ಕಾನೂನಿನ ಪ್ರಕಾರ ಪತ್ತೆಯಾದ ನಿಧಿಯನ್ನು ಯಾವ ಸ್ಥಳದಲ್ಲಿ ಇಡಬೇಕು ಎಂಬ ಬಗ್ಗೆ ಜಿಲ್ಲಾಡಳಿತ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಬಡ ಕುಟುಂಬ ಹಿನ್ನೆಲೆಯಲ್ಲಿರುವ ರಿತ್ತಿ ಕುಟುಂಬಕ್ಕೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ.

ಗದಗ: ಲಕ್ಕುಂಡಿಯಲ್ಲಿ ಪತ್ತೆಯಾದ ನಿಧಿಗಿಂತ ಬಾಲಕನ ಪ್ರಾಮಾಣಿಕತೆಯೇ ದೊಡ್ಡದು. ಇದು ಎಲ್ಲರಿಗೂ ಮಾದರಿಯಾಗಿದೆ. ಅಲ್ಲದೇ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ಕುಟುಂಬದವರಿಗೆ ನೆರವು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು.

ಮಂಗಳವಾರ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾದ ನಿಧಿ ಸ್ಥಳಕ್ಕೆ ಭೇಟಿ ನೀಡಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ ಘೋಷಿಸಲು ರಾಜ್ಯ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಪತ್ತೆ ಆಗಿರುವ ನಿಧಿಯಲ್ಲಿ 466 ಗ್ರಾಂ ಚಿನ್ನಾಭರಣಗಳು ಮತ್ತು 634 ಗ್ರಾಂ ತಾಮ್ರದ ತಂಬಿಗೆ ಪತ್ತೆಯಾಗಿದ್ದು, ಅವುಗಳನ್ನು ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಸಂಪೂರ್ಣ ಘಟನೆ ಬೆಳಕಿಗೆ ಬರಲು ಕಾರಣನಾದ 14 ವರ್ಷದ ಬಾಲಕ ಪ್ರಜ್ವಲ್ ರಿತ್ತಿ ಅವರ ಪ್ರಾಮಾಣಿಕತೆ ನಿಜಕ್ಕೂ ಅನುಕರಣೀಯ ಎಂದರು.

ಕಾನೂನಿನ ಪ್ರಕಾರ ಪತ್ತೆಯಾದ ನಿಧಿಯನ್ನು ಯಾವ ಸ್ಥಳದಲ್ಲಿ ಇಡಬೇಕು ಎಂಬ ಬಗ್ಗೆ ಜಿಲ್ಲಾಡಳಿತ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಬಡ ಕುಟುಂಬ ಹಿನ್ನೆಲೆಯಲ್ಲಿರುವ ರಿತ್ತಿ ಕುಟುಂಬಕ್ಕೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ. ಈ ಕುಟುಂಬಕ್ಕೆ ನೀಡುವ ಯಾವುದೇ ಗೌರವವು ಇಡೀ ಲಕ್ಕುಂಡಿ ಗ್ರಾಮಕ್ಕೆ ನೀಡಿದ ಗೌರವವಾಗುತ್ತದೆ ಎಂದರು.

ಲಕ್ಕುಂಡಿಯಲ್ಲಿ ಪತ್ತೆಯಾಗಿರುವ ಈ ಆಭರಣಗಳ ವಿಶೇಷ ಪ್ರಕರಣ ಎಂದು ಪರಿಗಣಿಸಿದ್ದು, ಈ ಕುರಿತು ಗುರುವಾರ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ, ಕುಟುಂಬಕ್ಕೆ ಯಾವ ರೀತಿಯ ಗೌರವ ಮತ್ತು ನೆರವು ನೀಡಬೇಕು ಎಂಬ ನಿರ್ಧರಿಸಲಾಗುವುದು ಎಂದರು.

ಈ ಗ್ರಾಮದಿಂದ ಇನ್ನೂ ಅನೇಕ ಅದ್ಭುತ ಐತಿಹಾಸಿಕ ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ. ಈಗಾಗಲೇ ಲಕ್ಕುಂಡಿಯಲ್ಲಿನ 16 ದೇವಸ್ಥಾನಗಳು ಮತ್ತು 16 ಬಾವಿಗಳನ್ನು ಸರ್ಕಾರ ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಿದೆ. ಅಲ್ಲದೆ ₹165 ಲಕ್ಷ ವೆಚ್ಚದಲ್ಲಿ ಬಯಲು ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ವಿವರಿಸಿದರು.

ಅಧಿಕಾರಿಗಳ ಹೇಳಿಕೆಯಿಂದ ಉಂಟಾಗಿದ್ದ ಗೊಂದಲ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಆ ಸಮಸ್ಯೆಯನ್ನು ಜಿಲ್ಲಾಡಳಿತ ಯಶಸ್ವಿಯಾಗಿ ಬಗೆಹರಿಸಿದ್ದು, ಲಕ್ಕುಂಡಿ ಗ್ರಾಮ ತನ್ನ ಪ್ರಾಮಾಣಿಕತೆಯ ಜತೆಗೆ ತನ್ನ ಐತಿಹಾಸಿಕ ಹಿರಿಮೆಯನ್ನೂ ಮತ್ತೊಮ್ಮೆ ಎತ್ತಿ ಹಿಡಿದಿದೆ. ಮುಂದಿನ ದಿನಗಳಲ್ಲಿ ₹10 ಕೋಟಿ ವೆಚ್ಚದಲ್ಲಿ ಲಕ್ಕುಂಡಿಯ ದೇವಸ್ಥಾನಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.

ಇದೇ ವೇಳೆ ರಿತ್ತಿ ಕುಟುಂಬದ ಸದಸ್ಯರನ್ನು ಸಚಿವರು ಸನ್ಮಾನಿಸಿದರು. ಸುದ್ದಿಗೋಷ್ಠಿಯಲ್ಲಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು, ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಅಪೂರ್ವ ಉದಾಹರಣೆ: ಸಚಿವ ಎಚ್.ಕೆ. ಪಾಟೀಲ

ಪ್ರಜ್ವಲ್ ರಿತ್ತಿ ಪತ್ತೆಯಾದ ತಾಮ್ರದ ತಂಬಿಗೆಯನ್ನು ದೇವರ ಕೋಣೆಯಲ್ಲಿ ಸುರಕ್ಷಿತವಾಗಿ ಇಟ್ಟು ಕೀಲಿ ಹಾಕಿ ಭದ್ರಪಡಿಸಿದ್ದರು. ನಂತರ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿ, ಪತ್ತೆಯಾದ ವಸ್ತುಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿರುವುದು ಅಪೂರ್ವ ಉದಾಹರಣೆ ಎಂದು ಸಚಿವ ಎಚ್.ಕೆ. ಪಾಟೀಲ ಶ್ಲಾಘಿಸಿದರು.

ಜಗತ್ತಿನಾದ್ಯಂತ ಇಂತಹ ಘಟನೆಗಳನ್ನು ನೋಡಿದಾಗ, ಸಿಕ್ಕ ಅಮೂಲ್ಯ ವಸ್ತುಗಳನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಿರುವ ಉದಾಹರಣೆಗಳು ಬಹಳ ವಿರಳ. ಲಕ್ಕುಂಡಿಯ ಪ್ರಾಚ್ಯವಸ್ತು ಸಂಗ್ರಹ ಕಾರ್ಯಕ್ರಮದಡಿ, ಗ್ರಾಮಸ್ಥರು ಈಗಾಗಲೇ 1100ಕ್ಕೂ ಹೆಚ್ಚು ಪ್ರಾಚ್ಯ ವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸಿರುವುದು ಈ ಗ್ರಾಮದ ಸಂಸ್ಕೃತಿ ಮತ್ತು ಹಿರಿಮೆಯನ್ನು ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.