ನ್ಯಾಯಮೂರ್ತಿಗಳು,‌‌ ‘ನೀವು ಮೈಕ್ ಮುಂದೆ ವಾದ ಮಂಡಿಸಬೇಕಂತೆ. ನಿಮ್ಮ ವಾದವು ಪ್ರತಿವಾದಿ ಪರ ವಕೀಲರಿಗೆ ಕೇಳಿಸುವಂತಿಲ್ಲವಂತೆ’ ಎಂದು ಆರೋಪಿ ಪರ ವಕೀಲರಿಗೆ ಹೇಳಿದರು. ಈ ಮಾತು ಕೇಳಿ, ಆಗಾಗಲೇ ಸುಮಾರು ಎರಡೂವರೆ ತಾಸಿನಿಂದ ನಿಂತು ವಾದ ಮಂಡಿಸುತ್ತಿದ್ದ ಆರೋಪಿ ಪರ ವಕೀಲರು, ‘ಹಾಗಾದ್ರೆ ಬಾಯಿಯೊಳಗೆ ಮೈಕ್ ಇಟ್ಟುಕೊಳ್ಳಬೇಕಷ್ಟೆ’ ಎಂದು ಆವೇಶದಲ್ಲಿ‌‌ ನುಡಿದು ಅಬ್ಬರಿಸಿದರು.

 ಒಬ್ಬ ವಕೀಲರು ಕೋರ್ಟ್‌ನಲ್ಲಿ ಖುದ್ದು ಹಾಜರಿದ್ದು, ಮತ್ತೊಬ್ಬರು ವಿಡಿಯೋ ಸಂವಾದದ ಮೂಲಕ ಹಾಜರಿದ್ದಾಗ ಕೆಲ ಬಾರಿ ತಾಂತ್ರಿಕ ಕಾರಣ ಇಲ್ಲವೇ ನೆಟ್‌ವರ್ಕ್‌ ಸಮಸ್ಯೆ ಉಂಟಾದಾಗ ಕಿರಿಕಿರಿ ಆಗುವುದು ಸಹಜ. ಇಂಥ ಪ್ರಸಂಗ ನಡೆದಾಗ ಒಬ್ಬ ವಕೀಲರು ‘ನಾವೇನು ಬಾಯೊಳಗೆ ಮೈಕ್‌ ಇಟ್ಟುಕೊಂಡು ಮಾತನಾಡಬೇಕಷ್ಟೇ’ ಎಂದು ಅಬ್ಬರಿಸಿದಾಗ ಕೋರ್ಟ್‌ ಹಾಲ್‌ನಲ್ಲಿ ನಗುತುಂಬಿಕೊಂಡ ಘಟನೆ ನಡೆಯಿತು.

ಕೊಲೆ ಅಪರಾಧದ ಮೇಲೆ ಶಿಕ್ಷೆಗೆ ಒಳಗಾದ ರಾಜಕಾರಣಿಯೊಬ್ಬರು ಸಲ್ಲಿಸಿದ ಮೇಲ್ಮನವಿ ವಿಚಾರಣೆ ವೇಳೆ ಆರೋಪಿ ವಕೀಲರು ನ್ಯಾಯಪೀಠದ ಮುಂದೆ ದಾಖಲೆಗಳನ್ನು ತಿರುವುಹಾಕಿ, ಕಾನೂನು ಪುಸ್ತಕಗಳ‌ ಮೇಲೆ ಕಣ್ಣಾಡಿಸುತ್ತಾ ಜೋರಾಗಿ ವಾದ ಮಾಡುತ್ತಿದ್ದರು. ವಾದ ಮಾಡುತ್ತಿದ್ದ ಭರದಲ್ಲಿ ಮೈಕ್ ಇದ್ದ ಸ್ಥಳದಿಂದ ಆಚೆ ಹೋಗಿ ವಾದ ಮಂಡಿಸುತ್ತಿದ್ದರು.


 ಇದರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದ ಪ್ರತಿವಾದಿಯಾದ ತನಿಖಾ ಸಂಸ್ಥೆ ಪರ ವಕೀಲರಿಗೆ ಆರೋಪಿ ಪರ ವಕೀಲರ ವಾದ ಕೇಳಿಸದಾಯಿತು. ಕೂಡಲೇ ಅವರು ನ್ಯಾಯಮೂರ್ತಿಗಳನ್ನು ಉದ್ದೇಶಿಸಿ ‘ಸ್ವಾಮಿ... ಆರೋಪಿ ಪರ ವಕೀಲರ ವಾದ ನನಗೆ ಕೇಳಿಸುತ್ತಿಲ್ಲ.‌ ನಾನು ಅವರ ವಾದ ಕೇಳಿದರೆ ಮಾತ್ರ ಉತ್ತರ ನೀಡಲು ಸಾಧ್ಯವಾಗುತ್ತದೆ. ವಾದವೇ ಕೇಳದಿದ್ದರೆ, ನಾನು ಏನೂಂತ ಪ್ರತಿವಾದ ಮಂಡಿಸಲಿ? ಮೈಕ್ ಮುಂದೆ ಬಂದು ವಾದ ಮಂಡಿಸಲು ಆರೋಪಿ ಪರ ವಕೀಲರಿಗೆ ಸೂಚಿಸಿ’ ಎಂದು ಕೋರಿದರು.

ಆಗ ನ್ಯಾಯಮೂರ್ತಿಗಳು,‌‌ ‘ನೀವು ಮೈಕ್ ಮುಂದೆ ವಾದ ಮಂಡಿಸಬೇಕಂತೆ. ನಿಮ್ಮ ವಾದವು ಪ್ರತಿವಾದಿ ಪರ ವಕೀಲರಿಗೆ ಕೇಳಿಸುವಂತಿಲ್ಲವಂತೆ’ ಎಂದು ಆರೋಪಿ ಪರ ವಕೀಲರಿಗೆ ಹೇಳಿದರು. ಈ ಮಾತು ಕೇಳಿ, ಆಗಾಗಲೇ ಸುಮಾರು ಎರಡೂವರೆ ತಾಸಿನಿಂದ ನಿಂತು ವಾದ ಮಂಡಿಸುತ್ತಿದ್ದ ಆರೋಪಿ ಪರ ವಕೀಲರು ‘ಹಾಗಾದರೆ ಬಾಯಿಯೊಳಗೆ ಮೈಕ್ ಇಟ್ಟುಕೊಳ್ಳಬೇಕಷ್ಟೆ’ ಎಂದು ಆವೇಶದಲ್ಲಿ‌‌ ನುಡಿದು ಅಬ್ಬರಿಸಿದರು. ಈ ಮಾತು ನ್ಯಾಯಮೂರ್ತಿಗಳು ಹಾಗೂ ಕೋರ್ಟ್ ಹಾಲ್‌ ನಲ್ಲಿ ನೆರದವರೆಲ್ಲಾ ಗೊಳ್ ಅಂತ ನಕ್ಕರು

ಕಲಬುರಗಿ ಟ್ರಾಫಿಕ್‌ ಪೋಲೀಸರ ಟೆರಿಫಿಕ್‌ ಮೆಥಡ್‌..!

ಹೆಚ್ಚುಕಮ್ಮಿ ಕಳೆದ ಎರಡು ತಿಂಗಳಿಂದ ಕಲಬುರಗಿ ಟ್ರಾಫಿಕ್‌ ಪೊಲೀಸ್ರು ತುಂಬಾ ಚುರುಕಾಗಿದ್ದಾರೆ, ಇಂಟಿಗ್ರೇಟೆಡ್‌ ಟ್ರಾಫಿಕ್‌ ಮ್ಯಾನೇಜ್ಮೆಂಟ್‌ ಸಿಸ್ಟಂ (ಐಟಿಎಂಎಸ್‌) ಅಳವಡಿಸಿ ಕಲಬುರಗ್ಯಾಗ ಎಲ್ಲಿ ನೋಡಿದ್ರಲ್ಲಿ ಸಿಸಿಟೀವಿ ಕ್ಯಾಮೆರಾ ಹಾಕ್ಯಾರ್ರಿ...

ಹೆಲ್ಮೆಟ್‌ ಹಾಕ್ದೆ ಬಕ್ಕ ತಲಿಲೇ ಓಡಾಡೋ ಬೈಕ್‌ ಸವಾವರು, ಓವರ್‌ ಸ್ಪೀಡ್‌, ಸಿಗ್ನಲ್‌ ಜಂಪ್‌, ಟ್ರಿಬಲ್‌ ರೈಡ್‌, ಸೀಟ್‌ ಬೆಲ್ಟ್‌ ಇಲ್ದೆ ವಾಹನ ಚಲಾಯಿಸೋರು ಸೇರಿದ್ಹಂಗ ನವ ವಿಧದ ಸಂಚಾರ ನಿಯಮಗಳ ಭಂಜಕರ ಪತ್ತೆಗೆ ಕ್ಯಾಮೆರಾ ಕಣ್ಣಿಟ್ಟು ಒಂದೇ ಸವನೇ ದಂಡಾಸ್ತ್ರ ಹೂಡ್ಯಾರ!

ಅದು ಚಲೋ ಐತ್ರಿ. ಆದ್ರ ಡ್ರಿಂಕ್‌ ಆ್ಯಂಡ್‌ ಡ್ರೈವ್‌ನ ಈ ಸ್ಮಾರ್ಟ್‌ ಕ್ಯಾಮೆರಾ ಪತ್ತೆ ಹಚ್ಲಿಕ್ಕ ಆಗಲ್ಲ ನೋಡ್ರಿ, ಅದ್ಕ ಸಂಜೆ 6 ಗಂಟೆ ಆಂದ್ರ ಸಾಕ್ರಿ, ನಗರದ ಪ್ರಮುಖ ರಸ್ತೆ, ವೃತ್ತ, ಶಾಪಿಂಗ್‌ ಮಾಲ್‌, ತರಕಾರಿ ಮಾರುಕಟ್ಟೆ... ಹೀಂಗ ಸಿಕ್ಕಸಿಕ್ಕಲ್ಲಿ ಸಿವಿಲ್‌, ಟ್ರಾಫಿಕ್‌ ಪೋಲೀಸ್ರು ಠಳಾಯಿಸಿ, ನೀನು ಕುಡ್ದಿಯಾ, ನೀನು ಕುಡ್ದಿಯಾ, ಗಾಡಿ ಹಚ್ಚಿಲ್ಲಿ, ಬಾ ಇತ್ಲಾಗ... ಅಂತೆಲ್ಲಾ ಏಕದಂ ಬೈಕ್‌, ವಾಹನ ಸವಾರರ ಮ್ಯಾಗೆ ಮುಗಿಬೀಳ್ಳಾಕತ್ತಾರ!

ಡಿ ಆ್ಯಂಡ್‌ ಡಿ ಡಿಟೆಕ್ಟ್‌ ಮಾಡಾಕ ಬ್ರೀಥ್‌ ಅನಲೈಸರ್‌ಯಂತ್ರ ಇರ್ತದ. ಅದ ಬಳಸಿದ್ರ ಛಲೋ ಇತ್ತು. ಆದರೆ, ಅದೂ ಇಲ್ಲ. ಸೋ, ಈ ಪೊಲೀಸರು ಮಾರಿ ಬಳಿ ಬಂದು ಮುತ್ತು ಕೋಡೋರಂಗೆ ಕುಡ್ದಿಯೇನಾ ಅಂತ ಕೇಳೋದು ಕೇಳಾಕ ಮತ್ತು ನೋಡಾಕ ಹಾಗೂ ಅನುಭವಿಸಾಕ ಛಲೋ ಇಲ್ರಿ.

ನೂತನ ಹೋಮ್‌ ಮಿನಿಸ್ಟರ್ ಪ್ರಿಯಾಂಕ್‌ ಖರ್ಗೆ ಸಾಹೇಬ್ರ ಇದು ನಿಮ್‌ ಹೋಮ್ ಟೌನ್ ಐತೀ, ಇಲ್ಲಿ ಪೊಲೀಸ್ರಿಗಾ ಆ ಯಂತ್ರ ಕೊಡಿಸಿ ಅವ್ರು ನಮಗ್‌ ಮುತ್ತು ಕೋಡೋಕ್ ಬರೋದು ತಪ್ಪಿಸ್ರೀ ಅಂತ ಕಲಬುರಗಿ ಕುಡುಕರ ಸಂಘದ ಅಧ್ಯಕ್ಷರ ಬೇಡಿಕೇ ಐತ್ರಿ. ಸ್ವಲ್ಪ ಈ ಕಡೆ ಗಮನ ಕೋಡ್ರಲ...

 -ವೆಂಕಟೇಶ್‌ ಕಲಿಪಿ

-ಶೇಷಮೂರ್ತಿ ಅವಧಾನಿ