ಕನ್ನಡಪ್ರಭ ವಾರ್ತೆ ಕಾರವಾರ
ಯೂಟ್ಯೂಬರ್ ಮುಕಳೆಪ್ಪ ನಕಲಿ ದಾಖಲೆ ಸಲ್ಲಿಸಿ ಹಿಂದೂ ಯುವತಿಯನ್ನು ವಿವಾಹವಾಗಿದ್ದು, ಮುಂಡಗೋಡದಲ್ಲಿ ತನ್ನ ವಿವಾಹ ನೋಂದಣಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ನಕಲಿ ದಾಖಲೆ ಸಲ್ಲಿಸಿ ಮಾಡಿರುವ ವಿವಾಹ ನೋಂದಣಿ ರದ್ದು ಪಡಿಸಬೇಕು ಹಾಗೂ ಕರ್ತವ್ಯ ಲೋಪ ಎಸಗಿರುವ ನೋಂದಣಿ ಅಧಿಕಾರಿಯನ್ನು ತಕ್ಷಣವೇ ಅಮಾನತು ಮಾಡಬೇಕೆಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದ್ದಾರೆ.ಸೋಮವಾರ ಕಾರವಾರಕ್ಕೆ ಭೇಟಿ ನೀಡಿದ ಅವರು ಮೋಸದಿಂದ ಸುಳ್ಳು ಕಾಗದ ಪತ್ರ ಸಲ್ಲಿಸಿ, ಕಾನೂನುಗಳನ್ನು ಉಲ್ಲಂಘಿಸಿ ಮುಂಡಗೋಡದಲ್ಲಿ ವಿವಾಹ ನೋಂದಣಿಯಾದ ಬಗ್ಗೆ ಕ್ರಮಕೈಗೊಳ್ಳುವಂತೆ ಈಗಾಗಲೇ ಜಿಲ್ಲಾ ಆಡಳಿತಕ್ಕೆ ಆಗ್ರಹ ಮಾಡಿದ್ದೇವೆ. ಆದರೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಇದು ಕೊನೆಯ ಎಚ್ಚರಿಕೆಯಾಗಿದೆ. ಈ ಬಗ್ಗೆ ಕ್ರಮ ಆಗದೆ ಇದ್ದರೇ ನಮ್ಮ ಪ್ರಕಾರ ಹೋರಾಟ ಮಾಡುತ್ತೇವೆ ಎಂದರು.
ಈಚೆಗೆ ಮುಂಡಗೋಡ ಉಪ ನೋಂದಣಿ ಕಚೇರಿಯಲ್ಲಿ ಅವ್ಯವಹಾರ ಮತ್ತು ಕಾನೂನುಬಾಹಿರವಾಗಿ ವಿವಾಹ ನೋಂದಣಿಗಳನ್ನು ಬೇಕಾಬಿಟ್ಟಿಯಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಕಾನೂನು ಉಲ್ಲಂಘನೆಗಳ ವಿವರ:ಕಳೆದ ಮೇ 3ರಂದು ಮುಸ್ಲಿಂ ಯುವಕ ಖ್ವಾಜಾ ಬಂದೇನವಾಜ ಶಿರಹಟ್ಟಿ (ಮುಕಳೆಪ್ಪ) ಮತ್ತು ಹಿಂದೂ ಯುವತಿ ಗಾಯತ್ರಿ ಜಾಲಿಗಾಳ ಅವರ ವಿವಾಹ ನೋಂದಣಿಯನ್ನು ಸುಳ್ಳು ಕಾಗದ ಪತ್ರ ಸೃಷ್ಟಿಸಿ, ಕಾನೂನನ್ನು ಗಾಳಿಗೆ ತೂರಿ ನೋಂದಾಯಿಸುವ ಮೂಲಕ ಅಪರಾಧವೆಸಗಲಾಗಿದೆ. ವಿವಾಹ ನೋಂದಣಿ ನೋಟೀಸ್ ನೀಡುವ ಮೊದಲು ಮತ್ತು ನಂತರ ಕನಿಷ್ಠ ಒಂದು ತಿಂಗಳ ಕಾಲ ನೋಂದಣಿ ನಡೆಯುವ ಜಿಲ್ಲೆಯಲ್ಲಿ ವಾಸವಾಗಿರಬೇಕು ಎಂಬ ನಿಯಮ ಉಲ್ಲಂಘಿಸಲಾಗಿದೆ. ನೋಂದಣಿಯ ಮಾಹಿತಿಯನ್ನು ಕಚೇರಿಯ ಸೂಚನಾ ಫಲಕದಲ್ಲಿ ಅಂಟಿಸಿಲ್ಲ ಎಂದು ಆರೋಪಿಸಿದರು.
ಮೋಸದಿಂದ, ಸುಳ್ಳು ಕಾಗದ ಪತ್ರ ಸಲ್ಲಿಸಿ ಮತ್ತು ಕಾನೂನು ನಿಯಮಗಳನ್ನು ಗಾಳಿಗೆ ತೂರಿ ನಡೆಸಿದ ಈ ವಿವಾಹ ನೋಂದಣಿ ರದ್ದಾಗಬೇಕು. ನಿಯಮ ಪಾಲಿಸದ ನೋಂದಣಿ ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಬೇಕು. ಕಾನೂನುಬಾಹಿರ ಕಾರ್ಯಕ್ಕೆ ಸಹಕರಿಸಿದ ಇತರೆ ಸಿಬ್ಬಂದಿಯನ್ನೂ ಅಮಾನತುಗೊಳಿಸಿ ಕ್ರಮ ಕೈಗೊಳ್ಳಬೇಕೆಂದು ಮುತಾಲಿಕ್ ಒತ್ತಾಯಿಸಿದ್ದಾರೆ.ಈ ಪ್ರಕರಣದಲ್ಲಿ ತಪ್ಪು ಮಾಡಿದ ಎಲ್ಲರನ್ನು ಕೂಡಲೇ ಬಂಧಿಸಬೇಕು. ಒಂದು ವೇಳೆ ಬಂಧಿಸದಿದ್ದರೆ, ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಗಾಯತ್ರಿ ಅವರ ತಾಯಿ ಶಿವಕ್ಕ ಜಾಲಿಹಾಳ, ಶ್ರೀರಾಮ ಸೇನೆಯ ಉತ್ತರ ಪ್ರಾಂತದ ಉಪಾಧ್ಯಕ್ಷ ಜಯಂತ ನಾಯ್ಕ, ಜಿಲ್ಲಾ ಪ್ರಮುಖರಾದ ಸಂತೋಷ ನಾಯ್ಕ, ಸಂದೀಪ ನಾಯ್ಕ, ಮುಂಡಗೋಡ ತಾಲೂಕು ಅಧ್ಯಕ್ಷ ಮಂಜುನಾಥ ಕೆ.ಜಿ. ಸೇರಿದಂತೆ ಹಲವರು ಇದ್ದರು.ಪ್ರಿಯಾಂಕ್ ಖರ್ಗೆಗೆ ಮುತಾಲಿಕ್ ತಿರುಗೇಟುಆರ್ಎಸ್ಎಸ್ ನನ್ನಂತಹ ಕೋಟ್ಯಂತರ ಜನರನ್ನು ಬೆಳೆಸಿದೆ. ನಿಮ್ಮ ಕಾಂಗ್ರೆಸ್‌ಗೆ 130 ವರ್ಷಗಳಾಗಿದ್ದು, ಹಾಳಾಗಿ ಹೋಳಾಗಿ ದೇಶವನ್ನೇ ಹಾಳು ಮಾಡಿದೆ ಎಂದು ಆರ್‌ಎಸ್‌ಎಸ್ ನಿಷೇಧ ಮಾಡಬೇಕೆಂದು ಹೇಳಿದ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಕಿಡಿಕಾರಿದರು.ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುತಾಲಿಕ್, ಆರ್‌ಎಸ್‌ಎಸ್ ದೇಶವನ್ನು ಕಟ್ಟುವ ಕೆಲಸವನ್ನು ಮಾಡಿದೆಯೇ ಹೊರತೂ ಹಾಳು ಮಾಡಿಲ್ಲ ಎಂದರು.ಆರ್‌ಎಸ್‌ಎಸ್‌ನ್ನು ತಾಲಿಬಾನ್‌ಗೆ ಹೋಲಿಸಿದ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ ಅವರ ವಿರುದ್ಧವೂ ಮುತಾಲಿಕ್ ಕೆಂಡಕಾರಿ, ನಾಲಿಗೆ ಬಿಗಿ ಹಿಡಿದು ಮಾತನಾಡಿ ಎಂದು ಎಚ್ಚರಿಸಿದರು.
ಪಾಕಿಸ್ತಾನ್ ಜಿಂದಾಬಾದ್ ಅಂತ ಹೇಳುವವರನ್ನು ಬ್ಯಾನ್ ಮಾಡಬೇಕೆಂದು ನಿಮ್ಮ ಬಾಯಿಂದ ಬರುವುದಿಲ್ಲ. ಭಾರತ್ ಮಾತಾಕಿ ಜೈ ಎಂದರೆ ಬ್ಯಾನ್ ಮಾಡಿ ಅಂತೀರಿ ಎಂದು ತಿರುಗೇಟು ನೀಡಿದರು.ನಿಮಗೆ ಧೈರ್ಯವಿಲ್ಲ, ಯಾಕಂದ್ರೆ ವೋಟ್ ಬ್ಯಾಂಕ್ ರಾಜಕಾರಣ. ಮುಸ್ಲಿಮರ ವೋಟ್‌ನಿಂದಲೇ ನೀವು ಬದುಕುತ್ತಿದ್ದೀರಿ. ಆರ್‌ಎಸ್‌ಎಸ್‌ಗೆ ಬೈದರೆ ಸರ್ವನಾಶವಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.ಶಾಸಕ ಮುನಿರತ್ನ ಅವರಿಗೆ ಡಿಕೆಶಿ ಅವರು ಏಯ್ ಕರಿಟೋಪಿ ಬಾ ಇಲ್ಲಿ ಅಂತಾರೆ. ಅದನ್ನೇ ಅವರು ಮುಸ್ಲಿಮರಿಗೆ ಹೇಳಲಿ ನೋಡೋಣ. ಕರಿಟೋಪಿನೇ ನೂರು ವರ್ಷ ಬಾಳಿದೆ. ಕಾಂಗ್ರೆಸ್ ಎಷ್ಟು ಹಾಳಾಗಿದೆ, ಹೋಳಾಗಿದೆ ಎಂದು ಲೆಕ್ಕ ಕೊಡುತ್ತೇವೆ. ಆರ್‌ಎಸ್‌ಎಸ್ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದು ಮುತಾಲಿಕ್ ಸವಾಲು ಹಾಕಿದರು.