ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಭಾರ ಎತ್ತುವ ಸ್ಪರ್ಧೆಯಲ್ಲಿ ವಿಜೇತರಿಗೆ ಜಾತ್ರೆ ಸಮಿತಿಯಿಂದ ಪ್ರಶಸ್ತಿ ಪತ್ರ, ಬೆಳ್ಳಿ ಕಡಗ, ನಗದು ಹಣ ನೀಡಿ ಗೌರವಿಸಲಾಯಿತು.
ಎರಡು ವರ್ಷದ ಹಿಂದೆ ಹರನಾಳ ಗ್ರಾಮದ ಆನಂದ ಗುಣಕಿ ಅವರು 2.15 ಕೆಜಿ ಗುಂಡುಕಲ್ಲು ಎತ್ತುವ ಜಟ್ಟಿಗೆ 50 ತೊಲಿಯ ಬೆಳ್ಳಿ ಗದೆಯನ್ನು ಈ ಬಾರಿಯೂ ಯಾರೂ ಗೆಲ್ಲಲಿಲ್ಲ. ಗದೆ ಜಾತ್ರಾ ಕಮಿತಿ ಬಳಿಯೇ ಉಳಿದುಕೊಂಡಿತು.ಬಾದಾಮಿ ತಾಲೂಕಿನ ಹಳ್ಳಿಗೇರಿಯ 8 ವರ್ಷದ ಬಾಲಕ ಭರತಗೌಡ ಕಲ್ಲಪ್ಪ ಕಳಸಗೌಡರ 5ಕೆಜಿಯಿಂದ 24 ಕೆಜಿ ಸಂಗ್ರಾಣಿ ಕಲ್ಲು ಸಾಗು ಎತ್ತಿದೆ, ಜೀರಲಬಾವಿಯ 10 ವರ್ಷದ ಮಂಜುನಾಥ ಬಿರಾದಾರ 18 ಕೆಜಿ ಸಂಗ್ರಾಣಿ ಕಲ್ಲು ಸಾಗು ಎತ್ತಿದ. 75 ವಯಸ್ಸಿನ ನಿಡಗುಂದಿ ತಾಲೂಕಿನ ಅರಷಣಗಿ ದುಂಡಪ್ಪ ಕುಂಬಾರ ಒಂದು ಸಾವಿರ ಉಟಬೈಸಿ ಹಾಕುವುದಾಗಿ ವೇದಿಕೆಯೇರಿ ಬಿಟ್ಟು ಬಿಡದೇ ಉಟಬೈಸಿ ಹಾಕಿ ಇಳಿವಯಸ್ಸಿನಲ್ಲಿಯೂ ತಮ್ಮ ತಾಕತ್ತು ಪ್ರದರ್ಶಿಸಿದರು.
ಪಟ್ಟಣದ ಹಿರಿಯರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜನಪದ ಗಾಯಕ ಬಸವರಾಜ ಹಾರಿವಾಳ ಕಾರ್ಯಕ್ರಮ ನಡೆಸಿಕೊಟ್ಟರು. ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಹಣ, ಪ್ರಶಸ್ತಿ ಪತ್ರ, ಬೆಳ್ಳಿ ಕಡೆ ನೀಡಿ ಸನ್ಮಾನಿಸಲಾಯಿತು.
ಸಂಗ್ರಾಣಿ ಕಲ್ಲು ಸಾಗ (1 ಕ್ವಿಂಟಾಲ್)- ಜತ್ತ ತಾಲೂಕಿನ ಆಸಂಗಿಯ ಅಫಜಲ್ ಮುಜಾವರ ಪ್ರಥಮ, ಬೀಳಗಿ ತಾಲೂಕಿನ ಬಿಸನಾಳದ ರಿಯಾಜ ಜಮಾದಾರ ದ್ವಿತೀಯ, ಸಂತೋಷ ಬಿರಾದಾರ, ನಾಗೂರಿನ ಗುರುರಾಜ ಭದ್ರಗೊಂಡ ತೃತೀಯ ಸ್ಥಾನ, ಸಂಗ್ರಾಣಿ ಕಲ್ಲು (2 ಕ್ವಿಂಟಾಲ್) ವತ್ತಿ ಎತ್ತುವ ಸ್ಪರ್ಧೆಯಲ್ಲಿ ಗುಳೇದಗುಡ್ಡದ ವಿಠ್ಠಲ ಮುತ್ತಪ್ಪ ಮನಿಕಟ್ಟಿ ಪ್ರಥಮ, ಗೋಕಾಕ ತಾಲೂಕಿನ ಮಳ್ಳವಂಕಿ ಗ್ರಾಮದ ಶಿವಾನಂದ ಜಾಡನವರ ದ್ವಿತೀಯ, ನಾಗೂರ ಗ್ರಾಮದ ಮುತ್ತಪ್ಪ ಶರಣಪ್ಪ ಕಡ್ಲಿಮಟ್ಟಿ ತೃತೀಯ ಸ್ಥಾನ, ಗುಂಡು ಎತ್ತುವ (2 ಕ್ವಿಂಟಾಲ್) ಸ್ಪರ್ಧೆಯಲ್ಲಿ ಗುನ್ನಾಪೂರಿನ ಶಿವಲಿಂಗಪ್ಪ ಶಿವೂರ ಪ್ರಥಮ,ನಾಗಠಾಣದ ಬೀರಪ್ಪ ಗೂಳಪ್ಪ ಪೂಜಾರಿ ದ್ವಿತೀಯ, ಮಸಬಿನಾಳದ ಮಾಳಪ್ಪ ಬಿಸನಾಳ ತೃತೀಯ ಸ್ಥಾನ ಪಡೆದುಕೊಂಡರು.
ಸೈ ಎನಿಸಿಕೊಂಡ ಬಲಭೀಮರ ಹಲ್ಲಿನಿಂದ ಹಾರಿ ಒಗೆಯವ ಸ್ಪರ್ಧೆಯಲ್ಲಿ ಮಡ್ಡಿಮಣ್ಣೂರಿನ ಸದಾಂ ಬಾಡಬಾಳ ಪ್ರಥಮ, ಮುಳಸಾವಳಗಿಯ ರಮೇಶ ಪಾಟೀಲ ದ್ವಿತೀಯ, ಇಂಗಳಗಿಯ ಮಾಳಪ್ಪ ಪೂಜಾರಿ ತೃತೀಯ ಸ್ಥಾನ ಪಡೆದುಕೊಂಡರು. ಗುನ್ನಾಪುರಿನ ಭೀರಪ್ಪ ಲೋಗಾಂವಿ ಮೇಟನಾಲಿಗೆ ಮೇಲೆ ನಿಂತು ಚೀಲ ಎತ್ತಿದರು. ತೆಲಗಿಯ ಕಾಂತಪ್ಪ ಈರಗಾರ ಅವರು 86 ಕೆಜಿಯ ಕಲ್ಲನ್ನು ಹಗ್ಗದಿಂದ ಕಟ್ಟಿ ಹಲ್ಲಿನಿಂದ ಎಳೆದರು. ಮುಳಸಾವಳಗಿಯ ರಮೇಶ ಪಾಟೀಲರು ನಾಲ್ಕು ಹಾರಿ ಕಟ್ಟಿ ಮೈ ಮೇಲೆ ಎತ್ತಿ ಸೈ ಎನಿಸಿಕೊಂಡರು.