ಒಳಮೀಸಲಾತಿ ಸಮೀಕ್ಷೆಯನ್ನು ಚುರುಕುಗೊಳಿಸಿ: ಜಿಲ್ಲಾಧಿಕಾರಿ ಡಾ.ಕುಮಾರ

KannadaprabhaNewsNetwork | Published : May 11, 2025 1:16 AM

೨೦೧೧ ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ೬೧,೪೨೩ ಪರಿಶಿಷ್ಟ ಜಾತಿಯ ಮನೆಗಳಿದ್ದು, ೧೫,೯೭೩ ಮನೆಗಳಿಗೆ ಮಾತ್ರ ಭೇಟಿ ನೀಡಿ ಸಮೀಕ್ಷೆ ನಡೆಸಲಾಗಿದೆ. ಪ್ರತಿ ದಿನ ಆಯಾ ತಾಲೂಕಿನ ತಹಸೀಲ್ದಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಗತಿ ಕುರಿತು ಪರಿಶೀಲನೆ ನಡೆಸಿ ಶೇ.೧೦೦ ರಷ್ಟು ಸಾಧನೆ ಹಾಗೂ ಆಯಾ ದಿನ ನಿಗದಿಪಡಿಸಿರುವ ಗುರಿ ಸಾಧಿಸಬೇಕು ಎಂದು ನಿರ್ದೇಶನ ನೀಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಏಕಸದಸ್ಯ ವಿಚಾರಣಾ ಆಯೋಗದ ನಿರ್ದೇಶನದಂತೆ ದತ್ತಾಂಶ ಶೇಖರಿಸುವ ಸಮೀಕ್ಷೆಯು ಜಿಲ್ಲೆಯಲ್ಲಿ ಮೇ ೫ ರಿಂದ ಪ್ರಾರಂಭವಾಗಿದ್ದು, ಶೇ.೨೬ ರಷ್ಟು ಮಾತ್ರ ಸಾಧನೆಯಾಗಿರುತ್ತದೆ. ಸಮೀಕ್ಷೆಯನ್ನು ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮುಖಂಡರ ಸಭೆ ನಡೆಸಿ ಮಾತನಾಡಿ, ಜಿಲ್ಲೆಯ ಎಲ್ಲಾ ಮನೆಗಳಿಗೂ ಭೇಟಿ ನೀಡಿ ಸಮೀಕ್ಷೆ ನಡೆಸಿ, ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿ ಕುಟುಂಬದವರು ಜಾತಿ ಗಣತಿ ಸಮೀಕ್ಷೆಯಿಂದ ವಂಚಿತರಾಗದಂತೆ ಸಮೀಕ್ಷೆ ನಡೆಸುವಂತೆ ಸೂಚಿಸಿದರು.

೨೦೧೧ ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ೬೧,೪೨೩ ಪರಿಶಿಷ್ಟ ಜಾತಿಯ ಮನೆಗಳಿದ್ದು, ೧೫,೯೭೩ ಮನೆಗಳಿಗೆ ಮಾತ್ರ ಭೇಟಿ ನೀಡಿ ಸಮೀಕ್ಷೆ ನಡೆಸಲಾಗಿದೆ. ಪ್ರತಿ ದಿನ ಆಯಾ ತಾಲೂಕಿನ ತಹಸೀಲ್ದಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಗತಿ ಕುರಿತು ಪರಿಶೀಲನೆ ನಡೆಸಿ ಶೇ.೧೦೦ ರಷ್ಟು ಸಾಧನೆ ಹಾಗೂ ಆಯಾ ದಿನ ನಿಗದಿಪಡಿಸಿರುವ ಗುರಿ ಸಾಧಿಸಬೇಕು ಎಂದು ನಿರ್ದೇಶನ ನೀಡಬೇಕು ಎಂದರು.

ಸಮೀಕ್ಷೆಗೆ ೧೮೮೯ ಗಣತಿದಾರರನ್ನು ನೇಮಕ ಮಾಡಲಾಗಿದೆ. ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ತಹಸೀಲ್ದಾರ್, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಗಣತಿದಾರರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ಪ್ರತಿದಿನದ ಸಮೀಕ್ಷೆಯ ವಿವರಗಳನ್ನು ಖುದ್ದಾಗಿ ಜಿಲ್ಲಾಡಳಿತಕ್ಕೆ ನೀಡಬೇಕು. ಮುಂದಿನ ಮೂರು ದಿನಗಳಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಅವರ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆಯನ್ನು ನಡೆಸಬೇಕು ಎಂದು ಗಡುವು ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ, ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿ.ರಾಜಮೂರ್ತಿ, ನಗರಸಭೆ ಪೌರಾಯುಕ್ತೆ ಪಂಪಾಶ್ರೀ ಸೇರಿದಂತೆ ಇತರರಿದ್ದರು.

ಐಪಿಎಲ್ ಟಿಕೆಟ್ ಸೇಲ್‌ ಅವ್ಯವಹಾರದ

ಬಗ್ಗೆ ತುರ್ತು ಕ್ರಮಕ್ಕೆ ಗೂಳಿಗೌಡ ಆಗ್ರಹ

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಹಾಗೂ ಡಿಎನ್ಎ ಎಂಟರ್‌ಟೇನ್ಮೆಂಟ್ ನೆಟ್‌ವರ್ಕ್ ಕಂಪನಿಯಿಂದ ಐಪಿಎಲ್‌ ಸೇರಿದಂತೆ ವಿವಿಧ ಕ್ರಿಕೆಟ್ ಪಂದ್ಯಾವಳಿ ಆಯೋಜನೆಯಲ್ಲಿ ನಿಯಮ ಉಲ್ಲಂಘನೆ ಮತ್ತು ಅವ್ಯವಹಾರಗಳ ಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ಟೆಸ್ಟ್, ಏಕದಿನ ಹಾಗೂ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲು ಕೆಎಸ್‌ಸಿಎ ಮತ್ತು ಡಿಎನ್‌ಎ ಒಪ್ಪಂದ ಮಾಡಿಕೊಂಡಿವೆ. ಪಂದ್ಯಾವಳಿಗಳ ಆಯೋಜನೆಯಲ್ಲಿ ನಿಯಮಬಾಹಿರವಾಗಿ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ಇಲಾಖೆಗಳಿಂದ ಅನುಮತಿ ಪಡೆಯದೆ ಸರ್ಕಾರದ ಆದೇಶಗಳನ್ನು ಉಲ್ಲಂಘಿಸುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಕ್ರೀಡಾ ಮತ್ತು ಯುವಜನ ಇಲಾಖೆ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಸರ್ಕಾರ ಹಾಗೂ ಇಲಾಖೆಗೆ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ ಎಂದು ಗೂಳಿಗೌಡ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕ್ರೀಡಾಂಗಣಕ್ಕೆ ಆಗಮಿಸುವ ಅತಿಥಿಗಳಿಗೆ ಪೂರೈಕೆಯಾಗುತ್ತಿರುವ ಆಹಾರ ಮತ್ತು ಪಾನಿಯಗಳು ಕಳಪೆಯಾಗಿವೆ. ಅತಿಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಪ್ರಾಯೋಜಕ ಸಂಸ್ಥೆಯು ಯಾವುದೇ ನಿಯಮಗಳಿಗೆ ಬೆಲೆ ನೀಡದೆ ತನ್ನಿಷ್ಟದಂತೆ ನಡೆದುಕೊಳ್ಳುತ್ತಿದೆ. ಬಿಬಿಎಂಪಿ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆಯಿಂದ ಪೂರ್ವಾನುಮತಿ ಮತ್ತು ನಿರಾಕ್ಷೇಪಣ ಪತ್ರಗಳನ್ನು ಪಡೆಯುವುದು ಕಡ್ಡಾಯ ನಿಯಮವಾಗಿದೆ. ಆದರೆ, ಪ್ರಸ್ತುತ ಪಂದ್ಯಾವಳಿಗಳಲ್ಲಿ ಯಾವುದೇ ನಿಯಮಗಳನ್ನು ಪಾಲಿಸದೆ, ಏಕಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಬಗ್ಗೆ ಕೂಡಲೇ ಕ್ರಮ ವಹಿಸಬೇಕು ಎಂದು ಗೂಳಿಗೌಡ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.