ಸುಖ-ಶಾಂತಿ ಬದುಕಿಗೆ ಅಧ್ಯಾತ್ಮ ಸಂಜೀವಿನಿ: ರಂಭಾಪುರಿ ಸ್ವಾಮೀಜಿ

KannadaprabhaNewsNetwork | Published : Mar 1, 2025 1:00 AM

ಸಾರಾಂಶ

ಬದುಕಿನಲ್ಲಿ ಭೌತಿಕ ಸಂಪತ್ತು ಕೆಲವು ಕಾಲದವರೆಗೆ ಸುಖ ಕೊಡಬಹುದು. ಆಧ್ಯಾತ್ಮ ಸಂಪತ್ತು ನಿಜವಾದ ಸಂಪತ್ತು. ಸುಖ ಶಾಂತಿ ಬದುಕಿಗೆ ಆಧ್ಯಾತ್ಮ ಜೀವನ ಸಂಜೀವಿನಿಯಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ನರಗುಂದ: ಬದುಕಿನಲ್ಲಿ ಭೌತಿಕ ಸಂಪತ್ತು ಕೆಲವು ಕಾಲದವರೆಗೆ ಸುಖ ಕೊಡಬಹುದು. ಆಧ್ಯಾತ್ಮ ಸಂಪತ್ತು ನಿಜವಾದ ಸಂಪತ್ತು. ಸುಖ ಶಾಂತಿ ಬದುಕಿಗೆ ಆಧ್ಯಾತ್ಮ ಜೀವನ ಸಂಜೀವಿನಿಯಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಅವರು ಗುರುವಾರ ಸಿದ್ಧೇಶ್ವರ ಪಂಚಗೃಹ ಗುಡ್ಡದ ಹಿರೇಮಠದಲ್ಲಿ ಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬಹು ಜನ್ಮಗಳ ಪುಣ್ಯದ ಫಲದಿಂದ ಮಾನವ ಜನ್ಮ ಪ್ರಾಪ್ತವಾಗಿದೆ. ಅರಿವುಳ್ಳ ಮಾನವ ಜನ್ಮದಲ್ಲಿ ಹುಟ್ಟಿ ಬಂದ ಬಳಿಕ ಒಂದಿಷ್ಟಾದರೂ ಶಿವಜ್ಞಾನ ಸಂಪಾದಿಸದಿದ್ದರೆ ಗುರು ಕಾರುಣ್ಯ ಪಡೆಯದಿದ್ದರೆ ಜೀವನ ವ್ಯರ್ಥವಾಗುತ್ತದೆ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೆ ಆಹಾರ, ಆರೋಗ್ಯ ಮತ್ತು ಆಧ್ಯಾತ್ಮ ಜ್ಞಾನ ಅವಶ್ಯಕವಾಗಿದೆ. ಜಗದ್ಗುರು ರೇಣುಕಾಚಾರ್ಯರು ಮಾನವ ಜೀವನದ ವಿಕಾಸ ಅಭ್ಯುದಯಕ್ಕಾಗಿ ಕೊಟ್ಟ ಸಂದೇಶ ಅಂದಿಗಷ್ಟೇ ಅಲ್ಲ ಎಂದೆಂದಿಗೂ ದಾರಿ ದೀಪವಾಗಿದೆ ಎಂದರು.

ಅಮ್ಮಿನಭಾವಿ ಪಂಚಗೃಹ ಹಿರೇಮಠದ ಡಾ. ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು. ಅತಿಥಿಗಳಾಗಿ ಆಗಮಿಸಿದ ನರಗುಂದ ಕ್ಷೇತ್ರದ ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ವೀರಶೈವಕ್ಕೆ ಅಪೂರ್ವ ಇತಿಹಾಸ ಪರಂಪರೆಯಿದೆ. ಜಗದ್ಗುರು ರೇಣುಕಾಚಾರ್ಯರು ಪೂರ್ವ ಕಾಲದಲ್ಲಿ ಕೊಟ್ಟ ಸಂದೇಶವನ್ನು 12ನೇ ಶತಮಾನದ ಬಸವಾದಿ ಶರಣರು ಪರಿಪಾಲಿಸಿ ಮತ್ತಷ್ಟು ಬೆಳೆಸಿದ ಕೀರ್ತಿ ಸಲ್ಲುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ನರಗುಂದ ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು. ಪುರಸಭೆ ಅಧ್ಯಕ್ಷ ಅನ್ನಪೂರ್ಣ ಯಲಿಗಾರ, ಪಂಚಣ್ಣ ಬೆಳವಟಗಿ, ಶಿವಾನಂದ ಮುತವಾಡ, ಅಜ್ಜಪ್ಪಗೌಡ ಪಾಟೀಲ, ಪಿ.ಎಲ್.ಪಾಟೀಲ, ಪವಾಡೆಪ್ಪ ವಡ್ಡಿಗೇರಿ, ಶಿವಾನಂದ ಮುತವಾಡ, ನ್ಯಾಯವಾದಿ ಎಸ್.ಎಚ್. ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರು ರಕ್ಷೆ ಸ್ವೀಕರಿಸಿದರು. ಸಮಾರಂಭಕ್ಕೂ ಮುನ್ನ ಗವಿಸಿದ್ಧೇಶ್ವರ ಶಾಸ್ತ್ರಿಗಳು ಬೂದಿಹಾಳ ಇವರಿಂದ ನವಲಗುಂದ ಅಜಾತ ನಾಗಲಿಂಗ ಅಜ್ಜನ ಚರಿತ್ರೆ ಕುರಿತು ಪ್ರವಚನ ನಡೆಯಿತು. ಸಮಾರಂಭದ ನಂತರ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ನೆರವೇರಿತು.

Share this article