ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರು ಎಣಿಕೆ ನಾಳೆ

KannadaprabhaNewsNetwork |  
Published : May 01, 2026, 01:15 AM IST
ದದ | Kannada Prabha

ಸಾರಾಂಶ

ಚಿಕ್ಕಮಗಳೂರುಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಎಣಿಕೆಗೆ ಹೈಕೋರ್ಟ್‌ ನಿರ್ದೇಶನದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇ 2 ರಂದು ಬೆಳಗ್ಗೆ 9ಕ್ಕೆ ಅಭ್ಯರ್ಥಿಗಳ ಸಮ್ಮುಖದಲ್ಲಿ ಅಂಚೆ ಮತ ಪರಿಶೀಲನೆ ಹಾಗೂ ಮರು ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎನ್‌.ಎಂ. ನಾಗರಾಜ್‌ ತಿಳಿಸಿದರು.

ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನ ಮೊದಲ ಮಹಡಿಯಲ್ಲಿ ಅಂಚೆ ಮತ ಮರು ಎಣಿಕೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಎಣಿಕೆಗೆ ಹೈಕೋರ್ಟ್‌ ನಿರ್ದೇಶನದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇ 2 ರಂದು ಬೆಳಗ್ಗೆ 9ಕ್ಕೆ ಅಭ್ಯರ್ಥಿಗಳ ಸಮ್ಮುಖದಲ್ಲಿ ಅಂಚೆ ಮತ ಪರಿಶೀಲನೆ ಹಾಗೂ ಮರು ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎನ್‌.ಎಂ. ನಾಗರಾಜ್‌ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನ ಮೊದಲ ಮಹಡಿಯಲ್ಲಿ ಅಂಚೆ ಮತ ಮರು ಎಣಿಕೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 7 ರಿಂದ 7.30ರ ಅವಧಿಯಲ್ಲಿ ಸ್ಟ್ರಾಂಗ್‌ ರೂಂ ತೆರೆದು ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಅಂಚೆ ಮತ ಪತ್ರಗಳನ್ನು ಪೊಲೀಸ್‌ ಭದ್ರತೆ, ಜಿಪಿಎಸ್‌ ಟ್ರಾಕಿಂಗ್‌ ವ್ಯವಸ್ಥೆಯಲ್ಲಿ ಮತ ಎಣಿಕಾ ಕೇಂದ್ರಕ್ಕೆ ತರಲಾಗುವುದು. ಬೆಳಗ್ಗೆ 9ಕ್ಕೆ ಮತ ಏಣಿಕೆ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.ಚುನಾವಣಾಧಿಕಾರಿಯಾಗಿ ನೇಮಕಗೊಂಡಿರುವ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ (ಆಡಳಿತ) ಗೌರವ್‌ ಕುಮಾರ್‌ ಶೆಟ್ಟಿ ಮಾತನಾಡಿ, ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಎಲ್ಲಾ 12 ಅಭ್ಯರ್ಥಿಗಳು ಅಥವಾ ಅಭ್ಯರ್ಥಿಯ ಏಜೆಂಟ್‌ ಸಮ್ಮುಖದಲ್ಲಿ ಅಂಚೆ ಮತ ಪರಿಶೀಲನೆ ಮತ್ತು ಎಣಿಕೆ ಕಾರ್ಯ ನಡೆಸಲಾಗುವುದು. ಒಟ್ಟು ಎರಡು ಹಂತಗಳಲ್ಲಿ ಅಂಚೆ ಮತ ಪರಿಶೀಲನೆ ಮತ್ತು ಎಣಿಕೆ ಕಾರ್ಯ ನಡೆಸಲಾಗುವುದು. ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣೆ ವೇಳೆ ಒಟ್ಟು 1822 ಅಂಚೆ ಮತಪತ್ರ ಬಂದಿವೆ. ಈ ಪೈಕಿ 279 ಅಂಚೆ ಮತ ತಿರಸ್ಕೃತವಾಗಿವೆ. 1543 ಅರ್ಹ ಅಂಚೆ ಮತಪತ್ರ ಪರಿಗಣಿಸಲಾಗಿತ್ತು. ಮೊದಲ ಹಂತದಲ್ಲಿ ತಿರಸ್ಕೃತಗೊಂಡ ಅಂಚೆ ಮತಪತ್ರಗಳನ್ನು ಪುನರ್‌ ಪರಿಶೀಲನೆ ನಡೆಸಲಾಗುವುದು. ಈ ಪೈಕಿ ಅರ್ಹ ಮತಪತ್ರ ಕಂಡು ಬಂದರೆ ಅವುಗಳನ್ನು ಒಳಗೊಂಡಂತೆ 1543 ಈ ಹಿಂದೆ ಅರ್ಹ ಅಂಚೆ ಮತ ಪತ್ರ ಸೇರಿಸಿಕೊಂಡು ಎಣಿಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.ಅಂಚೆ ಮತ ಎಣಿಕೆಗೆ 6 ಅಧಿಕಾರಿ, 500 ಪೊಲೀಸ್‌ ನಿಯೋಜನೆ ಒಬ್ಬ ಚುನಾವಣಾಧಿಕಾರಿ, ಒಬ್ಬ ಸಹಾಯಕ ಚುನಾವಣಾಧಿಕಾರಿ, ಇಬ್ಬರು ಅಂಚೆ ಮತಪತ್ರ ಎಣಿಕೆ ಸಹಾಯಕರು, ಒಬ್ಬ ಮೇಲ್ವಿಚಾರಕ, ಒಬ್ಬ ಮೈಕ್ರೋ ಅಬ್ಸರ್ವರ್ ಹಾಗೂ ಮತ ಎಣಿಕಾ ಕೇಂದ್ರ ಹಾಗೂ ಸ್ಟ್ರಾಂಗ್‌ ರೂಂನಿಂದ ಮತಪತ್ರ ಎಣಿಕಾ ಕೇಂದ್ರಕ್ಕೆ ತರವುದಕ್ಕೆ ಸೇರಿದಂತೆ ಸುಮಾರು 500ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

--ಬಾಕ್ಸ್‌--

ಮತ ಎಣಿಕಾ ಕೇಂದ್ರದಿಂದ ಹೊರ ಹೋದರೆ ಮತ್ತೆ ಪ್ರವೇಶ ಇಲ್ಲ

ಅಂಚೆ ಮತಪತ್ರ ಮರುಪರಿಶೀಲನೆ ಮತ್ತು ಎಣಿಕೆ ಕಾರ್ಯದ ವೀಕ್ಷಣೆಗೆ ಆಗಮಿಸುವ ಅಭ್ಯರ್ಥಿಗಳು ಹಾಗೂ ಏಜೆಂಟ್‌ಗಳು ಎಣಿಕೆ ಕಾರ್ಯ ಆರಂಭಗೊಂಡ ನಂತರ ಹೊರಗೆ ಹೋಗಲು ಅವಕಾಶವಿಲ್ಲ. ಒಂದು ವೇಳೆ ಹೊರಗೆ ಎದ್ದು ಹೋದರೆ, ಮತ್ತೆ ಎಣಿಕಾ ಕೇಂದ್ರದ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಚುನಾವಣಾಧಿಕಾರಿ ಗೌರವ್‌ ಕುಮಾರ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.--ಬಾಕ್ಸ್‌----

ಅಭ್ಯರ್ಥಿಗಳೊಂದಿಗೆ ಸಭೆಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಅಭ್ಯರ್ಥಿಗಳೊಂದಿಗೆ ಜಿಲ್ಲಾ ಚುನಾವಣಾಧಿಕಾರಿ ಎನ್‌,ಎಂ,ನಾಗರಾಜ್‌ ಗುರುವಾರ ಸಭೆ ನಡೆಸಿದರು. ಗೆಲುವು ಸಾಧಿಸಿದ ಶಾಸಕ ರಾಜೇಗೌಡ, ಪರಾಜಿತ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್‌ , ಜೆಡಿಎಸ್‌ನಿಂದ ಸುಧಾಕರ ಎಸ್. ಶೆಟ್ಟಿ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.-- ಬಾಕ್ಸ್‌ --ತಿರಸ್ಕೃತ- ಅರ್ಹ ಅಂಚೆ ಮತಗಳ ಪರಿಶೀಲನೆ ಹೇಗೆ?

ಅಂಚೆ ಮತಪತ್ರ ಬಂದ ಲಕೋಟೆಗೆ 13(ಸಿ) ಫಾರಂ ಎನ್ನಲಾಗುತ್ತದೆ. ಈ ಲಕೋಟೆ ಒಳಭಾಗದಲ್ಲಿರುವ ಮತದಾರರ ದೃಢೀಕರಣ ಪತ್ರಕ್ಕೆ 13(ಬಿ) ಫಾರಂ, ಅಂಚೆ ಮತಪತ್ರಕ್ಕೆ ಫಾರಂ 13(ಎ) ಎಂದು ಕರೆಲಾಗುತ್ತದೆ.

13(ಬಿ) ಫಾರಂ ಕಡ್ಡಾಯವಾಗಿದೆ. ಈ ಫಾರಂ ಇಲ್ಲವಾದರೂ ಅಂಚೆ ಮತ ತಿರಸ್ಕೃತವಾಗಲಿದೆ. ಇನ್ನೂ ಅಂಚೆ ಮತಪತ್ರದ 13(ಎ) ಪಾರಂನಲ್ಲಿ ಮತದಾರ ಸಹಿ ಮಾಡಿರಬೇಕು ಹಾಗೂ ಗೆಜೆಟೆಡ್ ಅಧಿಕಾರಿ ಸಹಿ ಇದ್ದರೆ ಮಾತ್ರ ಅಂಚೆ ಮತ ಪರಿಗಣಿಸಲಾಗುತ್ತದೆ. ಇಲ್ಲವಾದರೆ ತಿರಸ್ಕರಿಸಲಾಗುವುದು.

ದೃಢೀಕರಣ ಪತ್ರದ ಕ್ರಮ ಸಂಖ್ಯೆ ಹಾಗೂ ಅಂಚೆ ಮತಪತ್ರದ ಫಾರಂ ಸಂಖ್ಯೆ ಒಂದೇ ಆಗಿರಬೇಕು. ಇಲ್ಲವಾದರೂ ತಿರಸ್ಕರಿಸಲಾಗುವುದು. ಅಂಚೆ ಮತಪತ್ರದಲ್ಲಿ ಒಬ್ಬ ಅಭ್ಯರ್ಥಿಗಿಂತ ಹೆಚ್ಚಿನ ಅಭ್ಯರ್ಥಿಗೆ ಮತ ಚಲಾವಣೆ ಮಾಡಿದ್ದರೂ ತಿರಸ್ಕರಿಸಲಾಗುವುದು, ಸ್ಪಷ್ಟವಾಗಿ ಯಾವ ಅಭ್ಯರ್ಥಿಗೆ ಮತ ಚಲಾವಣೆ ಮಾಡಲಾಗಿದೆ ಎಂಬುದು ತಿಳಿಯದ ಪಕ್ಷದಲ್ಲಿಯೂ ಮತಪತ್ರ ತಿರಸ್ಕರಿಸಲಾಗುವುದು ಎಂದು ಗೌರವ್‌ ಕುಮಾರ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.---ಕೋಟ್‌---

ಅಂಚೆ ಮತಪತ್ರ ಮರು ಎಣಿಕೆಗೆ ಪ್ರತ್ಯೇಕ ಮಾನದಂಡಗಳಿಲ್ಲ. ಸಾಮಾನ್ಯವಾಗಿ ಅಂಚೆ ಮತಪತ್ರ ಪರಿಶೀಲನೆ ಮತ್ತು ಎಣಿಕೆ ಗೆ ಅನುಸರಿಸುವ ನಿಯಮಾವಳಿಗಳನ್ನೇ ಈಗ ಅನುಸರಿಸಲಾಗುವುದು.

ಎನ್‌,ಎಂ.ನಾಗರಾಜ್‌, ಜಿಲ್ಲಾ ಚುನಾವಣಾಧಿಕಾರಿ, ಚಿಕ್ಕಮಗಳೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಕ್ಕಿನಾಳು ಗ್ರಾಮದಲ್ಲಿ ಬಿರುಗಾಳಿಗೆ ಬಾಳೆತೋಟ ನಾಶ
ಕೋಗೋಡು ಬಳಿ ಕಾಡಾನೆಗಳ ಸಂಚಾರ