‘ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರಿಗೂ ಈ ಡಿ.ಕೆ.ಶಿವಕುಮಾರ್ ಇದ್ದಾನೆ. ನಿಮಗೂ ನನ್ನ ಹೃದಯ ಮತ್ತು ಮನೆಯ ಬಾಗಿಲು ತೆರೆದಿದೆ. ನೀವು ನನ್ನನ್ನು ಬಳಸಿಕೊಂಡು, ಅಗತ್ಯವಿರುವ ಸಹಾಯ ಪಡೆಯಬಹುದು’ ಎಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ರಾಮನಗರ : ‘ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರಿಗೂ ಈ ಡಿ.ಕೆ.ಶಿವಕುಮಾರ್ ಇದ್ದಾನೆ. ನಿಮಗೂ ನನ್ನ ಹೃದಯ ಮತ್ತು ಮನೆಯ ಬಾಗಿಲು ತೆರೆದಿದೆ. ನೀವು ನನ್ನನ್ನು ಬಳಸಿಕೊಂಡು, ಅಗತ್ಯವಿರುವ ಸಹಾಯ ಪಡೆಯಬಹುದು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ನ ಕಾರ್ಯಕರ್ತರಿಗೆ ಮುಕ್ತ ಆಹ್ವಾನ ನೀಡಿದರು.

ಮೊದಲ ಬಾರಿಗೆ ಭಾನುವಾರ ಅವರು ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಭಾನುವಾರ ಅವರು ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಿ, ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತವರಿನ ಜನತೆಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಎಂ, ನಿಮಗೆ ಒಳ್ಳೆಯದನ್ನು ಮಾಡಲು ನಾನು ಸಿದ್ಧನಾಗಿದ್ದೇ‌ನೆ. ದೇವರು ವರವನ್ನಾಗಲಿ, ಶಾಪವನ್ನಾಗಲಿ ನೀಡುವುದಿಲ್ಲ‌‌. ಅವಕಾಶ ಮಾತ್ರ ನೀಡುತ್ತಾನೆ. ನೀವು ಸಿಕ್ಕಂತಹ ಅವಕಾಶವನ್ನು ಬಳಸಿಕೊಳ್ಳಬೇಕು‌‌‌ ಎಂದು ಕರೆ ನೀಡಿದರು.

ಅನಿತಾ ಕುಮಾರಸ್ವಾಮಿಗೆ ಬೆಂಬಲ ನೀಡಿದ್ದೆವು

ಬಿಜೆಪಿಯನ್ನು ದೂರ ಇಡಬೇಕೆಂದು ಈ ಹಿಂದೆ ರಾಮನಗರ ಕ್ಷೇತ್ರ ಉಪಚುನಾಣೆಯಲ್ಲಿ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿಗೆ ಬೆಂಬಲ ನೀಡಿದ್ದೆವು. ಈ ಹಿಂದೆ ಆಗಿದ್ದನ್ನು ಮತ್ತೆ ನಾನೀಗ ಚರ್ಚೆ ಮಾಡುವುದಿಲ್ಲ. ಆದರೆ, ಜೆಡಿಎಸ್ ಹಾಗೂ ಬಿಜೆಪಿಯವರಿಗೆ ಕಾಂಗ್ರೆಸ್‌ನ ಬಾಗಿಲು ತೆರೆದಿದೆ. ನೀವು ಸಿಕ್ಕ ಅವಕಾಶವನ್ನು ಬಳಸಿಕೊಳ್ಳಿ ಎನ್ನುತ್ತಾ ಪಕ್ಷ ಸೇರ್ಪಡೆಗೆ ಮುಕ್ತ ಆಹ್ವಾನ ನೀಡಿದರು.

ಜನ, ನನ್ನನ್ನು ಬಂಡೆ ಎಂದು ಕರೆಯುತ್ತಾರೆ. ಆದರೆ, ಕಲ್ಲು ಪ್ರಕೃತಿ. ಕಲ್ಲನ್ನು ಕಡಿದರೆ ನಮಗೆ ಬೇಕಾದ ಆಕೃತಿ ಸಿಗುತ್ತದೆ. ಪೂಜಿಸಿದರೆ ಅದು ಸಂಸ್ಕೃತಿಯಾಗುತ್ತದೆ. ನೀವು ನನ್ನನ್ನು ಪೂಜಿಸಬೇಡಿ. ಈ ಕಲ್ಲನ್ನು ವಿಧಾನಸೌಧಕ್ಕೆ ಪ್ರವೇಶಿಸುವ ಮೆಟ್ಟಿಲಾಗಿ ಮಾಡಿಕೊಳ್ಳಿ ಎಂದು ಮನವಿ ಮಾಡಿದರು. ಈ ದೇಶದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ಮತ್ತೊಬ್ಬ ಡಿ.ಕೆ.ಶಿವಕುಮಾರ್‌ನನ್ನು ತಯಾರು ಮಾಡಲು ಸಾಧ್ಯವಿಲ್ಲ. ಇದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದರು.