ಮಹೇಶ ಛಬ್ಬಿ ಗದಗ
ತಾಲೂಕಿನ ಚಿಂಚಲಿ, ಕಲ್ಲೂರ ನೀಲಗುಂದ, ಅಂತೂರ-ಬೆಂತೂರ ಭಾಗಗಳಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಹೆಸರು ಬಿತ್ತನೆ ಮಾಡಿದ ಹೊಲಗಳ ಮೇಲೆ ಮಂಗಗಳ ಹಿಂಡು ದಾಳಿ ಮಾಡಿ ಹೆಸರನ್ನು ತಿಂದು ನಾಶ ಪಡಿಸುತ್ತಿರುವುದು ರೈತರನ್ನು ನಿದ್ದೆಗೆಡಿಸಿದೆ.
ಬೆಳೆದ ಹೆಸರನ್ನು ಮಂಗಗಳಿಂದ ರಕ್ಷಣೆ ಮಾಡಲು ಪಟಾಕಿ ಸಿಡಿಸಿ ಏನೇ ತಂತ್ರಗಾರಿಕೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಸದ್ಯ ಹೆಸರು ರಕ್ಷಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ. ಕಳೆದ ವರ್ಷ ಬರಗಾಲ ಬಿದ್ದು ಕುಡಿಯುವ ನೀರಿಗೂ ಪರದಾಡುವಂತಾಗಿ ರೈತರ ಬದುಕು ನಡೆಸುವುದೇ ಕಷ್ಟಕರವಾಗಿತ್ತು. ಪ್ರಸಕ್ತ ಉತ್ತಮ ಮಳೆಯಿಂದ ಉತ್ಸಾಹದಲ್ಲೇ ರೈತರು ಬಿತ್ತನೆ ಮಾಡಿ ಬೆಳೆಗಳು ಸಮೃದ್ಧವಾಗಿ ಬೆಳೆದಿರುವುದು ರೈತರ ಸಂತೋಷಕ್ಕೆ ಪಾರಾವೇ ಇಲ್ಲದಂತಾಗಿತ್ತು, ಆದರೆ ಕಳೆದೊಂದು ವಾರದಿಂದ ನಿರಂತರ ಸುರಿಯುತ್ತಿರುವ ಮಳೆ, ವನ್ಯ ಜೀವಿಗಳ ಹಾವಳಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ ಎನ್ನುವ ಭೀತಿ ಕಾಡುತ್ತಿದೆ.ಗ್ರಾಮ, ತೋಟಗಳಿಗೆ ಬರುತ್ತಿದ್ದ ಮಂಗಗಳು, ಇತ್ತೀಚಿಗೆ ಮನುಷ್ಯರ ಭಯವೇ ಇಲ್ಲದಂತೆ ಹೊಲಗಳಿಗೆ ನುಗ್ಗಿ ಬೆಳೆದ ಫಸಲನ್ನು ಹಾಳು ಮಾಡಿ ರೈತರಿಗೆ ದುಸ್ವಪ್ನದಂತೆ ಕಾಡುತ್ತಿವೆ.
ಕ್ರಮಕ್ಕೆ ಒತ್ತಾಯ: ರೈತರು ಮಂಗಗಳ ಉಪಟಳಕ್ಕೆ ಕಡಿವಾಣ ಹಾಕಲು ಯಾವುದೇ ತಂತ್ರಗಾರಿಕೆ ಮಾಡಿದರೂ ಫಲ ನೀಡುತ್ತಿಲ್ಲ. ಮಂಗಗಳ ಹಾವಳಿಯಿಂದ ಬೇಸತ್ತ ರೈತರು ಮಂಗಗಳ ಉಪಟಳಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮತ್ತೆ ಆತಂಕ: ಕಳೆದ ವರ್ಷ ಬರಗಾಲ ಬಿದ್ದು, ಸಂಕಷ್ಟದಲ್ಲಿದ್ದ ರೈತರಿಗೆ ಪ್ರಸಕ್ತ ವರ್ಷ ಉತ್ತಮ ಮಳೆ ಆಗಿ ಉತ್ತಮ ಆದಾಯದ ನೀರಿಕ್ಷೆಯಲ್ಲಿದ್ದರು, ಆದರೆ ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಗಳಲ್ಲಿ ಹಳದಿ ರೋಗ ಕಾಣಿಸುತ್ತಿದೆ. ಇದೇ ರೀತಿ ಮಳೆ ಮುಂದುವರೆದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ, ಇದರ ಜತೆ ಒಂದು ಕಡೆ ಮಂಗಗಳ ಕಾಟ, ಇನ್ನೊಂದು ಕಡೆ ಜಿಂಕೆ ಹಾವಳಿ ಇದೆಲ್ಲ ರೈತರನ್ನು ಮತ್ತೇ ಆತಂಕಕ್ಕೆ ದೂಡಿದೆ.