ಮೈಸೂರು ಮಾದರಿಯಲ್ಲೇ ಶ್ರೀರಂಗಪಟ್ಟಣ ದಸರಾ ಆಚರಣೆ: ಶಾಸಕ ರಮೇಶ ಬಂಡಿಸಿದ್ದೇಗೌಡ

KannadaprabhaNewsNetwork | Published : Sep 21, 2024 1:51 AM

ಸಾರಾಂಶ

ಶ್ರೀರಂಗಪಟ್ಟಣ ದಸರಾವನ್ನು ಮನೆ ಮನೆ ಹಬ್ಬದಂತೆ ಈ ಬಾರಿ ಬಹಳ ವಿಜೃಂಭಣೆಯಿಂದ ಆಚರಿಸಬೇಕು. ಪ್ರತಿ ಬೀದಿಗಳು ಸ್ವಚ್ಛತೆಯಿಂದ ಕೂಡಿದ್ದು, ಎಲ್ಲಾ ಬೀದಿಗಳನ್ನು ತಳಿರು, ತೋರಣಗಳ ಕಟ್ಟಿ ವಿದ್ಯುತ್ ಅಲಂಕಾರಗೊಳಿಸಿ ಸಿಂಗರಿಸಲಾಗುವುದು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣ ದಸರಾವನ್ನು ಮೈಸೂರು ದಸರಾ ಮಾದರಿಯಲ್ಲಿಯೇ ಬಹಳ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ಪಟ್ಟಣದಲ್ಲಿ ಅ.4ರಿಂದ ಪಟ್ಟಣದಲ್ಲಿ ನಡೆಯಲಿರುವ ದಸರಾ ಮಹೋತ್ಸವದ ಅಂಗವಾಗಿ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ನಡೆದ ಅಧಿಕಾರಿಗಳು ಮತ್ತು ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ಶ್ರೀರಂಗಪಟ್ಟಣ ದಸರಾವನ್ನು ಮನೆ ಮನೆ ಹಬ್ಬದಂತೆ ಈ ಬಾರಿ ಬಹಳ ವಿಜೃಂಭಣೆಯಿಂದ ಆಚರಿಸಬೇಕು. ಪ್ರತಿ ಬೀದಿಗಳು ಸ್ವಚ್ಛತೆಯಿಂದ ಕೂಡಿದ್ದು, ಎಲ್ಲಾ ಬೀದಿಗಳನ್ನು ತಳಿರು, ತೋರಣಗಳ ಕಟ್ಟಿ ವಿದ್ಯುತ್ ಅಲಂಕಾರಗೊಳಿಸಿ ಸಿಂಗರಿಸಲಾಗುವುದು. ದಸರಾ ಉತ್ಸವದ ಸಂಜೆ ವೇಳೆ ಪ್ರತಿ ಮನೆಗಳಲ್ಲೂ ದೀಪಗಳನ್ನು ಬೆಳಗುವಂತೆ ಮೈಸೂರು ಪರಂಪರೆಯನ್ನು ತಿಳಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

ಜಂಬೂ ಸವಾರಿ ಆರಂಭವಾಗಲಿರುವ ಕಿರಂಗೂರು ವೃತ್ತದ ಬನ್ನಿ ಮಂಟಪ, ಪಟ್ಟಣದ ಮುಖ್ಯ ಬೀದಿಗಳು, ವೃತ್ತಗಳು, ಪ್ರಮುಖ ಸ್ಮಾರಕಗಳು ಹಾಗೂ ಸರ್ಕಾರಿ ಕಚೇರಿಗಳನ್ನು ಆಕರ್ಷಕ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುವುದು. ಮೈಸೂರು ಮಾದರಿಯಲ್ಲಿ ರಸ್ತೆಯಲ್ಲಿ ಬಣ್ಣ ಬಣ್ಣದಲ್ಲಿ ವಿದ್ಯುತ್ ದೀಪಗಳ ಅಲಂಕಾರದಲ್ಲಿ ಬೆಳಗುವಂತೆ ಮಾಡಿ ನಾಡ ಹಬ್ಬಕ್ಕೆ ವಿಶೇಷ ಮೆರಗು ತರಲಾಗುವುದು ಎಂದರು.

ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಮಾತನಾಡಿ, ಈ ಬಾರಿ ದಸರಾ ಉತ್ಸವದಲ್ಲಿ ಯೋಗ ದಸರಾ, ರೈತ ದಸರಾ, ಯುವ ದಸರಾ, ಕುಸ್ತಿ ದಸರಾ, ಮಹಿಳಾ ದಸರಾ, ಕ್ರೀಡಾ ದಸರಾ ಇರುತ್ತದೆ. ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ಆಹಾರ ಮೇಳ, ಪುಸ್ತಕ ಪ್ರದರ್ಶನ, ಕೃಷಿಗೆ ಸಂಭಂದಿತ ಪ್ರದರ್ಶನ ಹಾಗೂ ವಿವಿಧ ಇಲಾಖೆಗಳ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ ಎಂದರು.

ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮಾ ಮಾತನಾಡಿ, ಈ ಬಾರಿ ಕೆಆರ್‌ಎಸ್ ಅಣೆಕಟ್ಟೆ ಭರ್ತಿ ಆಗಿರುವುದು ದಸರಾ ಉತ್ಸವದ ಸಂಭ್ರಮವನ್ನು ಹೆಚ್ಚಿಸಲಿದೆ. ಬನ್ನಿ ಮಂಟಪದಲ್ಲಿ ಬನ್ನಿ ಪೂಜೆ ಇತರ ಸಾಂಪ್ರದಾಯಿಕ ಆಚರಣೆಗಳು ಜರುಗಲಿವೆ ಎಂದರು.

ಈ ವೇಳೆ ಮನ್ಮುಲ್ ಅಧ್ಯಕ್ಷ ಬಿ. ಬೋರೇಗೌಡ, ತಾಪಂ ಇಒ ವೇಣು, ಡಿವೈಎಸ್ಪಿ ಮುರಳಿ, ಮುಖ್ಯಾಧಿಕಾರಿ ಎಂ. ರಾಜಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ. ನಂದೀಶ್, ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಎನ್.ವಿ. ಚಲುವರಾಜು, ಪುರಸಭೆ ಸದಸ್ಯ ಎಂ.ಎಲ್. ದಿನೇಶ್ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Share this article