ಕೋಮು ಗಲಭೆ ನಿಯಂತ್ರಣಕ್ಕೆ ವಿಶೇಷ ಕಾರ್ಯಪಡೆಗೆ ಇಂದು ಚಾಲನೆ

KannadaprabhaNewsNetwork |  
Published : Jun 13, 2025, 02:47 AM IST
ಮಂಗಳೂರಲ್ಲಿ ಚಾಲನೆಗೊಳ್ಳಲಿರುವ ವಿಶೇಷ ಕಾರ್ಯಪಡೆ  | Kannada Prabha

ಸಾರಾಂಶ

ಕರಾವಳಿ ಜಿಲ್ಲೆಗಳಲ್ಲಿ ಪದೇ ಪದೇ ಕೋಮು ಸಂಘರ್ಷ, ಕೋಮು ಆಧಾರಿತ ಹತ್ಯೆಗಳಾಗುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೂತನವಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ. ಜೂ. ೧೩ರಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯನ್ನು ಒಳಗೊಂಡ ಈ ವಿಶೇಷ ಕಾರ್ಯಪಡೆಯ ಕೇಂದ್ರ ಕಚೇರಿ ಮಂಗಳೂರಿನಲ್ಲಿ ಇರಲಿದೆ.

ಈ ವಿಶೇಷ ಕಾರ್ಯಪಡೆಗೆ 248 ಮಂದಿ ಸಿಬ್ಬಂದಿ, ಮಂಗಳೂರು ಕೇಂದ್ರ ಕಚೇರಿ

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿ ಜಿಲ್ಲೆಗಳಲ್ಲಿ ಪದೇ ಪದೇ ಕೋಮು ಸಂಘರ್ಷ, ಕೋಮು ಆಧಾರಿತ ಹತ್ಯೆಗಳಾಗುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೂತನವಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ. ಜೂ. ೧೩ರಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯನ್ನು ಒಳಗೊಂಡ ಈ ವಿಶೇಷ ಕಾರ್ಯಪಡೆಯ ಕೇಂದ್ರ ಕಚೇರಿ ಮಂಗಳೂರಿನಲ್ಲಿ ಇರಲಿದೆ.ಸ್ಪೆಷಲ್ ಆಕ್ಷನ್ ಫೋರ್ಸ್ (ಎಸ್‌ಎಎಫ್)ಗೆ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಯಲ್ಲಿದ್ದ ಸಿಬ್ಬಂದಿಯನ್ನೇ ನಿಯೋಜಿಸಲಾಗಿದೆ. ಡಿಐಜಿ ದರ್ಜೆಯ ಅಧಿಕಾರಿಯೊಬ್ಬರು ಇದರ ಮುಖ್ಯಸ್ಥರಾಗಿರಲಿದ್ದು, ಸದ್ಯಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರೇ ಹೆಚ್ಚುವರಿಯಾಗಿ ನೇತೃತ್ವ ವಹಿಸಲಿದ್ದಾರೆ. ಎಎನ್‌ಎಫ್ ಪಡೆಯಿಂದ ಎರವಲು ಪಡೆದ ೨೪೮ ಸಿಬ್ಬಂದಿಯನ್ನು ಹೊಸ ಕಾರ್ಯಪಡೆಗೆ ನಿಯೋಜನೆ ಮಾಡಲಾಗಿದ್ದು, ಇವನ್ನು ಮೂರು ತುಕಡಿಗಳಾಗಿ ವಿಭಜಿಸಲಾಗಿದೆ. ಪ್ರತಿ ತುಕಡಿಯಲ್ಲಿ ತಲಾ ೭೮ ಸಿಬಂದಿ ಇರಲಿದ್ದಾರೆ.ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಈ ಕಾರ್ಯಪಡೆಯು ವಿಶೇಷ ನಿಗಾ ವಹಿಸಲಿದ್ದು, ಯಾವುದೇ ಅಹಿತಕರ ಘಟನೆಗಳಾದರೂ ಈ ಪಡೆಯ ಸದಸ್ಯರು ತುರ್ತಾಗಿ ಹಾಜರಾಗಲಿದ್ದಾರೆ. ಕೋಮು ಸೂಕ್ಷ್ಮ ಪ್ರದೇಶದಲ್ಲಿ ತಮ್ಮದೇ ಆದ ಗುಪ್ತಚರ ದಳವನ್ನೂ ಈ ಕಾರ್ಯಪಡೆ ಹೊಂದಿರುತ್ತದೆ. ಆಮೂಲಕ ಸಂಭಾವ್ಯ ಕೋಮು ಹಿಂಸಾಚಾರ, ಗಲಭೆಯಂತಹ ಸಂಚುಗಳನ್ನು ವಿಫಲಗೊಳಿಸಲು ಕಾರ್ಯಪಡೆಯನ್ನು ಸಜ್ಜುಗೊಳಿಸಲಾಗಿದೆ. ಕೋಮು ದ್ವೇಷದ ವಿಚಾರದ ಮೇಲೆ ನಿಗಾ ವಹಿಸುವುದು, ಮೂಲಭೂತವಾದಿ ಚಟುವಟಿಕೆ ಬಗ್ಗೆ ನಿಗಾ ಇಡುವುದು, ಜಾಲತಾಣಗಳ ಮೇಲೆ ಸೂಕ್ಷ್ಮ ನಿಗಾ ಇಡುವ ಕೆಲಸವನ್ನೂ ಇದರಲ್ಲಿರುವ ಗುಪ್ತಚರರು ಮಾಡಲಿದ್ದಾರೆ.ಡಿಐಜಿ ದರ್ಜೆಯ ಮುಖ್ಯಸ್ಥರ ಕೈಕೆಳಗೆ ಡಿವೈಎಸ್‌ಪಿ ಇರುತ್ತಾರೆ. ಸದ್ಯಕ್ಕೆ ಮಂಗಳೂರಿನಲ್ಲಿ ಈ ಹಿಂದೆ ಸುದೀರ್ಘ ಕಾಲ ಕೆಲಸ ಮಾಡಿ ಅನುಭವ ಹೊಂದಿರುವ ಕೆ.ಯು ಬೆಳ್ಳಿಯಪ್ಪ ಅವರನ್ನು ಕಾರ್ಯಪಡೆಯ ಡಿವೈಎಸ್ಪಿ ಹುದ್ದೆಗೆ ನಿಯೋಜನೆ ಮಾಡಲಾಗಿದೆ. ಅವರ ಕೈಕೆಳಗೆ ನಾಲ್ವರು ಇನ್ಸ್ ಪೆಕ್ಟರ್, ೧೬ ಪಿಎಸ್‌ಐಗಳು ಇರುತ್ತಾರೆ. ಒಟ್ಟು ೨೪೮ ಸಿಬಂದಿಯನ್ನು ಒಳಗೊಂಡ ಕಾರ್ಯಪಡೆ ಇದಾಗಿದ್ದು, ಮಂಗಳೂರು ಪೊಲೀಸ್ ಮೈದಾನದಲ್ಲಿ ಈ ಪಡೆಯ ಕವಾಯತು ಮಾಡಲಾಗಿದೆ. ನಕ್ಸಲ್ ನಿಗ್ರಹ ಪಡೆಯಲ್ಲಿದ್ದ ಇನ್ಸ್ ಪೆಕ್ಟರ್ ಸಹಿತ ೨೪೮ ಸಿಬಂದಿಯನ್ನು ಸ್ಪೆಷಲ್ ಏಕ್ಷನ್ ಫೋರ್ಸ್ ಆಗಿ ಹೊಸತಾಗಿ ಕಾರ್ಯಪಡೆ ರಚಿಸಲಾಗಿದೆ. ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಯಾವುದೇ ಠಾಣೆ ವ್ಯಾಪ್ತಿಯಲ್ಲಿ ಕೋಮು ಆಧಾರಿತ ಗಲಾಟೆ, ಇನ್ನಿತರ ಬೆಳವಣಿಗೆಯಾದರೆ ಈ ಕಾರ್ಯಪಡೆ ನಿಯಂತ್ರಿಸಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ