ತಾಯಿ, ಮಗು ನಿಧನ ಪ್ರಮಾಣ ಇಳಿಕೆಗೆ ಮಂಗಳೂರು ಲೇಡಿಗೋಷನ್‌ ಆಸ್ಪತ್ರೆಯಲ್ಲಿ ವಿಶೇಷ ತೀವ್ರ ನಿಗಾ ಘಟಕ

KannadaprabhaNewsNetwork |  
Published : Jun 28, 2025, 12:18 AM IST
ಮಂಗಳೂರು ಲೇಡಿಗೋಷನ್‌ ಆಸ್ಪತ್ರೆ  | Kannada Prabha

ಸಾರಾಂಶ

ತಾಯಿ ಮತ್ತು ಮಗು ನಿಧನ ಹೊಂದುವ ಪ್ರಮಾಣವನ್ನು ಇಳಿಕೆ ಮಾಡಲು, ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ೧.೫ ಕೋಟಿ ರು. ವೆಚ್ಚದಲ್ಲಿ ಪ್ರಸೂತಿಗಾಗಿ ವಿಶೇಷ ತೀವ್ರ ನಿಗಾ ಘಟಕ ಸ್ಥಾಪನೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ತಾಯಿ ಮತ್ತು ಮಗು ನಿಧನ ಹೊಂದುವ ಪ್ರಮಾಣವನ್ನು ಇಳಿಕೆ ಮಾಡಲು, ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ೧.೫ ಕೋಟಿ ರು. ವೆಚ್ಚದಲ್ಲಿ ಪ್ರಸೂತಿಗಾಗಿ ವಿಶೇಷ ತೀವ್ರ ನಿಗಾ ಘಟಕ ಸ್ಥಾಪನೆಯಾಗುತ್ತಿದೆ.

ರೋಟರಿ ಇಂಟರ್‌ನ್ಯಾಷನಲ್‌ನಿಂದ ೧ ಕೋಟಿ ರು. ಮೌಲ್ಯದ ಉಪಕರಣಗಳು ವ್ಯವಸ್ಥೆ ಮಾಡಲಾಗಿದೆ. ಸರ್ಕಾರ ಮತ್ತು ವೈಯಕ್ತಿಕ ದೇಣಿಗೆಯಿಂದ ಮೂಲಸೌಕರ್ಯ ಒದಗಿಸಲಾಗುತ್ತಿದೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ೧೮ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ.ಪ್ರತಿವರ್ಷ ೬ ಸಾವಿರಕ್ಕೂ ಹೆಚ್ಚು ಹೆರಿಗೆ ನಡೆಯುತ್ತಿರುವ ೧೭೪ ವರ್ಷ ಇತಿಹಾಸದ ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಆಬ್ಸ್ಟೆಟ್ರಿಕ್ಸ್ ಕ್ರಿಟಿಕಲ್ ಕೇರ್ ಯೂನಿಟ್ ಎಂಬ ಪ್ರಸೂತಿಗಾಗಿಯೇ ಪ್ರತ್ಯೇಕ ವಿಶೇಷ ಘಟಕ ಆರಂಭಗೊಳ್ಳುತ್ತಿದೆ.

ಹೆರಿಗೆ ಸಂದರ್ಭ ತಾಯಿ-ಮಗು ಮರಣ ಪ್ರಮಾಣವನ್ನು ಶೂನ್ಯಕ್ಕೆ ತರುವ ಉದ್ದೇಶದಿಂದ ಲೇಡಿಗೋಷನ್ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಸಮಗ್ರ ವ್ಯವಸ್ಥೆಯ ತೀವ್ರ ನಿಗಾ ಘಟಕ ಸ್ಥಾಪನೆಯಾಗುತ್ತಿದೆ. ಘಟಕಕ್ಕೆ ರೋಟರಿ ಇಂಟರ್‌ನ್‌ಯಾಷನಲ್ ೧ ಕೋಟಿ ರು. ಮೊತ್ತದಲ್ಲಿ ೨೦ ಮಾನಿಟರ್ಸ್, ೫ ವೆಂಟಿಲೇಟರ್ಸ್, ಡಿಫಿಬ್ರಿಲ್ಲೇಟರ್, ಟ್ರಾನ್ಸ್‌ಪೋರ್ಟ್ ಇನ್ಕ್ಯುಬೇಟರ್, ಸಿರಿಂಜ್ ಇನ್ಫ್ಯೂಷನ್ ಪಂಪ್, ಕ್ರ್ಯಾಶ್ ಕಾರ್ಟ್ ಇತ್ಯಾದಿ ನೀಡಲಿದ್ದು, ಸರಬರಾಜು ಹಂತದಲ್ಲಿದೆ.

ಸರ್ಕಾರದ ಅನುದಾನ ಮತ್ತು ವೈಯಕ್ತಿಕ ಕೊಡುಗೆಗಳಿಂದ ಸುಮಾರು ೫೦ ಲಕ್ಷ ರು. ಮೊತ್ತದಲ್ಲಿ ಮೂಲಸೌಕರ್ಯ ವ್ಯವಸ್ಥೆ ಮಾಡಲಾಗುತ್ತಿದ್ದು, ಒಟ್ಟು ಸುಮಾರು ೧.೫ ಕೋಟಿ ರು. ಖರ್ಚಾಗಲಿದೆ. ಹೆರಿಗೆ ಪೂರ್ವ ಮತ್ತು ಹೆರಿಗೆ ನಂತರದ ಎರಡು ಗಂಟೆ ಬಾಣಂತಿ ಪಾಲಿನ ಗೋಲ್ಡನ್ ಅವರ್ ಆಗಿದ್ದು, ಈ ಸಂದರ್ಭ ಆರೋಗ್ಯದಲ್ಲಿ ಏರುಪೇರು ನಡೆಯುವ ಸಾಧ್ಯತೆಗಳಿವೆ. ತೀವ್ರ ನಿಗಾ ವಹಿಸಿ, ಜೀವ ಉಳಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ವ್ಯವಸ್ಥೆ ಮಹತ್ವದ್ದಾಗಿದೆ.ಸಾಮಾನ್ಯ-ಸಿಸೇರಿಯನ್ ಸಂದರ್ಭದಲ್ಲೂ ತೀವ್ರ ನಿಗಾ ಅಗತ್ಯವಿರುತ್ತದೆ. ಜನರಲ್ ವಾರ್ಡ್‌ಗೆ ಸ್ಥಳಾಂತರ ಮಾಡುವ ಸಂದರ್ಭ ಅಧಿಕ ರಕ್ತಸ್ರಾವ ಮತ್ತಿತರ ಸಮಸ್ಯೆಯಾಗುವ ಸಾಧ್ಯತೆಗಳಿದ್ದು, ನಿಗಾ ವಹಿಸಿ, ಐಸಿಯುಗೆ ಸ್ಥಳಾಂತರ ಮಾಡಲಾಗುತ್ತದೆ.ಪ್ರಸವ ಪೂರ್ವ ವೈಟಿಂಗ್ ಲಾಂಜ್, ಪ್ರಿ-ಲೇಬರ್ ವಾರ್ಡ್, ಮೇಜರ್ ಲೇಬರ್ ಕೌಂಟರ್ಸ್, ಎಕ್ಲಾಂಪ್ಸಿಯಾ ವಾರ್ಡ್, ಸೆಪ್ಟಿಕ್ ಲೇಬರ್ ಥಿಯೇಟರ್, ಎಮರ್ಜೆನ್ಸಿ ಆಬ್ಸ್ಟೆಟ್ರಿಕ್ ಆಪರೇಷನ್ ಥಿಯೇಟರ್, ಪ್ರಸವೋತ್ತರ ವಾರ್ಡ್, ಹೈ ಡಿಪೆಂಡೆನ್ಸಿ ಯೂನಿಟ್ ಸಹಿತ ೧೮ ಬೆಡ್‌ಗಳಿವೆ. ಹಿಂದಿನ ಸಾಮಾನ್ಯ ಬೆಡ್‌ಗಳನ್ನು ಮೇಲ್ದರ್ಜೆಗೇರಿಸಿ, ಪ್ರತಿ ಬೆಡ್‌ಗೂ ಮಾನಿಟರ್, ಆಕ್ಸಿಜನ್ ವ್ಯವಸ್ಥೆ ಮಾಡಲಾಗುತ್ತದೆ.ಲೇಡಿಗೋಷನ್ ಪ್ರಸೂತಿ ತೀವ್ರ ನಿಗಾ ಘಟಕದಲ್ಲಿನವಜಾತ ಶಿಶುವಿನ ಆರೋಗ್ಯಕ್ಕಾಗಿ ಟ್ರಾನ್ಸ್‌ಪೋರ್ಟ್ ಇನ್ಕ್ಯುಬೇಟರ್ ಅಳವಡಿಸಲಾಗುತ್ತಿದೆ. ತಾಯಿ ಹೊಟ್ಟೆಯಲ್ಲಿಸುರಕ್ಷಿತವಾಗಿರುವ ಶಿಶು ಹೊರಬರುತ್ತಲೇ ಬಿಸಿ ಅಥವಾ ಚಳಿ ತಡೆದುಕೊಳ್ಳದೆ, ಉಸಿರಾಟ ಮತ್ತಿತರ ಸಮಸ್ಯೆ ಎದುರಿಸುತ್ತದೆ. ಈಗ ಎನ್‌ಐಸಿಯು ಮೇಲಿನ ಮಹಡಿಯಲ್ಲಿದೆ. ಮುಂದೆ ಬ್ಯಾಟರಿ ಬ್ಯಾಕಪ್‌ ದೂಡಿಕೊಂಡು ಹೋಗಲು ಸಾಧ್ಯವಿರುವ ಇನ್ಕ್ಯುಬೇಟರ್‌ನಲ್ಲಿ ಉಷ್ಣತೆ ಕಾಪಾಡುವ ವ್ಯವಸ್ಥೆ ಇದೆ.ಲೇಡಿಗೋಷನ್‌ಗೆ ರಾಜ್ಯದ ೯ ಜಿಲ್ಲೆ ಮತ್ತು ಕೇರಳದ ೩ ಜಿಲ್ಲೆಗಳಿಂದ ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸೆಗೆ ಬರುತ್ತಿದ್ದು, ಅದರಲ್ಲಿ ಕ್ಲಿಷ್ಟಕರ ಪ್ರಕರಣ ಹೆಚ್ಚು ಬರುತ್ತಿವೆ. ಆಸ್ಪತ್ರೆಯು ತೃತೀಯ ಹಂತದ ಚಿಕಿತ್ಸಾ ಕೇಂದ್ರವಾಗಿ ಕಾರ್ಯಾಚರಿಸುತ್ತಿದೆ. ಕಳೆದ ೫ ವರ್ಷಗಳಲ್ಲಿ ೩೧,೬೮೫ ಹೆರಿಗೆ ನಡೆದಿದೆ. ಮುಂದಿನ ೫ ವರ್ಷಗಳಲ್ಲಿ೧೫,೮೩೦ ಹೆರಿಗೆ ನಿರೀಕ್ಷಿಸಿದ್ದು, ಅದಕ್ಕೆ ಪೂರಕ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಸಕ್ತ ಲೇಡಿಗೋಷನ್‌ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಾಗಿ ಡಾ.ದುರ್ಗಾ ಪ್ರಸಾದ್‌ ಕಾರ್ಯನಿರ್ವಹಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''