ವಿಜಯಪುರ: ಪಟ್ಟಣದ ಶಕ್ತಿ ದೇವತೆ, ಇತಿಹಾಸ ಪ್ರಸಿದ್ಧ ಶ್ರೀ ಗಂಗಾದೇವಿ ಅಮ್ಮನವರ ಜಾತ್ರೆ ಹಾಗೂ ದೀಪಾರತಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಟಿಡುವ (ಘೋಷಣೆ ಮಾಡುವ) ಮೂಲಕ ಅದ್ಧೂರಿ ಚಾಲನೆ ನೀಡಲಾಯಿತು.
ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎನ್.ರುದ್ರಮೂರ್ತಿ ಮಾತನಾಡಿ, ಕಳೆದ ೫೬ ವರ್ಷಗಳಿಂದ ಹಿರಿಯರಾದ ಎ.ವಿ. ಚಿಕ್ಕಪ್ಪಾಯಣ್ಣ, ಬಿ.ಚನ್ನರಸಪ್ಪ, ಸಿ.ಕಂತೆಪ್ಪ, ಆರ್.ದೇವರಾಜು ನೇತೃತ್ವದಲ್ಲಿ ಬೆಳೆದುಬಂದ ಈ ಜಾತ್ರಾ ಪರಂಪರೆಯನ್ನು ಇಂದು ಎಂ.ಸತೀಶ್ ಕುಮಾರ್ ನೇತೃತ್ವದಲ್ಲಿ ಮುಂದುವರಿಸಲಾಗುತ್ತಿದೆ ಎಂದರು.
ಬೆಳಿಗ್ಗೆ ದೇವಾಲಯದಲ್ಲಿ ಧ್ವಜಾರೋಹಣ ಹಾಗೂ ವಿಶೇಷ ಪೂಜೆಗಳನ್ನು ನೆರವೇರಿಸಿದ ನಂತರ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಟಿಡುವ ಕಾರ್ಯಕ್ರಮ ನಡೆಯಿತು. ಊರಿನ ಹೆಣ್ಣುಮಕ್ಕಳು ದೀಪಾರತಿ ಮುಗಿಯುವವರೆಗೆ ಹೊರಗೆ ಹೋಗಬಾರದು ಮತ್ತು ಹೊರಗಿನವರು ಊರೊಳಗೆ ಬರಬಾರದು ಎಂಬ ವಿಶಿಷ್ಟ ನಂಬಿಕೆ ಇಲ್ಲಿ ಅನೂಚಾನವಾಗಿ ನಡೆದುಬಂದಿದೆ.ಹತ್ತು ದಿನ ಜಾತ್ರೆ ಅಂಗವಾಗಿ ದೇವಾಲಯದಲ್ಲಿ ಪ್ರತಿದಿನ ವಿಶೇಷ ಅಲಂಕಾರ, ಪೂಜೆ, ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮೇ ೧೦ರಂದು ರಾತ್ರಿ ೧೦೮ ಕಳಸಗಳ ಹೋಮ, ಮಹಾಭಿಷೇಕ ಹಾಗೂ ಸಹಸ್ರ ನಾಮಾರ್ಚನೆ. ಮೇ ೧೧ರಂದು ಬಾವಿಯಿಂದ ಜಲಗಂಗಮ್ಮ ಕರೆತಂದು ಪ್ರತಿಷ್ಠಾಪನೆ ಹಾಗೂ ಬಳೆ ತೊಡಿಸುವ ಕಾರ್ಯಕ್ರಮ. ಮೇ ೧೨: ಬೆಳಿಗ್ಗೆ ೮ರಿಂದ ರಾತ್ರಿ ೯ ಗಂಟೆವರೆಗೆ ಸಾರ್ವಜನಿಕರಿಂದ ''''''''ದೀಪಾರತಿ'''''''' ಬೆಳಗುವ ಮಹೋತ್ಸವ.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ನಾಗರಾಜ್, ಗೌರವಾಧ್ಯಕ್ಷೆ ಅನ್ನಪೂರ್ಣಮ್ಮ ಮುನಿಕೃಷ್ಣಪ್ಪ, ಉದ್ಯಮಿ ಪಿ. ಸಂಪತ್‌ಕುಮಾರ್, ಕೆ. ಕೆ.ಎಂ. ಮಧು, ಮುನಿರಾಜು, ವೆಂಕಟೇಶ್, ವಕೀಲ ವೆಂಕಟಗಿರಿಯಪ್ಪ, ರಾಜ್ಯ ಗಂಗಾಮತಸ್ಥರ ಸಮಿತಿ ಸಂಚಾಲಕ ಮುನಿರಾಜು, ಆಂಜನಪ್ಪ, ಎನ್. ನಾರಾಯಣಸ್ವಾಮಿ, ಸುಧಾಕರ್,ಗುಂಡಣ್ಣ ಇತರರು ಉಪಸ್ಥಿತರಿದ್ದರು.