ಕನ್ನಡಪ್ರಭ ವಾರ್ತೆ ಬೇಲೂರು ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಮೂಲಕ ದೈಹಿಕ ಹಾಗು ಮಾನಸಿಕವಾಗಿ ಸದೃಢರಾಗಬೇಕು ಶಾಸಕ ಎಚ್ ಕೆ ಸುರೇಶ್ ಹೇಳಿದರು.ತಾಲೂಕು ಶಿಕ್ಷಣಾ ಇಲಾಖೆ ಹಾಗು ಯುನೈಟೆಡ್ ಅಕಾಡಮಿ ಆಂಗ್ಲ ಮಾಧ್ಯಮ ಶಾಲಾ ಸಹಯೋಗದೊಂದಿಗೆ ಕಸಬಾ ಎ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಪೋಷಕರು ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬುವ ಮೂಲಕ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು. ಆರೋಗ್ಯವಂತ ಸಮಾಜ ಕಟ್ಟುವಲ್ಲಿ ಕ್ರೀಡೆಯ ಪಾತ್ರ ಬಹಳ ಮಹತ್ವವಾಗಿದೆ. ಶಾಲೆಗಳು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಬೇಕು. ಮಕ್ಕಳಿಗೆ ಆತ್ಮವಿಶ್ವಾಸ ಹೆಚ್ಚಿಸಲು ಹಾಗು ಅವರ ಮಾನಸಿಕವಾಗಿ ಹಾಗು ದೈಹಿಕವಾಗಿ ಅವರಿಗೆ ಜ್ಞಾನಕ್ಕೆ ಹೆಚ್ಚು ಅನುಕೂಲವಾಗುವುದರಿಂದ ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ದೈಹಿಕ ಶಿಕ್ಚಕರ ಪಾತ್ರ ಇಲ್ಲಿ ಮಹತ್ವವಾಗಿದ್ದು ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳನ್ನು ರೂಪಿಸಲು ಇದು ಉತ್ತಮ ವೇಧಿಕೆಯಾಗಿದೆ. ತೀರ್ಪುಗಾರರು ಯಾವುದೇ ರೀತಿಯ ಪರ ವಿರೋಧ ಮನಸ್ಥಿತಿ ಇಟ್ಟುಕೊಳ್ಳದೆ ಉತ್ತಮ ಕ್ರೀಡಾಪಟುಗಳನ್ನು ಆಯ್ಕೆ ಮಾಡುವಂತೆ ಸೂಚಿಸಿದರು.ಕ್ರೀಡಾಜ್ಯೋತಿ ಸ್ವಾಗತಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಶಾಲಾ ಮಟ್ಟದಿಂದ ಮಕ್ಕಳಲ್ಲಿ ಲಹರಿಯುತ ಶಾರೀರಿಕ ಮತ್ತು ಮಾನಸಿಕ ಅಭಿವೃದ್ಧಿಗೆ ಕ್ರೀಡೆ ಅಗತ್ಯ. ಈ ರೀತಿಯ ಕ್ರೀಡಾಕೂಟಗಳು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ, ಶಿಸ್ತು ಮತ್ತು ಸಹಕಾರದ ಗುಣಗಳನ್ನು ಬೆಳೆಸುವಲ್ಲಿ ನೆರವಾಗುತ್ತವೆ ಎಂದು ಹೇಳಿದರು.