ಕೊಪ್ಪಳ: ಭಾರತ ದೇಶ ವಿವಿಧ ವೇಷ, ಭಾಷೆ, ಧರ್ಮ, ಸಂಸ್ಕೃತಿ ಹೊಂದಿದ್ದರೂ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ. ವಿಶ್ವದಲ್ಲಿ ಭಾವೈಕ್ಯತೆ ನೆಲೆಗೊಳ್ಳಬೇಕಾದರೆ ಭದ್ರಬುನಾದಿ ಎಂದರೆ ಅದು ಅಧ್ಯಾತ್ಮ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯ ಸಿ.ವಿ. ಚಂದ್ರಶೇಖರ್ ಹೇಳಿದರು.
ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಯೋಗಿನಿ ಮಾತನಾಡಿ, ವಿಶ್ವದಲ್ಲಿ ಏಕತೆ, ಸಹೋದರತೆ, ಸೌಹಾರ್ದತೆ, ಭಾವೈಕ್ಯತೆ ನೆಲೆಸಬೇಕಾದರೆ ವ್ಯಕ್ತಿ ವ್ಯಕ್ತಿಗಳ ಮಧ್ಯೆ ರಾಷ್ಟ್ರ ರಾಷ್ಟ್ರಗಳ ಮಧ್ಯೆ ಈರ್ಷೆ, ದ್ವೇಷ ಸಮಾಪ್ತಿಯಾಗಿ ಸ್ನೇಹ, ಸಹಯೋಗ, ಸಹಬಾಳ್ವೆ ನೆಲೆಸಬೇಕಾದರೆ ಪ್ರತಿಯೊಬ್ಬ ವ್ಯಕ್ತಿಗೂ ಅಧ್ಯಾತ್ಮ ಶಿಕ್ಷಣ ಅತ್ಯಗತ್ಯವಾಗಿದೆ. ವಸುದೈವ ಕುಟುಂಬಕಂ ಎನ್ನುವಂತೆ ವಿಶ್ವವೇ ಒಂದು ಕುಟುಂಬ. ನಾವೆಲ್ಲರೂ ವಿಶ್ವಪಿತ ಪರಮಾತ್ಮನ ಮಕ್ಕಳು ಎಂಬ ಸತ್ಯ ಅರಿವಾದಾಗ ಸಮಾಜದಲ್ಲಿ ಏಕತೆ ವಿಶ್ವಾಸ ನೆಲೆಗೊಳ್ಳಲು ಸಾಧ್ಯ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣಪ್ಪ ಚೌಹಾಣ್ ಮಾತನಾಡಿ, ದೈನಂದಿನ ಒತ್ತಡದ ಬದುಕಿನಲ್ಲಿ ಶಾಂತಿ ಪಡೆಯಲು ಇಂತಹ ಕಾರ್ಯಕ್ರಮಗಳು ದಾರಿದೀಪವಾಗಿದೆ ಎಂದರು.ನಗರಸಭೆ ಮಾಜಿ ಸದಸ್ಯ ರಫೀಕ್ ಅಹಮದ್ ಮಾತನಾಡಿ, ನಾವೆಲ್ಲರೂ ಒಂದೇ. ನಾವೆಲ್ಲರೂ ಒಂದಾಗಿ ಸಮಾಜ ಸೇವೆಯಲ್ಲಿ ನಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳೋಣ ಎಂದು ಹೇಳಿದರು.