ಸಾರಾಂಶ
ಗದಗ: ಕಾನೂನು ಸಚಿವ ಎಚ್.ಕೆ. ಪಾಟೀಲ ಮೊದಲು ಕಾನೂನು ಪಾಲಿಸಬೇಕು. ಗಣೇಶ ವಿಸರ್ಜನೆ ವೇಳೆ ಎಸ್ಪಿ ಆದಿಯಾಗಿ ಪೊಲೀಸ್ ಇಲಾಖೆ ಸಮಯಕ್ಕೆ ಸರಿಯಾಗಿ ಡಿಜೆ ಬಂದ್ ಮಾಡಿಸಿದ್ದಾರೆ. ಆದರೆ, ಪ್ರತಿ ದಿನ ನಸುಕಿನ ಜಾವ 5 ಗಂಟೆಗೆ ಮಸೀದಿ ಮೇಲಿನ ಮೈಕ್ ಬಂದ್ ಮಾಡಿಸುವ ಕೆಲಸವೂ ಆಗಬೇಕು. ಸುಪ್ರೀಂ ಕೋರ್ಟ್ ಆದೇಶ ಕೇವಲ ಹಿಂದೂಗಳ ಧಾರ್ಮಿಕ ಹಬ್ಬಗಳಿಗೆ ಮಾತ್ರ ಅನ್ವಯ ಆಗುವುದಿಲ್ಲ. ಎಲ್ಲ ಧರ್ಮಗಳಿಗೆ ಅನ್ವಯಿಸಬೇಕು ಎಂದು ಶಿವರಾಮಕೃಷ್ಣ ಸೇವಾ ಸಮಿತಿ ಅಧ್ಯಕ್ಷ ರಾಜು ಖಾನಪ್ಪನವರ ಆಗ್ರಹಿಸಿದರು.
ಅವರು ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲರೂ ಪಾಲನೆ ಮಾಡೋಣ, ಆದರೆ ಗಣೇಶ ವಿಸರ್ಜನೆ ವೇಳೆ ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು ಎಂದು ಹಿಂದೂ ಮುಖಂಡರುಗಳಿಗೆ ಬುದ್ಧಿ ಹೇಳುತ್ತಾರೆ. ಆದರೆ, ಇದು ಕೇವಲ ಹಿಂದೂಗಳಿಗೆ ಅಷ್ಟೆನಾ? ಮಸೀದಿಯಲ್ಲಿ ದಿನನಿತ್ಯ ಹೆಚ್ಚು ಮೈಕ್ ಸೌಂಡ್ ಇದ್ದರೂ ಕ್ಯಾರೆ ಎನ್ನುತ್ತಿಲ್ಲ. ಜಿಲ್ಲಾ ನ್ಯಾಯಾಲಯ, ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಪಕ್ಕದಲ್ಲೇ ಹೆಚ್ಚು ಆಜಾನ್ ಸೌಂಡ್ ಬರುತ್ತದೆ. ಇವರಿಗೆ ಕಾನೂನು ಪಾಲಿಸುವಂತೆ ಹೇಳುವರಾರು ಯಾರು? ಎಂದು ಪ್ರಶ್ನಿಸಿದರು.ಈದ್ ಮಿಲಾದ್ ದಿನ ಮುಸಲ್ಮಾನರು ಡಿಜೆ ಬಳಸಿದ್ದರು. ಅವರ ವಿರುದ್ಧ ಯಾಕೆ ಕ್ರಮ ಇಲ್ಲ. ಸೆ. 19ರಂದು ಮತ್ತೊಮ್ಮೆ ಈದ್ ಮಿಲಾದ್ ಕಾರ್ಯಕ್ರಮ ನಡೆಯಲಿದೆ ಅಂತ ಮಾಹಿತಿ ಇದೆ. ಈ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನೀಡಬಾರದು. ನೀಡಿದರೆ ಶಿವರಾಮಕೃಷ್ಣ ಸೇವಾ ಸಮಿತಿ ವತಿಯಿಂದ ತಡೆಯುವ ಕೆಲಸ ಮಾಡಬೇಕಾಗುತ್ತದೆ. ಮುಸಲ್ಮಾನ ಯುವಕರು ತಮ್ಮ ಸಮುದಾಯದ ಮುಖಂಡರ ಆದೇಶ ಧಿಕ್ಕರಿಸಿ ಡಿಜೆ ಹಚ್ಟಿದ್ದಾರೆ. ನಿಮ್ಮ ಸಮುದಾಯದವರೇ ನಿಮ್ಮ ಮಾತು ಕೇಳುವುದಿಲ್ಲ ಅಂದ ಮೇಲೆ ಹಿಂದೂ ಹಬ್ಬಗಳಿದ್ದಾಗ ಬಹಿರಂಗ ಹೇಳಿಕೆ ಯಾಕೆ ನೀಡ್ತಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವಯೋಗಿ ಹಿರೇಮಠ, ಸೋಮು ಗುಡಿ, ರಾಜು ಡಮಾಮ್, ರಾಚೋಟಿ ಖಾಡಪ್ಪನವರ, ವಿಶ್ವನಾಥ ಶೀರಿ, ಕುಮಾರ ನಡಗೇರಿ, ರಾಜು ಗದ್ದಿ, ಕಿರಣ್ ಹಿರೇಮಠ, ಸತೀಶ್ ಕುಂಬಾರ, ವಿಶಾಲ್ ಗೋಕಾವಿ ಉಪಸ್ಥಿತರಿದ್ದರು.ಬೆಟಗೇರಿಯಲ್ಲಿ 11ನೇ ದಿನದ ವಿಸರ್ಜನೆ ವೇಳೆ ಪಿಎಸ್‌ಐ 10 ವರ್ಷದ ಬಾಲಕ, ವಯೋವೃದ್ಧರು ಹಾಗೂ ಮಹಿಳೆಯರ ಮೇಲೆ ಲಾಠಿಯಿಂದ ಹೊಡೆದಿದ್ದಾರೆ. ಅಮಾಯಕರ ಮೇಲೆ ಲಾಠಿ ಬೀಸುವುದು ಯಾವ ಕಾನೂನಿನಲ್ಲಿದೆ? ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೂಡಲೇ ತನಿಖೆ ಮಾಡಿ ಪಿಎಸ್ಐ ವಿರುದ್ಧ ಕ್ರಮ ಜರುಗಿಸಬೇಕು. ಹಿಂದೂಗಳ ಧಾರ್ಮಿಕ ಹಬ್ಬಗಳನ್ನು ಹತ್ತಿಕ್ಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸರ ಮೂಲಕ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಶಿವರಾಮಕೃಷ್ಣ ಸೇವಾ ಸಮಿತಿ ಅಧ್ಯಕ್ಷ ರಾಜು ಖಾನಪ್ಪನವರ ಹೇಳಿದರು.