಿದೆ. ಆದಕಾರಣ ಸಂಸ್ಥೆಯನ್ನು ಮೇಲೆತ್ತಬೇಕಾದರೆ ವಿಶೇಷ ಅನುದಾನ ನೀಡಬೇಕು. ಈ ಬಜೆಟ್‌ನಲ್ಲಿ ಕನಿಷ್ಠವೆಂದರೂ ₹1 ಸಾವಿರ ಕೋಟಿಯನ್ನಾದರೂ ಮೀಸಲಿಡಬೇಕು ಎಂಬ ಬೇಡಿಕೆ ಸಂಸ್ಥೆಯ ನೌಕರ ವರ್ಗದ್ದು.