ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯಸಭೆ ಮತ್ತು ವಿಧಾನಪರಿಷತ್‌ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೇ ದಿನವಾಗಿದ್ದರೂ ಭಾನುವಾರ ತಡರಾತ್ರಿವರೆಗೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸದೇ ಇರುವುದು ಕುತೂಹಲ ಮೂಡಿಸಿದೆ.

ಆಡಳಿತಾರೂಢ ಕಾಂಗ್ರೆಸ್ ಪಕ್ಷ ಒಂದು ವಾರ ಮೊದಲೇ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದ್ದಲ್ಲದೆ, ಹೆಚ್ಚೂ ಕಡಿಮೆ ಎಲ್ಲಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಂತೆ ನೋಡಿಕೊಂಡಿತ್ತು. ಆದರೆ, ಬಿಜೆಪಿ ಮಾತ್ರ ಕೊನೆಯ ಕ್ಷಣದವರೆಗೂ ಅಳೆದೂ ತೂಗುವುದರಲ್ಲಿ ನಿರತವಾದಂತಿದೆ.

ಮಿತ್ರ ಪಕ್ಷ ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಮತ್ತೊಂದು ಅವಧಿಗೆ ಬೆಂಬಲಿಸುವ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳುವುದು ಕಷ್ಟವಾಗಿದ್ದರಿಂದ ಪಟ್ಟಿ ಬಿಡುಗಡೆ ವಿಳಂಬವಾಗಿದೆ ಎಂಬ ಮಾತು ಬಿಜೆಪಿ ಪಾಳೆಯದಿಂದ ಕೇಳಿಬಂದಿದೆ.

ಇರುವ ಒಂದು ಸ್ಥಾನಕ್ಕೆ ಗೌಡರಿಗೆ ಬೆಂಬಲ ನೀಡುವುದು ಬೇಡ ಎಂದಾದಲ್ಲಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಶಾಸಕ ನಿರ್ಮಲ್‌ಕುಮಾರ್ ಸುರಾನ ಅವರ ಹೆಸರುಗಳು ಪ್ರಮುಖವಾಗಿ ಪ್ರಸ್ತಾಪವಾಗಿವೆ.


ಇನ್ನು ಪರಿಷತ್ತಿನ ಲಭ್ಯವಾಗಲಿರುವ ಎರಡು ಸ್ಥಾನಗಳಿಗೆ ಪಕ್ಷದ ಮುಖಂಡರಾದ ಪ್ರಮೋದ್ ಮಧ್ವರಾಜ್‌, ಎನ್‌.ಮಹೇಶ್‌, ಲಿಂಗರಾಜು ಪಟೇಲ್, ಸಿ.ಮಂಜುಳಾ, ಶರಣು ತಳ್ಳಿಕೇರಿ, ರಘು ಕೌಟಿಲ್ಯ ಹೆಸರುಗಳು ಕೇಳಿಬರುತ್ತಿವೆ. ಆದರೆ, ಇವುಗಳನ್ನು ಕೈಬಿಟ್ಟು ಅಚ್ಚರಿ ಹೆಸರು ಪ್ರಕಟಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎನ್ನಲಾಗುತ್ತಿದೆ.