ಗುರುಕೃಪೆ ಇಲ್ಲದೆ ಆತ್ಮಜ್ಞಾನ ಪ್ರಾಪ್ತಿಯಾಗುವುದಿಲ್ಲ. ಆತ್ಮಜ್ಞಾನದಿಂದ ಮಾತ್ರ ಸಾಕ್ಷಾತ್ಕಾರ ಸಂಪಾದನೆ ಸುಲಭವಾಗುತ್ತದೆ. ಹಾಗಾಗಿ ನಿತ್ಯವೂ ಶ್ರೀಗುರುವಿನ ಸಂಸ್ಮರಣೆಯ ಅನುಸಂಧಾನ ನಡೆಯಬೇಕು.
ಕನ್ನಡಪ್ರಭ ವಾರ್ತೆ ಧಾರವಾಡ
ಜನನ-ಮರಣಗಳ ಗತಿಚಕ್ರದಿಂದ ವಿಮುಕ್ತಗೊಂಡು ಇಹದ ಬದುಕು ಜಯಿಸಲು ಅಗತ್ಯವಾದ ವಿಸ್ತೃತ ಅನುಭಾವದ ಮಹಾಬೆಳಗನ್ನು ಕರುಣಿಸುವ ಶ್ರೀಗುರು ಕೇವಲ ವ್ಯಕ್ತಿಯಲ್ಲ, ಅವನು ದೈವಚೈತನ್ಯದ ಜೀವಂತ ಅಭಿವ್ಯಕ್ತಿ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಅವರು ಶ್ರೀಮಠದ ನಿಕಟಪೂರ್ವ ಲಿಂಗೈಕ್ಯ ಮಠಾಧೀಶರಾದ ಶ್ರೀಗುರುಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಲಿಂಗಾಂಗ ಸಾಮರಸ್ಯದ 90ನೇ ಪುಣ್ಯಾರಾಧನೆ ಸಂದರ್ಭದಲ್ಲಿ ಗುರುವಾರ ಶ್ರೀಗಳ ಯೋಗಸಮಾಧಿಗೆ ಪುಷ್ಪನಮನ ಸಲ್ಲಿಸಿ ಧರ್ಮ ಸಂದೇಶ ನೀಡಿದರು.
ಗುರುಕೃಪೆ ಇಲ್ಲದೆ ಆತ್ಮಜ್ಞಾನ ಪ್ರಾಪ್ತಿಯಾಗುವುದಿಲ್ಲ. ಆತ್ಮಜ್ಞಾನದಿಂದ ಮಾತ್ರ ಸಾಕ್ಷಾತ್ಕಾರ ಸಂಪಾದನೆ ಸುಲಭವಾಗುತ್ತದೆ. ಹಾಗಾಗಿ ನಿತ್ಯವೂ ಶ್ರೀಗುರುವಿನ ಸಂಸ್ಮರಣೆಯ ಅನುಸಂಧಾನ ನಡೆಯಬೇಕು ಎಂದರು.
ಹಿರಿಯ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತಮ್ಮ ಗುರುಗಳಾಗಿದ್ದ ಲಿಂಗೈಕ್ಯ ಶ್ರೀಗುರುಶಾಂತಲಿಂಗ ಶಿವಾಚಾರ್ಯರು ನಿರಂತರ ಇಷ್ಟಲಿಂಗಾರ್ಚನೆಯಲ್ಲಿ ತನ್ಮಯತೆಯನ್ನು ಸಾಧಿಸಿ ವಿಶಿಷ್ಟ ಶಕ್ತಿ ಸಂಚಯವನ್ನು ಹೊಂದಿದ್ದರು. ಭಕ್ತಗಣಕ್ಕೆ ಇಷ್ಟಲಿಂಗ ಪೂಜೆ ಮತ್ತು ಶಿವಪಂಚಾಕ್ಷರಿ ಮಹಾಮಂತ್ರದ ಮಹತ್ವ ತಿಳಿಸಿ ಎಲ್ಲರನ್ನೂ ಧರ್ಮಮಾರ್ಗದಲ್ಲಿ ಮುನ್ನಡೆಯಲು ಮಾರ್ಗದರ್ಶನ ಮಾಡಿದ್ದರು ಎಂದು ಹೇಳಿದರು.
ವಿಶೇಷ ಪೂಜೆ:
ಲಿಂಗೈಕ್ಯ ಶ್ರೀಗುರುಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿಯವರ ಯೋಗಸಮಾಧಿಗೆ ಗುರುವಾರ ಪ್ರಾತಃಕಾಲ ಏಕಾದಶ ಮಹಾರುದ್ರಾಭಿಷೇಕ, ಅಷ್ಟೋತ್ತರ, ನೂತನಾಂಬರ ಧಾರಣೆ, ಪುಷ್ಪಾಲಂಕಾರ, ಮಹಾಮಂಗಳಾರತಿ ಸೇರಿ ವಿಶೇಷ ಪೂಜಾ ಕೈಂಕರ್ಯಗಳು ಸೋಮಲಿಂಗಲಿಂಗಶಾಸ್ತ್ರಿ ಗುಡ್ಡದಮಠ ಅವರ ವೈದಿಕತ್ವದಲ್ಲಿ ಜರುಗಿದವು. ಶ್ರೀಮಠದ ಶಿವಾನಂದಸ್ವಾಮಿ, ಶಿವಯೋಗಿ, ವಿನಾಯಕ, ರೇಣುಕಾಚಾರ್ಯ ಮತ್ತು ಈರಯ್ಯ ಹಿರೇಮಠ ಈ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ, ಕವಲಗೇರಿ, ಚಂದನಮಟ್ಟಿ, ಹಾರೋಬೆಳವಡಿ ಗ್ರಾಮಗಳೂ ಸೇರಿದಂತೆ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಭಕ್ತರೂ ಸಹ ಈ ಪುಣ್ಯಾರಾಧನೆಯಲ್ಲಿ ಪಾಲ್ಗೊಂಡು ಮಹಾಪ್ರಸಾದ ಸೇವಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.