ಮಂಡ್ಯ ಜಿಲ್ಲಾದ್ಯಂತ ಸಡಗರ-ಸಂಭ್ರಮದಿಂದ ಶ್ರೀ ವರಮಹಾಲಕ್ಷ್ಮಿ ಹಬ್ಬ ಆಚರಣೆ

KannadaprabhaNewsNetwork |  
Published : Aug 22, 2026, 01:30 AM IST
೨೧ಕೆಎಂಎನ್‌ಡಿ-೬ಮಂಡ್ಯದ ಪೇಟೆ ಬೀದಿಯ ಶ್ರೀ ಶ್ರೀನಿವಾಸ ದೇವಸ್ತಾನ ರಸ್ತೆಯಲ್ಲಿರುವ ಶ್ರೀ ವರ ಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಸಾರ್ವಜನಿಕರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಸಂಪತ್ತಿನ ಅಧಿದೇವತೆಯಾದ ಶ್ರೀವರಮಹಾಲಕ್ಷ್ಮಿ ಹಬ್ಬವನ್ನು ಜಿಲ್ಲಾದ್ಯಂತ ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ವರ ಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಶುಕ್ರವಾರ ಎಲ್ಲ ಶಕ್ತಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ಬೆಳಗಿನಿಂದಲೇ ಭಕ್ತರು ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದು ಪುನೀತರಾದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಂಪತ್ತಿನ ಅಧಿದೇವತೆಯಾದ ಶ್ರೀವರಮಹಾಲಕ್ಷ್ಮಿ ಹಬ್ಬವನ್ನು ಜಿಲ್ಲಾದ್ಯಂತ ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ವರ ಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಶುಕ್ರವಾರ ಎಲ್ಲ ಶಕ್ತಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ಬೆಳಗಿನಿಂದಲೇ ಭಕ್ತರು ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದು ಪುನೀತರಾದರು.

ಸಾಮಾನ್ಯವಾಗಿ ಶ್ರಾವಣ ಮಾಸದ ಎರಡನೇ ಶುಕ್ರವಾರ ಬರುವ ಶ್ರೀ ವರಮಹಾಲಕ್ಷ್ಮಿ ವ್ರತಾಚರಣೆಯ ಪೂಜಾ ಕಾರ್ಯಗಳನ್ನು ಮನೆ ಮನೆಗಳಲ್ಲೂ ನಡೆಸಿದರು. ಮುಂಜಾನೆಯೇ ಮನೆಗಳಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ವಿವಿಧ ಭಕ್ಷ್ಯ ಭೋಜನಗಳನ್ನು ಸಿದ್ದಪಡಿಸಿ ದೇವಿಗೆ ಅರ್ಪಿಸಿ ಕೃತಾರ್ತರಾದರು.

ನಗರದ ಪೇಟೆ ಬೀದಿಯ ಶ್ರೀನಿವಾಸ ದೇವಸ್ಥಾನ ರಸ್ತೆಯಲ್ಲಿರುವ ಶ್ರೀವರ ಮಹಾಲಕ್ಷ್ಮಿ ಹಾಗೂ ಶ್ರೀಚಕ್ರ ಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಮಹೋತ್ಸವಗಳು ನಡೆದವು. ಬೆಳಗ್ಗೆ ೬ ಗಂಟೆಗೆ ಪಂಚಾಮೃತ ಅಭಿಷೇಕ, ಬೆಳ್ಳಿ ಅಲಂಕಾರ, ತೋಮಾಲೆ ಸೇವೆ, ಮಧ್ಯಾಹ್ನ ಮಹಾ ಮಂಗಳಾರತಿ, ತೀರ್ಥ, ಬೆಳಗ್ಗೆಯಿಂದ ಸಂಜೆಯವರೆಗೆ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು. ನೂರಾರು ಭಕ್ತರು ದೇವಳಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಅಮ್ಮನವರ ಆಶೀರ್ವಾದ ಪಡೆದರು.

ಎಂ.ವೈ.ಕುಮಾರ ಮತ್ತು ತಂಡದಿಂದ ಡೋಲು, ಎಂ.ಎನ್.ಯೋಗೇಶ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ, ಸಿ.ಪಿ. ಕೃಷ್ಣಮೂರ್ತಿ ಮತ್ತು ಗೊರವಾಲೆ ಉಮಾಶಂಕರ್ ತಂಡದಿಂದ ಕ್ಲಾರಿಯೋನೆಟ್ ವಾದನ, ದಾಸವಾಣಿ ಸಿ.ಕೆ. ಮಂಜುನಾಥ್ ಮತ್ತು ತಂಡದಿಂದ ಪಿಟೀಲು ವಾದನ ಕಾರ್ಯಕ್ರಮಗಳು ನಡೆಯಿತು.

ಹಬ್ಬದ ಸಂಭ್ರಮ:

ನಗರ ಹಾಗೂ ಪಟ್ಟಣಗಳ ಜನತೆ ಮುಂಜಾನೆಯೇ ತಮ್ಮ ಮನೆಗಳನ್ನು ಶೃಂಗರಿಸಿ ಸುಂದರ ಮಂಟಪ ಸಿದ್ಧಪಡಿಸಿ, ಲಕ್ಷ್ಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಆಭರಣಗಳಿಂದ ಸಿಂಗರಿಸಿ, ವಿಶೇಷ ಪೂಜೆ ನಡೆಸಿದರು. ಹಬ್ಬಕ್ಕಾಗಿಯೇ ವಿಶೇಷ ಸಿಹಿ ತಿಂಡಿ ತಿನಿಸುಗಳನ್ನಿತ್ತು ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಿದ್ದುದು ಕಂಡುಬಂತು.

ನಗರದ ಶ್ರೀಲಕ್ಷ್ಮೀಜನಾರ್ದನಸ್ವಾಮಿ, ಶ್ರೀಕಾಳಿಕಾಂಭ, ವಿದ್ಯಾನಗರದಲ್ಲಿರುವ ಶ್ರೀ ಗಣಪತಿ ದೇವಸ್ಥಾನ, ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ಶ್ರೀಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ಹಲವು ಶಕ್ತಿ ದೇವತೆಗಳ ದೇವಸ್ಥಾನಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳು ನಡೆದವು.

ಕಳೆದ ಮೂರ್ನಾಲ್ಕು ದಿನಗಳಿಂದಲೂ ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಮಹಿಳೆಯರನ್ನು ಮನೆಯನ್ನು ವಿಶೇಷ ರೀತಿಯಲ್ಲಿ ಸಿಂಗರಿಸಿ, ಲಕ್ಷ್ಮಿಗೆ ಪ್ರಿಯವಾದ ತಿಂಡಿಗಳನ್ನು ಸಿದ್ಧಪಡಿಸಿದ್ದು, ಇಂದು ಅಂತಿಮವಾಗಿ ಪೂಜಾ ಕೈಂಕರ್ಯ ನೆರವೇರಿಸುವ ಮೂಲಕ ತಮ್ಮ ಭಕ್ತಿ ಭಾವವನ್ನು ಪ್ರದರ್ಶಿಸಿದರಲ್ಲದೆ, ಅಕ್ಕ ಪಕ್ಕದ ನೆರೆ ಹೊರೆಯವರೊಂದಿಗೆ ಪೂಜಾ ಕಾರ್ಯ ನಡೆಸಿದ್ದು ಕಂಡುಬಂತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಮಂಟೇಸ್ವಾಮಿ ಕ್ಷೇತ್ರದ ವರಮಹಾಲಕ್ಷ್ಮಿ ಹಬ್ಬಕ್ಕೆ ಧನ ಸಹಾಯ
ನರ್ತಕಿಯರ ಮೇಕಪ್‌ ಕೊಠಡಿಯಾದ ಸಾರ್ವಜನಿಕ ಆಸ್ಪತ್ರೆ..!