ಕನ್ನಡಪ್ರಭ ವಾರ್ತೆ ಗೌರಿಬಿದನೂರು
ದೈಹಿಕ ನ್ಯೂನತೆ ಹೊಂದಿದವರು ಅಂಗವಿಕಲರಲ್ಲ, ವಿಶೇಷಚೇತನರು. ಸಾಮಾನ್ಯರಲ್ಲಿ ಇರಲಾರದ ಕಲೆ, ಪ್ರತಿಭೆ ವಿಶೇಷಚೇತನರಲ್ಲಿದೆ. ಎಲ್ಲ ಕ್ಷೇತ್ರಗಳಲ್ಲಿ ವಿಶೇಷಚೇತನರು ಇಂದು ಕೆಲಸ ಮಾಡುತ್ತಿದ್ದಾರೆ. ಸಹಜವಾಗಿ ಇರುವವರಿಗೆ ವಿಶೇಷಚೇತನರೇ ಪ್ರೇರಣೆ ಎಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ತಿಳಿಸಿದರು.ಗೌರಿಬಿದನೂರಿನ ಪ್ರಜ್ಞಾ ಟ್ರಸ್ಟ್ ಸಂಸ್ಥೆಯ ಆಶ್ರಯದಲ್ಲಿ ಪ್ರತೀಕ್ಷಾ ಕೇಂದ್ರ, ಅರುಣೋದಯ ವಿಶೇಷ ಶಾಲೆ ಮತ್ತು ಶ್ರವಣದೋಷವುಳ್ಳ ಮಕ್ಕಳ ರೇವತಿ ಪುನರ್ವಸತಿ ಕೇಂದ್ರದಲ್ಲಿ ಏರ್ಪಡಿಸಿದ್ದ ಪೋಷಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರಿಗೆ ಉಚಿತ ಶಿಕ್ಷಣಅಂಗವಿಕಲರ ಕಲ್ಯಾಣಕ್ಕಾಗಿ ಸರ್ಕಾರ ಕಾಯ್ದೆ ರೂಪಿಸಿ ಅನೇಕ ಸೇವಾ ಸೌಲಭ್ಯಗಳನ್ನು ಒದಗಿಸಿದೆ. ಉಚಿತ ಶಿಕ್ಷಣದ ಪ್ರಯೋಜನ ಪಡೆದು ಮುಖ್ಯವಾಹಿನಿಗೆ ಬರಬೇಕು ಎಂದ ಶಾಸಕರು, ಸಂಸ್ಥೆಗೆ 50,000 ರು.ಗಳ ನಗದು ಮತ್ತು ಎರಡು ಕ್ವಿಂಟಲ್ ಅಕ್ಕಿ ನೀಡುವುದಾಗಿ ತಿಳಿಸಿದರು.ದೆಹಲಿಯ ಉದ್ಯಮಿ ಡಿ.ವಿ.ಶ್ರೀನಿವಾಸ್ ಮೂರ್ತಿ ಮಾತನಾಡಿ, ಅಂಗವಿಕಲರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಅವರು ಸಮಾಜದ ಮುಖ್ಯವಾಹಿನಿಗಳಲ್ಲಿ ಗುರುತಿಸಿಕೊಳ್ಳಬಲ್ಲರು. ಈ ಸಂಸ್ಥೆಗೆ ಮೊದಲಿನಿಂದಲೂ ನನ್ನಿಂದಾಗುತ್ತಿರುವ ಸಹಾಯವನ್ನು ಮಾಡುತ್ತಾ ಬಂದಿದ್ದೆನೆ, ಇನ್ನು ಮುಂದೆಯೂ ನನ್ನ ಕೈಲಾದಷ್ಟು ಮಾಡಿತ್ತೇನೆ ಎಂದರು.ಮಾರುತಿ ವ್ಯಾನ್ ಕೊಡುಗೆ
ಇದೇ ಸಂದರ್ಭದಲ್ಲಿ ರೇವತಿ ಶ್ರೀನಿವಾಸ ಮೂರ್ತಿ ರವರು ಈ ಸಂಸ್ಥೆಗೆ ಮಕ್ಕಳನ್ನು ಕರತರಲು ವಾಹನದ ಅವಶ್ಯಕತೆ ಇದೆ ಎಂದು ತಿಳಿದು ಶಾಸಕರ ಸಮ್ಮುಖದಲ್ಲಿ ಶಾಲೆಗೆ ಮಾರುತಿ ಓಮ್ನಿ ವಾಹನವನ್ನು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಜಿ. ವೇಣುಗೋಪಾಲರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ರೇವತಿ ಮೂರ್ತಿ, ಪ್ರಜ್ಞಾ ಟ್ರಸ್ಟ್ ಅಧ್ಯಕ್ಷರಾದ ಎಸ್. ವಿಜಯಲಕ್ಷ್ಮಿ, ಪ್ರಜ್ಞ ಟ್ರಸ್ಟ್ ನ ಸಂಸ್ಥಾಪಕ ಯೋಜನಾ ನಿರ್ದೇಶಕ ಎನ್. ನಾಗರಾಜ್ ಮತ್ತಿತರರು ಇದ್ದರು.