ರಾಮನಗರ: ರಾಮನಗರವನ್ನು ಸಮಗ್ರ ಅಭಿವೃದ್ಧಿಪಡಿಸುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ರೂಪಿಸಲು 600 ಕೋಟಿ ರುಪಾಯಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇನೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು

ರಾಮನಗರ: ರಾಮನಗರವನ್ನು ಸಮಗ್ರ ಅಭಿವೃದ್ಧಿಪಡಿಸುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ರೂಪಿಸಲು 600 ಕೋಟಿ ರುಪಾಯಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇನೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ತಾಲೂಕಿನ ಕೆಂಪೇಗೌಡನದೊಡ್ಡಿ ಗ್ರಾಮದಲ್ಲಿ ಕೊಳವೆ ಬಾವಿ ಮತ್ತು ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಮನೆ ಮಗ ಡಿ.ಕೆ.ಶಿವಕುಮಾರ್ ಅವರು ಅಗತ್ಯ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದರು.

ನಗರಕ್ಕೆ ಹೊಂದಿಕೊಂಡಿರುವ ಕೆಂಪೇಗೌಡನದೊಡ್ಡಿ ಗ್ರಾಮದಲ್ಲಿ ಹೊಸ ಬಡಾವಣೆಗಳು ತಲೆ ಎತ್ತಿವೆ. ಆದರೆ, ಚರಂಡಿ, ರಸ್ತೆ, ಕುಡಿಯುವ ನೀರು ಸೇರಿದಂತೆ ಹಲವಾರು ಮೂಲಭೂತ ಸೌಕರ‍್ಯಗಳ ಕೊರತೆಯಿದೆ. ಈ ಸಮಸ್ಯೆ ನೀಗಿಸಲು ಗ್ರಾಮದ ಅಭಿವೃದ್ಧಿಗೆ 4 ಕೋಟಿ ರು. ಅನುದಾನ ನೀಡಿ, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ವಾರದೊಳಗೆ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗಲಿದ್ದು, ನ್ಯಾಯಾಲಯ, ಸಮುದಾಯ ಭವನ, ಅಂಬೇಡ್ಕರ್ ಭವನ, ರಸ್ತೆ, ಚರಂಡಿ, ಕುಡಿಯುವ ನೀರಿಗೆ, ಎಲ್ಲಾ ಪಂಚಾಯಿತಿಗಳ ಸಂಪರ್ಕ ರಸ್ತೆ ಅಭಿವೃದ್ಧಿಗಾಗಿ ಮತ್ತು ಸೇತುವೆಗಳ ಕಾಮಗಾರಿಗೆ 37 ಕೋಟಿ, ಲೋಕೋಪಯೋಗಿ ರಸ್ತೆಗಳಿಗೆ 50 ಕೋಟಿ ಅನುದಾನವನ್ನು ಸರ್ಕಾರವು ಬಿಡುಗಡೆ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರತಿ ಗ್ರಾಪಂಗೆ ಒಂದು ಕೋಟಿಯಂತೆ 21 ಪಂಚಾಯಿತಿಗಳಿಗೆ 21 ಕೋಟಿ ರು., ಅನುದಾನ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 35 ಕೋಟಿ ಹಾಗೂ ರಾಮನಗರದ ಅಭಿವೃದ್ಧಿಗೆ 80 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡುತ್ತಿದೆ. ಕೋರ್ಟಿನ ಕಾಮಗಾರಿಗೆ 76 ಕೋಟಿ, ಮಂಚನಬೆಲೆ ಎಡ ಮತ್ತು ಬಲದಂಡೆ ನಾಲೆ ಆಧುನೀಕರಣದ ಅಭಿವೃದ್ಧಿಗೆ 73 ಕೋಟಿ ಸೇರಿದಂತೆ ಸುಮಾರು 600 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರವು ಬಿಡುಗಡೆ ಮಾಡುತ್ತಿದೆ ಎಂದರು.

ಈ ದಿನ ಮುಖ್ಯಮಂತ್ರಿಗಳು ತಮ್ಮ ನಿವಾಸಕ್ಕೆ ನನ್ನನ್ನು ಕರೆಸಿ ಜಿಲ್ಲಾ ಕೇಂದ್ರದಲ್ಲಿ ಒಂದು ಅಧಿಕಾರಿಗಳ ಸಭೆ ನಡೆಸಬೇಕು ಎಂದು ತಿಳಿಸಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಬೇಕಾಗಿದೆ. ನವೆಂಬರ್ 3 ರಂದು ರಾಜೀವ್‌ಗಾಂಧಿ ಆರೋಗ್ಯ ವಿವಿಯ ಮತ್ತು ಜಿಲ್ಲೆಯ ಅಭಿವೃದ್ಧಿಗಳ ಸಭೆ, ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿ, ನಗರ ಪ್ರದೇಶ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸುವರು. ಮುಂದಿನ ಮೂರು ತಿಂಗಳೊಳಗೆ ಕಸಬಾ ಮತ್ತು ಕೈಲಾಂಚ ಗ್ರಾಮಕ್ಕೆ ಮಂಚನಬೆಲೆ ನೀರನ್ನು ಮೂರು ತಿಂಗಳೊಳಗೆ ಒದಗಿಸುವುದಾಗಿ ತಿಳಿಸಿದರು.

ಮುಖ್ಯಮಂತ್ರಿ ಅವರು ಕ್ಷೇತ್ರಕ್ಕೆ ಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನು ಕೇಳಿದ್ದಾರೆ. ಸುಮಾರು 600 ಕೋಟಿ ರು.ಗಳ ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇನೆ. ನಗರ ಪ್ರದೇಶದ ಫೂಲ್‌ಬಾಗ್, ಮರಳವಾಡಿ, ಮುದುವಾಡಿ, ಚಾಕನಹಳ್ಳಿ ಇಲ್ಲಿಗೆ ಸುಮಾರು 37 ಕೋಟಿ ರು.ಗಳ ಸೇತುವೆ ನಿರ್ಮಾಣಕ್ಕೆ ಮನವಿ ಮಾಡಿದ್ದೇನೆ. ಕ್ಷೇತ್ರದಲ್ಲಿ ಸಮುದಾಯ ಭವನ ಮತ್ತು ಅಂಬೇಡ್ಕರ್ ಭವನ ನಿರ್ಮಾಣಕ್ಕೆ 20 ಕೋಟಿ, ದೇವರಾಜ ಅರಸು ಭವನ ಮತ್ತು ವಾಲ್ಮೀಕಿ ಭವನ ಮತ್ತು ತಿಗಳರ ಸಮುದಾನ ಭವನದ ನಿರ್ಮಾಣಕ್ಕೆ ತಲಾ 2 ಕೋಟಿಯಂತೆ 6 ಕೋಟಿ ರು.ಗಳನ್ನು ಮುಖ್ಯಮಂತ್ರಿಗಳು ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಒಟ್ಟಾರೆ ಅವರ ಅವಧಿಯಲ್ಲಿ ನೀಡಿರುವ ಅನುದಾನದಿಂದ ಜಿಲ್ಲೆ ಮತ್ತು ಕ್ಷೇತ್ರ ಇಡೀ ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯಾಗಬೇಕೆಂದು ಬಯಸಿದ್ದಾರೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಂಚೇಗೌಡ, ಜಯಕರ್ನಾಟಕ ರವಿ, ಗುರುಪ್ರಸಾದ್, ಸಿದ್ದರಾಜು, ಅಶೋಕ್, ಶಂಕರ್, ಉಮೇಶ್, ವಿಜಿ, ಕರಿಮಾಸಿದ್ದ, ಸಿದ್ದರಾಜು ಮತ್ತಿತರರು ಹಾಜರಿದ್ದರು.

31ಕೆಆರ್ ಎಂಎನ್ 4.ಜೆಪಿಜಿ

ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿ ಗ್ರಾಮದಲ್ಲಿ ಕೊಳವೆ ಬಾವಿ ಮತ್ತು ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ಭೂಮಿಪೂಜೆ ನೆರವೇರಿಸಿದರು.