ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಕ್ರೀಡಾಪಟುಗಳಿದ್ದು, ಅವರಿಗೆ ಆಟವಾಡಲು ಸೂಕ್ತ ವ್ಯವಸ್ಥೆ ಜೊತೆಗೆ ಪ್ರೋತ್ಸಾಹಿಸುವ ಕೆಲಸ ಸಂಘ ಸಂಸ್ಥೆ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿ ಎಂದು ಬಿ.ಕಣಬೂರು ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಅರುಣೇಶ್ ಹೇಳಿದರು.ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಕಡ್ಲೆಮಕ್ಕಿ ಫ್ರೆಂಡ್ಸ್ ಆಯೋಜಿಸಿದ್ದ ಕಲಾರಂಗ ಪ್ರೀಮಿಯರ್ ಲೀಗ್ ಸೀಸನ್-2 ರ ಕ್ಷೇತ್ರ ಹಾಗೂ ರಾಜ್ಯ ಮಟ್ಟದ 30 ಗಜಗಳ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದಲ್ಲಿ ವಿವಿಧ ಕ್ರೀಡೆಗಳಲ್ಲಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಆಡುವ ಕ್ರೀಡಾಪಟುಗಳಿದ್ದು, ಕಡ್ಲೆಮಕ್ಕಿ ಫ್ರೆಂಡ್ಸ್ ತಂಡದವರು ಇದೇ ಮೊದಲ ಬಾರಿಗೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ ಎಂದರು.ಪತ್ರಕರ್ತ ಯಜ್ಞಪುರುಷಭಟ್ ಮಾತನಾಡಿ, ಪಟ್ಟಣದಲ್ಲಿ ಸುಮಾರು 15000ಕ್ಕೂ ಹೆಚ್ಚು ನಾಗರಿಕರಿದ್ದು ಆಟವಾಡಲು ಸುಸಜ್ಜಿತ ಕ್ರೀಡಾಂಗಣ ಇಲ್ಲದಿರುವುದು ವಿಷಾದಕರ ಸಂಗತಿ. ಬಹುಮಾನ ವಿತರಣಾ ಸಮಾರಂಭದಲ್ಲಿ ರಾಜಕಾರಣಿಗಳು ಕ್ರೀಡಾಂಗಣ ಮಾಡಿಸಿಕೊಡುವ ಭರವಸೆ ಭರವಸೆಯಾಗಿಯೇ ಉಳಿದಿದೆ ಎಂದರು.
ಕೇಂದ್ರೀಯ ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ ಮಾತನಾಡಿ, ಕಲಾರಂಗ ಕ್ರೀಡಾಂಗಣಲ್ಲಿ ಐಪಿಎಲ್, ಕೆಪಿಎಲ್ ಆಟಗಾರರು ಬಂದು ಆಟವಾಡಿದ್ದಾರೆ. ಇದೊಂದು ವಿಶೇಷ ಕ್ರೀಡಾಂಗಣ. ಗೆದ್ದವರು ಹಿಗ್ಗದೆ ಸೋತವರು ಕುಗ್ಗದೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಮುಂದೆ ಸಾಗುವುದೇ ಕ್ರೀಡಾ ಧರ್ಮವಾಗಿದೆ ಎಂದರು.ಕಾಫಿ ಬೆಳೆಗಾರ ಎಂ.ವಿ.ಶ್ರೀನಿವಾಸಗೌಡ, ರಾಕಿನ್ ಕ್ರಿಕೆಟ್ ಅಕಾಡೆಮಿ ವ್ಯವಸ್ಥಾಪಕ ರಾಕಿನ್ ಆದಿಲ್, ಗ್ರಾಪಂ ಸದಸ್ಯ ಮಹಮ್ಮದ್ ಜುಹೇಬ್, ಗುತ್ತಿಗೆದಾರ ಟಿ.ಎಂ.ಬಶೀರ್, ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್, ಮಹಮದ್ ಶಹಾಬ್, ಮುಸ್ತಫಾ, ಇಬ್ರಾಹಿಂ ಶಾಫಿ, ಎಸ್.ಕೆ.ರಫೀಕ್, ಶಾಹಿದ್, ಇರ್ಪಾನ್, ಮತ್ತಿತರರು ಹಾಜರಿದ್ದರು.
ಪಂದ್ಯಾವಳಿಯಲ್ಲಿ 30 ತಂಡಗಳು ಭಾಗವಹಿಸಿದ್ದು, ಅಂತಿಮವಾಗಿ ಕುಂದಾಪುರದ ಬಿ.ಕೆ.ಬ್ರಯ್ಸ್ ತಂಡ ಪ್ರಥಮ ಸ್ಥಾನ, ಅಜಿತ್ ಬಾಯ್ಸ್ ತಂಡ ದ್ವಿತೀಯ, ಯುನೈಟೆಡ್ ಬಾಯ್ಸ್ ತಂಡ ತೃತೀಯ, ಜೆಡ್ ಇಲೆವೆನ್ ತಂಡ ಚತುರ್ಥ ಸ್ಥಾನ ಪಡೆದವು.ರಿಜ್ವಾನ್ (ಬೆಸ್ಟ್ ಬ್ಯಾಟ್ಸ್ ಮೆನ್), ಚವನ್ ಭಂಡಾರಿ (ಬೆಸ್ಟ್ ಬೌಲರ್), ಸೇತನ್ ನಿತೇಶ್ (ಬೆಸ್ಟ್ ಫೀಲ್ಡರ್), ಚಿದಾನಂದ್ (ಬೆಸ್ಟ್ ಕೀಪರ್), ಕುಂದಾಪುರದ ನಾಗರಾಜ್ (ಪಂದ್ಯ ಪುರುಷ), ಪ್ರದೀಪ್ ಶೆಟ್ಟಿ (ಸರಣಿ ಶ್ರೇಷ್ಠ) ಪ್ರಶಸ್ತಿ ಪಡೆದರು.