ಸತತ ಪ್ರಯತ್ನದಿಂದ ಕ್ರೀಡಾ ಸಾಧನೆ ಸಾಧ್ಯ: ರಾಘವೇಂದ್ರ ಹಿಟ್ನಾಳ

KannadaprabhaNewsNetwork |  
Published : Sep 27, 2024, 01:18 AM IST
26ಕೆಪಿಎಲ್2:ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. | Kannada Prabha

ಸಾರಾಂಶ

ಕ್ರೀಡೆ ಎಂಬುದು ಸಹ ತಪಸ್ಸು ಇದ್ದಂತೆ. ಸತತ ಪ್ರಯತ್ನದಿಂದ ಕ್ರೀಡೆ ಒಲಿಯುತ್ತದೆ.

ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕ್ರೀಡೆಗಳು ಸದೃಢ ಆರೋಗ್ಯಕ್ಕೆ ಅತ್ಯವಶ್ಯಕ. ಸದಾ ಕ್ರೀಡೆ, ವ್ಯಾಯಾಮ ಚಟುವಟಿಕೆಗಳಿಂದ ಕೂಡಿರುವ ವಿದ್ಯಾರ್ಥಿಗಳು ಸದೃಢ ಆರೋಗ್ಯ ಮತ್ತು ಮಾನಸಿಕ ಸ್ಥಿಮಿತತೆಯನ್ನು ಕಾಪಾಡಿಕೊಳ್ಳುತ್ತಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ, ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಪೂಜ್ಯ ಶ್ರೀ ಮರಿಶಾಂತವೀರ ಸ್ವಾಮೀಜಿ ಪದವಿ ಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ೨೦೨೪-೨೫ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕ್ರೀಡೆ ಎಂಬುದು ಸಹ ತಪಸ್ಸು ಇದ್ದಂತೆ. ಸತತ ಪ್ರಯತ್ನದಿಂದ ಕ್ರೀಡೆ ಒಲಿಯುತ್ತದೆ. ಕ್ರೀಡಾ ಸಾಧನೆ ಎಂಬುದು ಸಾಮಾನ್ಯ ಮಾತಲ್ಲ. ಅದು ಅವಿರತ ಪ್ರಯತ್ನದ ಫಲ. ನಮ್ಮ ಭಾಗದಲ್ಲಿ ಇರುವ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಭಾಗವಹಿಸುವ ಪ್ರತಿಭೆಯುಳ್ಳವರಾಗಿದ್ದಾರೆ. ಅವರು ಸದಾ ಪ್ರಯತ್ನಶೀಲರಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹ ಸಾಧನೆ ಮಾಡಲು ಸಾಧ್ಯವಾಗಬಹುದು ಎಂದರು.

ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಇತ್ತೀಚಿನ ದಿನಮಾನಗಳಲ್ಲಿ ಕ್ರೀಡೆಗಳಲ್ಲಿ ವಿದ್ಯಾರ್ಥಿನಿಯರ ಹೆಚ್ಚು-ಹೆಚ್ಚು ಭಾಗವಹಿಸುವಿಕೆ ಕಂಡುಬರುತ್ತಿರುವುದು ಸಂತಸದ ಸಂಗತಿ. ಮೊನ್ನೆ ನಡೆದ ಓಲಿಂಪಿಕ್ಸ್ ಸ್ಪರ್ಧೆಯಲ್ಲಿ ಮಹಿಳೆಯರು ಶೂಟಿಂಗ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತಕ್ಕೆ ಕಂಚು ಗೆದ್ದುಕೊಟ್ಟಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ರಾಜಶೇಖರ ಪಾಟೀಲ ಮಾತನಾಡಿ, ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಎಲ್ಲ ವಿದ್ಯಾರ್ಥಿಗಳು ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಬೇಕು. ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದರು.

ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಅನಿಲಕುಮಾರ ಜಿ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮಶೇಖರಗೌಡ, ಕಾರ್ಯಾಧ್ಯಕ್ಷ ಮಾರುತಿ ಲಕಮಾಪುರ, ಖಜಾಂಚಿ ಸಂಜಯ ಬಡಿಗೇರ, ಪ್ರಾಚಾರ್ಯ ಟಿ.ಸಿ. ಶಾಂತಪ್ಪ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಎ., ಪತ್ರಕರ್ತ ಹನುಮಂತ ಹಳ್ಳಿಕೇರಿ, ಸಮಾಜ ಸೇವಕ ಶರಣಪ್ಪ ಸಜ್ಜನ, ಪ್ರಾಚಾರ್ಯರಾದ ಡಾ. ವೀರೇಶಕುಮಾರ ಎನ್.ಎಸ್., ಅಗಸ್ಟಿನ್ ಎಸ್., ಕಾಲೇಜಿನ ಶೈಕ್ಷಣಿಕ ಸಂಯೋಜಕ ಶರಣಪ್ಪ ಎ.ಜಿ., ಹಿರಿಯ ಉಪನ್ಯಾಸಕ ರಾಚಪ್ಪ ಕೇಸರಭಾವಿ, ಜಿಲ್ಲಾ ಕ್ರೀಡಾ ಸಂಚಾಲಕ ತಿರುಪತಿ ನಾಯಕ, ಕ್ರೀಡಾ ಸಂಘಟಕ ಈಶಪ್ಪ ದೊಡ್ಡಮನಿ ಇತರರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ