ಗುತ್ತಿಗೆ ಹೊಣೆ ಹೊತ್ತಿರುವ ಕಂಪನಿ ಪ್ರಸಕ್ತ ವರ್ಷ 33 ಕ್ರಸ್ಟ್ ಗೇಟ್ ಪೂರ್ಣ ಬದಲಾಯಿಸಿ ಹೊಸದಾಗಿ ಅಳವಡಿಸಲಿದೆ

ಸೋಮರಡ್ಡಿ ಅಳವಂಡಿ ಕೊಪ್ಪಳ

ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್ ಶಿಥಿಲಗೊಂಡಿರುವುದರಿಂದ ಅವುಗಳನ್ನು ಬದಲಿಸುವ ಕಾರ್ಯ ಭರದಿಂದ ಸಾಗಿದ್ದು, 18ನೇ ಕ್ರಸ್ಟ್ ಗೇಟ್ ಗೆ ನೂತನ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಅದನ್ನು ಆಪರೇಟ್ ಸಹ ಮಾಡಲಾಗಿದ್ದು, ಯಶಸ್ವಿಯಾಗಿ ಕಾರ್ಯ ನಿರ್ವಹಣೆಯಾಗುತ್ತಿದೆ.

ಮೊದಲ ಕ್ರಸ್ಟ್ ಗೇಟ್ ಅಳವಡಿಸಿ ಯಶಸ್ವಿ ಆಗಿದ್ದರಿಂದ ವಿಶ್ವಾಸ ಇಮ್ಮಡಿಸಿದ್ದು, ಉಳಿದ ಕ್ರಸ್ಟ್ ಅಳವಡಿಸುವ ಕಾರ್ಯ ನಿಗದಿತ ಸಮಯಕ್ಕಿಂತಲೂ ಮುಂಚೆಯೇ ಪೂರ್ಣಗೊಳಿಸುವ ವಿಶ್ವಾಸ ಮೂಡಿದೆ.

ಹೌದು, 2024 ಆಗಸ್ಟ್ ತಿಂಗಳಲ್ಲಿ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಮುರಿದು ದೊಡ್ಡ ಅನಾಹುತವೇ ಆಗಿತ್ತು. ನಂತರ ಅದನ್ನು ಸ್ಟಾಪ್ ಲಾಗ್ ಅಳವಡಿಸುವ ಮೂಲಕ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಯಿತು. ಇದಾದ ಮೇಲೆ ಉಳಿದೆಲ್ಲ ಕ್ರಸ್ಟ್ ಗೇಟ್ ಶಿಥಿಲಗೊಂಡಿದ್ದು, ಎಲ್ಲವನ್ನು ಬದಲಾಯಿಸಬೇಕು ಎಂದು ಕೇಂದ್ರ ಜಲ ಆಯೋಗ ತಜ್ಞರು ವರದಿ ಸಲ್ಲಿಸಿದ್ದರು. ಹೀಗಾಗಿ, ಈ ವರ್ಷ ಅಹ್ಮದಾಬಾದ್ ಮೂಲದ ಹಾರ್ಡ್ ವೇರ್ ಟೂಲ್ಸ್ ಆಂಡ ಮಷಿನರಿ ಪ್ರವೇಟ್ ಲಿ.ಕಂಪನಿ ಗುತ್ತಿಗೆಯ ಹೊಣೆ ಹೊತ್ತಿದೆ. ₹ 54 ಕೋಟಿ ವೆಚ್ಚದ ಈ ಕಾಮಗಾರಿ ಪಡೆದಿರುವ ಕಂಪನಿ ಜೂನ್ ತಿಂಗಳವರೆಗೂ ಕಾಲವಕಾಶ ಪಡೆದಿದೆ.

33 ಗೇಟ್ ಅಳವಡಿಕೆ: ಗುತ್ತಿಗೆ ಹೊಣೆ ಹೊತ್ತಿರುವ ಕಂಪನಿ ಪ್ರಸಕ್ತ ವರ್ಷ 33 ಕ್ರಸ್ಟ್ ಗೇಟ್ ಪೂರ್ಣ ಬದಲಾಯಿಸಿ ಹೊಸದಾಗಿ ಅಳವಡಿಸಲಿದೆ. ಈಗ ಅದರ ಭಾಗವಾಗಿ ಪ್ರಥಮವಾಗಿ 18ನೇ ಗೇಟ್‌ ತೆರವು ಮಾಡಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಕ್ರಸ್ಟ್ ಗೇಟ್ ಅಳವಡಿಸಿ ಆಪರೇಟ್ ಸಹ ಮಾಡಲಾಗಿದೆ. ಹೀಗಾಗಿ, ಉಳಿದ ಕ್ರಸ್ಟ್ ಗೇಟ್ ಅಳವಡಿಕೆ ಇನ್ನು ಸುಲಭವಾಗಿ ನಡೆಯಲಿದೆ ಎನ್ನುತ್ತಾರೆ ಎಂಜಿಯರ್ ಅವರು.

ಈಗಾಗಲೇ ಏಳು ಕ್ರಸ್ಟ್ ಗೇಟ್ ತೆರವು ಮಾಡಲಾಗಿದ್ದು, ಉಳಿದವುಗಳನ್ನು ಮಾಡುವ ಕಾರ್ಯ ಭರದಿಂದ ಸಾಗಿದೆ. ಬಳಿಕ ಹೊಸ ಕ್ರಸ್ಟ್ ಗೇಟ್ ಅಳವಡಿಸಲಾಗುತ್ತದೆ.

ಪ್ರತಿ ತಿಂಗಳು 6 ಕ್ರಸ್ಟ್ ಗೇಟ್ ಅಳವಡಿಸುವ ಒಪ್ಪಂದವಾಗಿದೆ. ಆದರೆ, ಈಗ ಕಾಮಗಾರಿಯಲ್ಲಿ ವೇಗ ಪಡೆದುಕೊಂಡಿರುವುದರಿಂದ ಮತ್ತು ಒಂದು ಕ್ರಸ್ಟ್ ಗೇಟ್ ಅಳವಡಿಸಿ ಆಪರೇಟ್ ಮಾಡಿರುವುದರಿಂದ ತಿಂಗಳಿಗೆ 8-10 ಕ್ರಸ್ಟ್ ಗೇಟ್ ಅಳವಡಿಸುವ ವಿಶ್ವಾಸ ಬಂದಿದೆ ಎನ್ನುತ್ತಾರೆ ಕಂಪನಿಯ ಪ್ರತಿನಿಧಿಗಳು. ಹೀಗಾಗಿ, ಏಪ್ರಿಲ್ ಅಂತ್ಯದೊಳಗೆ ಎಲ್ಲ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ ಪೂರ್ಣಗೊಳಿಸಿ ಆಪರೇಟ್ ಗೆ ಸಿದ್ಧ ಮಾಡಲಾಗುವುದು ಎನ್ನುತ್ತಾರೆ.

ಮೂರನೇ ಜಲಾಶಯ:ಈಗಾಗಲೇ ಕೆಆರ್ ಎಸ್, ನಾರಾಯಣಪುರ ಜಲಾಶಯದಲ್ಲಿಯೂ ಈ ಹಿಂದೆ ಕ್ರಸ್ಟ್ ಗೇಟ್ ಬದಲಾಯಿಸಲಾಗಿದೆ. ಆದರೆ, ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ತುಂಗಭದ್ರಾ ಜಲಾಶಯದ ಅಷ್ಟೂ ಕ್ರಸ್ಟ್ ಗೇಟ್ ಬದಲಾವಣೆ ಮಾಡಿ ನೂತನ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ ನಡೆಯುತ್ತಿದೆ.

ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯದ ಪ್ರಥಮ ಗೇಟ್ ಅಳವಡಿಸಿದ್ದು, ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಉಳಿದವುಗಳ ಅಳವಡಿಕೆ ವೇಗವಾಗಿ ಆಗಲಿದೆ ಎಂದು ತುಂಗಭದ್ರಾ ಬೋರ್ಡ್ ಕಾರ್ಯದರ್ಶಿಗಳು ಓ.ಆರ್.ಕೆ.ರೆಡ್ಡಿ ತಿಳಿಸಿದ್ದಾರೆ.

ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಗಳನ್ನು ನೂತನವಾಗಿ ಅಳವಡಿಸುವ ಕಾರ್ಯ ನಡೆದಿದ್ದು, 18 ನೇ ಗೇಟ್ ಅಳವಡಿಸಿ ಯಶಸ್ವಿಯಾಗಿ ಆಪರೇಟ್ ಮಾಡಲಾಗಿದೆ ಎಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.