ಹೊಸಪೇಟೆ: ಕ್ರೀಡೆಯಿಂದ ದೈಹಿಕ ಆರೋಗ್ಯ ಉತ್ತಮವಾಗುವುದರ ಜೊತೆಗೆ ಮಾನಸಿಕ ಶಕ್ತಿಯೂ ಹೆಚ್ಚುತ್ತದೆ. ಆಟ ಮತ್ತು ಪಾಠ ಎರಡೂ ಸಮಾನವಾಗಿ ಇದ್ದಾಗ ವಿದ್ಯಾರ್ಥಿಗಳ ಮನಸ್ಸು ಸಮಗ್ರವಾಗಿ ವಿಕಸನಗೊಳ್ಳುತ್ತದೆ ಎಂದು ಹಂಪಿ ಕನ್ನಡ ವಿವಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಹೇಳಿದರು.
ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಿರುವವರಿಗೆ ರೋಗಗಳು ದೂರವಾಗುತ್ತವೆ. ದ್ವೇಷ ಭಾವನೆ ಬೆಳೆಸಿಕೊಳ್ಳದೆ ಶಾಂತಿಯಿಂದ ಹಾಗೂ ಸ್ನೇಹಭಾವದಿಂದ ಕ್ರೀಡಾಸ್ಫೂರ್ತಿಯೊಂದಿಗೆ ಕ್ರೀಡೆಯಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿಶ್ವವಿದ್ಯಾಲಯದಲ್ಲಿ ಆಟವಾಡಲು ವಿಶಾಲವಾದ ಜಾಗ ಲಭ್ಯವಿದ್ದು, ಕಳೆದ ವರ್ಷ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಬಗ್ಗೆ ಚಿಂತನೆ ನಡೆದಿತ್ತು. ಅನುದಾನದ ಕೊರತೆಯಿಂದ ಸಾಧ್ಯವಾಗಲಿಲ್ಲ. ಆದರೂ ಕ್ರೀಡಾಂಗಣ ಅಭಿವೃದ್ಧಿಗೆ ಸಂಬಂಧಿಸಿದ ನಕ್ಷೆಯನ್ನು ಈಗಾಗಲೇ ತಯಾರಿಸಲಾಗಿದೆ ಎಂದರು.ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡುವ ಪ್ರತಿಭೆಗಳು ಇಲ್ಲಿಯೇ ಸುಪ್ತವಾಗಿ ಅಡಗಿವೆ. ಇಂತಹ ಕ್ರೀಡಾಕೂಟಗಳು ಪ್ರತಿಭೆಗಳನ್ನು ಗುರುತಿಸುವ ವೇದಿಕೆಗಳಾಗಿವೆ. ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವಂತಾಗಲಿ ಎಂದರು.
ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಮಾತನಾಡಿ, ನಾವು ವಿಶ್ವವಿದ್ಯಾಲಯಕ್ಕೆ ಹೊಸದಾಗಿ ಬಂದ ಸಂದರ್ಭದಲ್ಲಿ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಮಾತ್ರ ಅವಕಾಶವಿತ್ತು. ಇಂದು ವಿದ್ಯಾರ್ಥಿಗಳು ಭಾಗ್ಯಶಾಲಿಗಳು; ಆಟವಾಡಲು ಅಗತ್ಯವಿರುವ ಎಲ್ಲ ಸೌಲಭ್ಯಗಳು ಲಭ್ಯವಿವೆ ಎಂದರು.ಜೆ.ಎಸ್. ಡಬ್ಲ್ಯೂ ಕ್ರೀಡಾಧಿಕಾರಿ ಮಹಮ್ಮದ್ ರಫೀಕ್, ಕ್ರೀಡಾ ಸಮಿತಿ ಸಂಚಾಲಕ ಡಾ. ವೆಂಕಟಗಿರಿ ದಳವಾಯಿ, ಅಧ್ಯಯನಾಂಗ ನಿರ್ದೇಶಕ ಡಾ. ಅಮರೇಶ ಯತಗಲ್, ಶೈಕ್ಷಣಿಕ ನಿರ್ದೇಶಕ ಡಾ. ಎಸ್.ವೈ. ಸೋಮಶೇಖರ್, ಡಾ. ಯರ‍್ರಿಸ್ವಾಮಿ ಮತ್ತಿತರರಿದ್ದರು. ಕಾರ್ಯಕ್ರಮವನ್ನು ಚೌಡಪ್ಪ ನಿರ್ವಹಿಸಿದರು. ಉದ್ಘಾಟನಾ ಸಮಾರಂಭದ ಅಂಗವಾಗಿ ವಿದ್ಯಾರ್ಥಿಗಳಿಂದ ಶಿಸ್ತಿನ ಪಥಸಂಚಲನ ನಡೆಯಿತು.