ಜಿಲ್ಲೆಯ ಜನರ ಬಹು ದಿನದ ಬೇಡಿಕೆ ಆಗಿದ್ದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಸಂಬಂಧಪಟ್ಟಂತೆ ಕೇವಲ ನಾಮಕೆವಾಸ್ತೆ ವಿಸ್ತ್ರತ ಯೋಜನಾ ವರದಿ ತಯಾರಿಸಲಾಗುವುದು ಎಂದು ಹೇಳಿರಿವುದು ಜನರ ದಿಕ್ಕು ತಪ್ಪಿಸುವ ತಂತ್ರವಾಗಿದೆ. ಇದು ವಿಜಯಪುರ ಜಿಲ್ಲೆಗೆ ಮಾಡಿರುವ ದೊಡ್ಡ ಅನ್ಯಾಯವಾಗಿದೆ ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮಾಡಬೇಕೆಂದು 106 ದಿನಗಳ ಕಾಲ ನಡೆದ ಸುದೀರ್ಘ ಹೋರಾಟವನ್ನು ಹತ್ತಿಕ್ಕುವಗೋಸ್ಕರ ಹೋರಾಟಗಾರರ ಮೇಲೆ ಸುಳ್ಳು ಕೇಸ್ ದಾಖಲು ಮಾಡಿ ಹೋರಾಟಗಾರರನ್ನು ಜೈಲಿಗೆ ಹಾಕಿದ್ದು ರಾಜ್ಯದ ಜನ ನೋಡಿದ್ದಾರೆ. ಹಾವೇರಿ ಮತ್ತು ವಿಜಯಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮಾಡುತ್ತೇವೆಂದು ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ದಲ್ಲಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ವಿಸ್ತೃತ ವರದಿ ತಯಾರು ಮಾಡುತ್ತೇವೆಂದು ಹೇಳಿರುವುದು ಯಾವ ಪುರಷಾರ್ಥಕ್ಕೆ ಎಂದು ಪ್ರಶ್ನಿಸಿದರು.ವಿಜಯಪುರ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯವನ್ನು ಪಿಪಿಪಿ ಮಾದರಿ ಮಾಡಲು ಸರಕಾರ ಈಗಾಗಲೇ ಯೋಜನಾ ವರದಿ ತಯಾರು ಮಾಡಿತ್ತು, ಜೊತೆಗೆ ಹೋರಾಟಗಾರರು ಜಿಲ್ಲೆಯ ಸರಕಾರಿ ಆಸ್ಪತ್ರೆ ಆವರಣದಲ್ಲಿ ಇರುವ ಸೌಲಭ್ಯಗಳ ಬಗ್ಗೆ ಹಲವಾರು ಬಾರಿ ಮನವಿ ಮಾಡಿ ಮಾಹಿತಿ ನೀಡಿದ್ದಾರೆ. ಜೊತೆಗೆ ವಿಜಯಪುರ ಜಿಲ್ಲಾ ಆಡಳಿತ ಈ ಹಿಂದೆ ಏಮ್ಸ್ ಸ್ಥಾಪನೆಗೆ ತಯಾರಿಸಿದ ವಿಸ್ತ್ರತ ವರದಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಹೀಗಿದ್ದರು ಕೂಡಾ ಸರಕಾರ ಜಾಣ ಕುರುಡ ನಡೆ ಅನಿಸರಿಸುವ ಮೂಲಕ ಜನರನ್ನು ಕತ್ತಲೆಯಲ್ಲಿಡುವ ಪ್ರಯತ್ನ ಮಾಡಿದ್ದು ಖಂಡನೀಯ. ಕೂಡಲೇ ಈಗಿರುವ ವರದಿ ಆಧಾರದಲ್ಲಿ ವಿಜಯಪುರ ಜಿಲ್ಲೆಯ ಉದ್ದೇಶಿತ ವೈದ್ಯಕೀಯ ಕಾಲೇಜಿಗೆ ಅನುದಾನ ಘೋಷಣೆ ಮಾಡಿ ನುಡಿದಂತೆ ನಡೆಯಬೇಕು ಎಂದು ಒತ್ತಾಯಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಮಂಡಿಸಿರುವ ಬಜೆಟ್ ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬಂತೆ ಇದೆ. ಯಾವುದೇ ಹೊಸ ಯೋಜನೆ ಘೋಷಣೆ ಮಾಡದೆ ಇರುವ ಆಸ್ಪತ್ರೆ, ಇಲಾಖೆ ಕಟ್ಟಡಗಳಿಗೆ ಹೆಸರು ಬದಲಾವಣೆ ಮಾಡಿದ್ದು ಬಿಟ್ಟರೆ ಜನಪರ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಜನ ಈ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಇಟ್ಟಿರುವ ನಿರೀಕ್ಷೆ ಹುಸಿಯಾಗಿದೆ.

-ಮಲ್ಲಿಕಾರ್ಜುನ ಕೆಂಗನಾಳ, ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷರು.