ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅತ್ಯಂತ ವಿಜೃಂಬಣೆಯಿಂದ ಆರಂಭವಾಗಿದ್ದ ಐತಿಹಾಸಿಕ ಬಾಗಲಕೋಟೆ ಹೋಳಿ 2ನೇ ದಿನವಾದ ಶುಕ್ರವಾರ ಬಣ್ಣದೋಕುಳಿಯಲ್ಲಿ ಕೋಟೆನಗರಿ ಅಕ್ಷರಶಃ ಮಿಂದೆದ್ದಿತು.

ಹಳೇ ನಗರ, ನವನಗರ, ವಿದ್ಯಾಗಿರಿಯ ಗಲ್ಲಿ ಗಲ್ಲಿಗಳಲ್ಲಿ ಬೆಳಗ್ಗೆಯಿಂದಲೇ ಬಣ್ಣದಾಟ ಅಬ್ಬರದಿಂದ ಆರಂಭಗೊಂಡಿತು. ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲರೂ ಬಣ್ಣದೋಕುಳಿ ಆಡಿ ಸಂಭ್ರಮಿಸಿದರು. ಎರಡನೇ ದಿನ ವೆಂಕಟಪೇಟ, ಹಳಪೇಟ, ಜೈನ್‌ಪೇಟ ಮೂರು ಕಡೆಗಳಲ್ಲಿ ರಂಗಿನಾಟ ನಡೆಯಿತು.

ಚಿಣ್ಣರು, ಯುವಕರು ಹಲಗೆ ಬಾರಿಸುತ್ತ ನಗರದ ಪ್ರಮುಖ ಬೀದಿ ಸಂಚರಿಸಿದರು. ಕ್ಷಣ ಕ್ಷಣಕ್ಕೂ ಹೊರ ಹೊಮ್ಮುತ್ತಿದ್ದ ಹಲಗೆ ನೀನಾದಕ್ಕೆ ಯುವಕರು, ಯುವತಿಯರು ಒಳಗೊಂಡ ಗುಂಪು ಕುಣಿದು ಕುಪ್ಪಳಿಸಿದರು. ನಗರದ ಬಸವೇಶ್ವರ ವೃತ್ತ, ವಲ್ಲಾಭಾಯಿ ಚೌಕ, ಕೊತ್ತಲೇಶ ದೇವಸ್ಥಾನ, ಎಂ.ಜಿ.ರಸ್ತೆ, ಕಾಲೇಜು ರಸ್ತೆ ಸೇರಿದಂತೆ ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಜನ ಸಾಗರವೇ ಸೇರಿ ಪರಸ್ಪರ ಗುಲಾಲು ಎರಚಿ ಸಂಭ್ರಮಿಸಿದರು.

ಬಗೆಬಗೆಯ ಬಣ್ಣ ಹಚ್ಚುತ್ತ ಬಣ್ಣದೋಕುಳಿಗೆ ರಂಗೇರುವಂತೆ ಮಾಡಿದರು. ಮಾಧ್ಯಾಹ್ನದ ನಂತರ ನಗರದ ತುಂಬೆಲ್ಲ ಬಣ್ಣದ ಓಕುಳಿ ತೀವ್ರಗೊಂಡಿತು. ಮೂರು ಪೇಟಗಳ ಜನರು ಬಣ್ಣದ ಬಂಡಿಗಳ ಜತೆಗೆ ಕೋಟೆ ನಗರಿಯ ಪ್ರಮುಖ ರಸ್ತೆಗಳಲ್ಲಿ ಬಣ್ಣದ ನೀರು ಎರೆಚುತ್ತ ಸಾಗಿದರು. ಬಸವೇಶ್ವರ ವೃತ್ತದಿಂದ ಕಾಲೇಜು ವೃತ್ತದವರೆಗೆ ಪರಸ್ಪರ ಎದುರಾದ ವೆಂಕಟಪೇಟ, ಹಳಪೇಟ, ಜೈನ್‌ಪೇಟದ ಬಣ್ಣದ ಬಂಡಿಗಳು ನೋಡುವುದೇ ಕಣ್ಣಿಗೆ ಹಬ್ಬ. ಬಂಡಿ, ಟ್ರ್ಯಾಕ್ಟರ್‌ಗಳಲ್ಲಿ ಬಣ್ಣದ ನೀರು ತುಂಬಿದ ಬ್ಯಾರೆಲ್ ಇರಿಸಿ ಎದುರು ಬದುರು ನಿಂತು ಹೊಯ್ಯುತ್ತ ಬಣ್ಣದ ಹಬ್ಬದ ಮೆರಗು ಹೆಚ್ಚಿಸಿದರು. ಮೂರು ಪೇಟಗಳ ಜನರು ಸಮಾಗಮವಾಗುವ ದೃಶ್ಯವನ್ನು ನೋಡಲು ಸಾವಿರಾರು ಜನರು ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನಿಂತಿದ್ದರು.


ಇಂದು ಕೊನೆಯ ದಿನ: ಬಾಗಲಕೋಟೆಯಲ್ಲಿ ಮೊದಲ ದಿನ ಕಿಲ್ಲಾ ಹಾಗೂ 2ನೇ ದಿನ ಹಳೆಪೇಟ, ಜೈನ್‌ಪೇಟ, ವೆಂಕಟಪೇಟ ಬಣ್ಣದಾಟ ಮುಕ್ತಾಯವಾಗಿದ್ದು, ಮಾ.7ರಂದು ಮೂರನೇ ದಿನ ಹೊಸಪೇಟದಿಂದ ಬಣ್ಣದಾಟ ನಡೆಯಲಿದೆ. ಹಳೇ ಬಾಗಲಕೋಟೆ, ವಿದ್ಯಾಗಿರಿ, ನವನಗರ ಬಣ್ಣದಲ್ಲಿ ತುಂಬಿ ತುಳುಕಲಿವೆ.

ಬಣ್ಣದಾಟಕ್ಕೆ ಕಳೆ ತಂದ ರೇನ್‌ ಡ್ಯಾನ್ಸ್‌: ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ರೇನ್ ಡ್ಯಾನ್ಸ (ಕೃತಕ ಮಳೆ) ಕೋಟೆ ನಗರಿ ರಂಗಿನಾಟಕ್ಕೆ ಕಳೆ ತಂದಿತು. ತುಂತುರು ಹನಿಗಳ ನಡುವೆ ಯುವಕರು ಕುಣಿದು ಕುಪ್ಪಳಿಸಿದರು. ಇದರೊಂದಿಗೆ ಡಿಜೆ ಸಾಂಗ್ ಸಾಥ ನೀಡಿದ್ದು ಆಕರ್ಷಿಸಿತು. ಚಪ್ಪಾಳಿ, ಶಿಳ್ಳೆಗಳ ಸುರಿಮಳೆಯಾಯಿತು. ಅಲ್ಲದೆ ತುರಾಯಿ ಹಲಗೆಯ ನಿನಾದ ಹೋಳಿ ಹಬ್ಬ ಮೆರಗು ಹೆಚ್ಚಿಸಿತು. ಡಿಜೆ ಸೌಂಡ್‌ ಮತ್ತು ಹಲಗೆ ನಿನಾದಕ್ಕೆ ಕೋಟೆ ನಗರಿ ಜನ ಮನಸೋತರು.