ಬಿ.ಎಸ್.ಸುನೀಲ್
ಚಿಕ್ಕ ತಿರುಪತಿ ಎಂದೇ ಕರೆಯುವ ಕೆ.ಎಂ.ದೊಡ್ಡಿಯ ಶ್ರೀವೆಂಕಟೇಶ್ವರ ದೇವಾಲಯ ವರ್ಷದಿಂದ ವರ್ಷಕ್ಕೆ ತನ್ನ ಖ್ಯಾತಿ ಹೆಚ್ಚಿಸಿಕೊಂಡು ಬೇಡಿ ಬರುವ ಭಕ್ತರ ಕಷ್ಟಗಳನ್ನು ನಿವಾರಿಸಿ ಸಾವಿರಾರು ಭಕ್ತ ಸಮೂಹವನ್ನು ತನ್ನತ್ತ ಸೆಳೆಯುತ್ತಿದೆ.
ಕಳೆದ 5 ವರ್ಷಗಳ ಹಿಂದೆ ನಿರ್ಮಾಣವಾಗಿ ಅಲ್ಪಾವಧಿಯಲ್ಲೇ ದೇವರ ಮಹಿಮೆಯೂ ಅಪಾರ ಭಕ್ತರ ಮನ ಸೆಳೆದು ಪ್ರಸಿದ್ಧಿಗಳಿಸಿರುವ ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ ಡಿ.30ರಂದು ವೈಕುಂಠ ಏಕಾದಶಿ ಅಂಗವಾಗಿ ವಿವಿಧ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿದೆ.ಕಳೆದ 60 ವರ್ಷಗಳ ಹಿಂದೆ ಕುಗ್ರಾಮವಾಗಿದ್ದ ಕಾಳಮುದ್ದನದೊಡ್ಡಿಯ ಮಾರಿಗುಡಿ ಬಳಿ ಗ್ರಾಮಸ್ಥರು ವೆಂಕಟೇಶನ ಫೋಟೋ ಇಟ್ಟು ಪೂಜೆ ಸಲ್ಲಿಸುತ್ತಿದ್ದರು. ನಂತರ ಕೆಲವು ವರ್ಷಗಳ ಹಿಂದೆ ತಿಮ್ಮಪ್ಪನ ಭಕ್ತರು, ತಾವಿರುವ ಜಾಗದಲ್ಲಿ ತಮ್ಮ ಮನೆದೇವರಿಗೆ ದೇಗುಲ ಒಂದನ್ನು ನಿರ್ಮಾಣ ಮಾಡಲು ತೀರ್ಮಾನಿಸಿ ಸಮಿತಿ ರಚಿಸಿದರು.
ಶ್ರೀವೆಂಕಟೇಶ್ವರ ದೇವಾಲಯವು ಒಂದು ಸಾಮಾನ್ಯ ಕಟ್ಟೆಯಂತಿದ್ದ ಜಾಗದಲ್ಲಿ ಅತ್ಯದ್ಭುತವಾಗಿ ಮೂಡಿ ಬಂದಿರುವುದು ಸ್ವಾಮಿ ಕೃಪೆಯೇ ಹೊರತು ಬೇರೇನೂ ಅಲ್ಲ. ಹಲವು ವರ್ಷಗಳಿಂದ ಈ ಸ್ಥಳದಲ್ಲಿ ಭಕ್ತರು ಪರ ಪೂಜೆ (ಅನ್ನ ಸಂತರ್ಪಣೆ) ಮಾಡುತ್ತಿದ್ದರು. ಆ ಜನರ ಭಕ್ತಿ ಮೆಚ್ಚಿ ಭಗವಂತ ಇದೇ ಸ್ಥಳದಲ್ಲಿ ನೆಲೆ ನಿಂತಿದ್ದು ಆಶ್ಚರ್ಯವಾಗಿದೆ.
ಡಿ.30ರ ಮಂಗಳವಾರ ವೈಕುಂಠ ಏಕಾದಶಿ ಅಂಗವಾಗಿ ವಿವಿಧ ಪೂಜೆಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪೂಜೆಗೆ ಸುಮಾರು 30 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಪ್ರತಿ ವರ್ಷ ಅನ್ನಸಂತರ್ಪಣೆ, ತೀರ್ಥ, ಪ್ರಸಾದ ವಿನಿಯೋಗ ವಿತರಿಸಿದಂತೆ ಭಕ್ತರಿಗೆ ಈ ವರ್ಷವೂ ಸಂಭ್ರಮದಿಂದ ನಡೆಯಲಿದೆ.
ದೇವಾಲಯದ ಅರ್ಚಕರಾದ ನರಸಿಂಹ ಭಟ್ಟರ್, ಅನಂತ ಕೃಷ್ಣ ಭಟ್ಟರ್, ಪುರೋಹಿತ ಯು.ವಿ.ಗಿರೀಶ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಕಂರ್ಯಗಳು ಜರುಗಲಿವೆ. ದೇವಾಲಯಕ್ಕೆ ಬರುವ ಸಾವಿರಾರು ಭಕ್ತರಿಗೆ ಪಂಚಕಜ್ಜಾಯ, ಹಾಲು ಮತ್ತು ಹಣ್ಣು ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ವಿವಿಧ ಕಲಾವಿದರು, ಹಾಡುಗಾರರಿಂದ ವೈಕುಂಠ ಏಕಾದಶಿ ಅಂಗವಾಗಿ ವಾಧ್ಯ ಗೋಷ್ಠಿ, ಭಜನೆ, ಭಕ್ತಿಗೀತೆ, ಶ್ರೀನಿವಾಸ ಕಲ್ಯಾಣ ಹರಿಕಥೆ, ಹೆಬ್ಬೆಟ್ಟು ನಾಟಕ ಪ್ರದರ್ಶನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ದೇವರ ಸಂಕಲ್ಪ ಹಾಗೂ ದಾನಿಗಳ ನೆರವಿನಿಂದ ನಿರ್ಮಾಣಗೊಂಡಿರುವ ವೆಂಕಟೇಶ್ವರ ದೇಗುಲದಲ್ಲಿ ಪ್ರತಿ ವರ್ಷ ವೈಕುಂಠ ಏಕಾದಶಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಈ ವರ್ಷ 30 ಸಾವಿರಕ್ಕು ಹೆಚ್ಚಿನ ಭಕ್ತರು ದೇಗುಲಕ್ಕೆ ಬರುವ ನಿರೀಕ್ಷೆ ಹೊಂದಲಾಗಿದೆ. ಭಕ್ತರು ಸ್ವಾಮಿಯ ದರ್ಶನ ಪಡೆದು ವೈಕುಂಠ ದ್ವಾರದಲ್ಲಿ ಸಾಗಲು ಯಾವುದೇ ತೊಂದರೆಯಾಗದಂತೆ ವ್ಯವಸ್ಥಿತವಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
- ರಘು ವೆಂಕಟೆಗೌಡ, ಅಧ್ಯಕ್ಷ ಆಸರೆ ಸೇವಾ ಸಮಿತಿ, ಭಾರತಿನಗರಕಷ್ಟದಲ್ಲಿದ್ದ ನಮ್ಮ ಹಿರಿಯರು, ಗ್ರಾಮದ ಮೂಲ ನಿವಾಸಿಗಳು ಮನೆ ದೇವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಈ ಹಿಂದೆ ಕಷ್ಟವಾಗಿತ್ತು. ಹಣ ವಂತರು ಮಾತ್ರ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಪಡೆದು ಬರುತ್ತಿದ್ದರು. ಈಗ ಶ್ರೀ ವೆಂಕಟೇಶ್ವರ ದೇಗುಲ ಗ್ರಾಮದಲ್ಲೇ ನಿರ್ಮಾಣವಾಗಿರುವುದರಿಂದ ಪ್ರತಿಯೊಬ್ಬರೂ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
- ಕಾಳಿ ಪ್ರಸಾದ್, ಕೆ.ಎಂ.ದೊಡ್ಡಿ