ಕನ್ನಡಪ್ರಭ ವಾರ್ತೆ ಬೆಂಗಳೂರುಸಾರ್ವಜನಿಕ ಸ್ಥಳಗಳು, ರಸ್ತೆ ಬದಿ, ಎಲ್ಲೆಂದರಲ್ಲೇ ಕಸ ಬಿಸಾಡುವವರ ಮೇಲೆ ನಿಗಾವಹಿಸಿ ದಂಡ ವಿಧಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಬ್ಲಾಕ್ ಸ್ಪಾಟ್‌ಗಳನ್ನು ಪೌರ ಕಾರ್ಮಿಕರು ಆಗಾಗ ತೆರವುಗೊಳಿಸುತ್ತಾರೆ. ಆದರೆ, ಬೇಜವಾಬ್ದಾರಿಯ ಜನರು ಮತ್ತೆ ಅಲ್ಲಿ ಕಸ ತಂದು ಸುರಿಯುತ್ತಾರೆ. ಹೀಗೆ, ಕಸ ಸುರಿಯುವವರ ಮೇಲೆ ನಿಗಾ ಇಟ್ಟು ದಂಡ ವಿಧಿಸಬೇಕು. ಅಗತ್ಯ ಇರುವ ಕಡೆ ಸಂಜೆ ವೇಳೆಯು ಬ್ಲಾಕ್ ಸ್ಪಾಟ್‌ಗಳನ್ನು ತೆರವುಗೊಳಿಸಬೇಕು. ಶಾಶ್ವತವಾಗಿ ಬ್ಲಾಕ್‌ಸ್ಪಾಟ್ ನಿರ್ಮೂಲನೆಗೆ ಕ್ರಮ ವಹಿಸಬೇಕು ಎಂದರು.ಪೌರಕಾರ್ಮಿಕರು ಪೊರಕೆಗಳಿಂದ ರಸ್ತೆಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಸ್‌ಆರ್ ಅಡಿ ಪೌರಕಾರ್ಮಿಕರಿಗೆ ಯಾಂತ್ರಿಕ ಕಸ ಗುಡಿಸುವ ಯಂತ್ರಗಳನ್ನು ಖರೀದಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ಪೌರಕಾರ್ಮಿಕರು ತ್ವರಿತವಾಗಿ ರಸ್ತೆಗಳನ್ನು ಸ್ವಚ್ಛಗೊಳಿಸಲು ಸಹಕಾರಿಯಾಗಲಿದೆ. ಇನ್ನು ವಾಹನ ಚಾಲನೆ ಮಾಡಲು ಆಸಕ್ತ ಇರುವ ಯುವ ಪೌರ ಕಾರ್ಮಿಕರಿಗೆ ಬಿಎಂಟಿಸಿಯಿಂದ ಚಾಲನಾ ತರಬೇತಿ ನೀಡಲಾಗುತ್ತದೆ. ಪಾಲಿಕೆಯಿಂದ ಖರೀದಿಸುವ ಯಾಂತ್ರಿಕ ಕಸ ಗುಡಿಸುವ ವಾಹನಗಳಿಗೆ ಪೌರಕಾರ್ಮಿಕರಿಂದಲೇ ನಿರ್ವಹಣೆ ಮಾಡಿಸಲಾಗುತ್ತದೆ ಎಂದು ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
ಟ್ಯಾಂಕ್ ಬಂಡ್ ರಸ್ತೆಯಲ್ಲಿ ಒಟ್ಟು 419 ಮೀಟರ್ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ನಡೆದಿದೆ. ಈಗಾಗಲೇ 300 ಮೀಟರ್ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಭಾಗದ ಕಾಮಗಾರಿ ಸೇರಿದಂತೆ ಸಂಪೂರ್ಣ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಯೊಬ್ಬರು ಆಯುಕ್ತರಿಗೆ ಮಾಹಿತಿ ನೀಡಿದರು.