ಮುಂಡಗೋಡಲ್ಲಿ ಹಾಳಾದ ಅಲಂಕೃತ ವಿದ್ಯುತ್ ದೀಪಗಳು: ಪಪಂ ಸದಸ್ಯರ ಆಕ್ರೋಶ

KannadaprabhaNewsNetwork |  
Published : Feb 05, 2024, 01:48 AM IST
 ಮುಂಡಗೋಡ: ಶನಿವಾರ ಸಂಜೆ ಪಟ್ಟಣ ಪಂಚಾಯತ ಸಭಾಂಗಣದಲ್ಲಿ ಆಡಳಿತಾಧಿಕಾರಿ ಗ್ರೇಡ್ ೨ ತಹಸೀಲ್ದಾರ ಜಿ.ಬಿ ಭಟ್ ಅವರ ಅಧ್ಯಕ್ಷತೆಯಲ್ಲಿ ಪ.ಪಂ ನ ೨೦೨೪-೨೫ ನೇ ಸಾಲಿನ ಆಯ-ವ್ಯಯ ತಯಾರಿಸುವ ಬಗ್ಗೆ ಪೂರ್ವ ಭಾವಿ ಸಭೆ ಜರುಗಿತು.                                                             | Kannada Prabha

ಸಾರಾಂಶ

ಮುಂಡಗೋಡದಲ್ಲಿ ಆಯ-ವ್ಯಯ ತಯಾರಿಸುವ ಪೂರ್ವಭಾವಿ ಸಭೆ ನಡೆಯಿತು. ಪಟ್ಟಣದಲ್ಲಿ ಅಳವಡಿಸಿರುವ ಅಲಂಕೃತ ವಿದ್ಯುತ್ ದೀಪಗಳು ಹಾಳಾಗಿರುವ ಬಗ್ಗೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮುಂಡಗೋಡ: ಕೋಟ್ಯಂತರ ರು. ವೆಚ್ಚ ಮಾಡಿ ಪಟ್ಟಣದ ಹೆದ್ದಾರಿಗಳಲ್ಲಿ ಅಳವಡಿಸಲಾದ ಅಲಂಕೃತ ವಿದ್ಯುತ್ ದೀಪಗಳ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಹಾಳಾಗಿದ್ದು, ಸಂಜೆಯಾಗುತ್ತಲೆ ಪಟ್ಟಣದಲ್ಲಿ ಕತ್ತಲು ಆವರಿಸುತ್ತಿದೆ ಎಂದು ಪ.ಪಂ. ಸದಸ್ಯರು ಸಾಮೂಹಿಕವಾಗಿ ಆಕ್ರೋಶ ವ್ಯಕ್ತಪಡಿಸಿದರು. ಶನಿವಾರ ಸಂಜೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಡಳಿತಾಧಿಕಾರಿ ಗ್ರೇಡ್-೨ ತಹಸೀಲ್ದಾರ್ ಜಿ.ಬಿ. ಭಟ್ ಅಧ್ಯಕ್ಷತೆಯಲ್ಲಿ ಪ.ಪಂ.ನ ೨೦೨೪-೨೫ನೇ ಸಾಲಿನ ಆಯ-ವ್ಯಯ ತಯಾರಿಸುವ ಬಗ್ಗೆ ಪೂರ್ವಭಾವಿ ಸಭೆ ಜರುಗಿತು. ಈ ಸಂದರ್ಭದಲ್ಲಿ ದ್ವನಿ ಎತ್ತಿದ ಸದಸ್ಯರು, ಹೊಸದಾಗಿ ಅಲಂಕೃತ ವಿದ್ಯುತ್ ದೀಪ ಅಳವಡಿಸಿ ೧ ವರ್ಷವೂ ಕಳೆದಿಲ್ಲ. ಅಷ್ಟರಲ್ಲಿಯೇ ಹಾಳಾಗಿವೆ. ಕಂಬಗಳನ್ನು ಅಳವಡಿಸುವಾಗ ಹಳೆಯ ವಿದ್ಯತ್ ಕಂಬಗಳನ್ನು ಕೂಡ ತೆಗೆಯಲಾಗಿದ್ದು, ಇದರಿಂದ ರಾತ್ರಿಯಾಗುತ್ತಿದ್ದಂತೆ ಸಾರ್ವಜನಿಕರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ತಕ್ಷಣ ಗುತ್ತಿಗೆದಾರರಿಂದ ಉಳಿದ ಕಾಮಗಾರಿ ಪೂರ್ಣಗಳಿಸಬೇಕಲ್ಲದೇ ಹಾಳಾಗಿರುವ ವಿದ್ಯುತ್ ದೀಪಗಳನ್ನು ದುರಸ್ತಿಗೊಳಿಸುವ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಪಪಂ ಮುಖ್ಯಾಧಿಕಾರಿ ಚಂದ್ರಶೇಖರ ಇದುವರೆಗೂ ವಿದ್ಯುತ್ ದೀಪದ ಯೋಜನೆ ಪಪಂಗೆ ಹಸ್ತಾಂತರವಾಗಿಲ್ಲ. ಅಲ್ಲದೇ ಈ ವಿದ್ಯುತ್ ದೀಪ ಅಳವಡಿಸಲಾದ ಕಾಮಗಾರಿ ಯಾವ ಇಲಾಖೆಯಿಂದ ಮಾಡಲಾಗಿದೆ ಎಂಬ ಮಾಹಿತಿ ಕೂಡ ನಮಗಿಲ್ಲ ಎಂದು ಉತ್ತರಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಹಾಗಾದರೆ ಈ ಬಗ್ಗೆ ಯಾರನ್ನು ಪ್ರಶ್ನೆ ಮಾಡಬೇಕು? ಇದಕ್ಕೆಲ್ಲ ಯಾರು ಹೊಣೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಅನುಮತಿ ಪಡೆಯದೆ ಸಾಕಷ್ಟು ಪ್ರಮಾಣದ ಮನೆ ಹಾಗೂ ಅಂಗಡಿಗಳನ್ನು ನಿರ್ಮಿಸಿಕೊಳ್ಳಲಾಗಿದ್ದು, ತೆರಿಗೆ ಪಾವತಿಯಾಗುತ್ತಿಲ್ಲ. ಸ್ಲಂ ಬೋರ್ಡ್‌ನಿಂದ ನೂರಕ್ಕೂ ಅಧಿಕ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ ಹಲವರು ಹಂಚಿನ ಮನೆ ನೆಲಸಮಗೊಳಿಸಿ ಆರ್‌ಸಿಸಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದಾವುದರಿಂದಲೂ ತೆರಿಗೆ ಬರುತ್ತಿಲ್ಲ. ಇದರಿಂದ ಪಟ್ಟಣ ಪಂಚಾಯಿತಿಗೆ ನಷ್ಟವಾಗುತ್ತಿದೆ. ತಕ್ಷಣ ಈ ಬಗ್ಗೆ ಪರಿಶೀಲನೆ ನಡೆಸಿ ಅವರಿಂದ ತೆರಿಗೆ ವಸೂಲಿ ಮಾಡಬೇಕು ಎಂದು ಪಪಂ ಸದಸ್ಯ ಫಣಿರಾಜ ಹದಳಗಿ ಹಾಗೂ ರಜಾ ಪಠಾಣ ಆಗ್ರಹಿಸಿದರು.

ಪಟ್ಟಣದ ವಾರದ ಸಂತೆ ಮಾರುಕಟ್ಟೆ ಹರಾಜು ಪಡೆದ ಗುತ್ತಿಗೆದಾರರು ಇನ್ನೂ ₹೪ ಲಕ್ಷಕ್ಕೂ ಅಧಿಕ ಹಣ ಭರಿಸುವುದು ಬಾಕಿ ಇದೆ ಎಂದು ಪಪಂ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಂತೆ ಆಕ್ರೋಶಗೊಂಡ ಸದಸ್ಯರು, ಇನ್ನು ೨ ತಿಂಗಳು ಮಾತ್ರವಿದ್ದು, ತಕ್ಷಣ ಗುತ್ತಿಗೆದಾರರಿಂದ ಹಣವನ್ನು ಭರಿಸಿಕೊಳ್ಳಿ ಎಂದು ತಾಕೀತು ಮಾಡಿದರು.

ಆಡಳಿತಾಧಿಕಾರಿ ಗ್ರೇಡ್-೨ ತಹಸೀಲ್ದಾರ್ ಜಿ.ಬಿ. ಭಟ್, ಪಪಂ ಮುಖ್ಯಾಧಿಕಾರಿ ಚಂದ್ರಶೇಖರ, ಸದಸ್ಯ ಶ್ರೀಕಾಂತ ಸಾನು, ಮಂಜುನಾಥ ಹರ್ಮಲಕರ, ಮಹ್ಮದಗೌಸ್ ಮಕಾನದಾರ, ನಿರ್ಮಲಾ ಬೆಂಡ್ಲಗಟ್ಟಿ, ಬೀಬಿಜಾನ್‌ ಮುಂತಾದವರು ಉಪಸ್ಥಿತರಿದ್ದರು. ಪಪಂ ಅಧಿಕಾರಿ ಪ್ರದೀಪ ಹೆಗಡೆ ವರದಿ ಮಂಡಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ