ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಶ್ರೀ ರಾಜೇಶ್ವರಿ ವಿದ್ಯಾಲಯ ವತಿಯಿಂದ ಇತ್ತೀಚೆಗೆ ನಡೆದ ಎಸ್ ಆರ್ ವಿ ಫುಟ್ಬಾಲ್ ಕಪ್ ಹೊನಲು ಬೆಳಕಿನ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಟೀಮ್ ಭಗವತಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಕೂರ್ಗ್ ಚಾರ್ಮಾರ್ಸ್ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿತು.ಮೂರನೇ ಹಾಗೂ ನಾಲ್ಕನೇ ಸ್ಥಾನವನ್ನು ಫಿನಿಕ್ಸ್ ಎಫ್ ಸಿ ಮತ್ತು ಆರ್‌ಆರ್‌ಎಫ್‌ಸಿ ತಂಡ ಪಡೆದುಕೊಂಡಿತು.
ನಗರದ ಗಾಂಧಿ ಮೈದಾನದಲ್ಲಿ ನಡೆದ ಎಸ್ ಆರ್ ವಿ ಚಾಂಪಿಯನ್ ಲೀಗ್, ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು.ಇದಕ್ಕೂ ಮೊದಲು ನಡೆದ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಕೂರ್ಗ್ ಚಾರ್ಮಾರ್ಸ್ ತಂಡವು ಟೀಂ ಭಗವತಿ ವಿರುದ್ಧ ಪೆನಾಲ್ಟಿಯಲ್ಲಿ 3-1 ರ ಜಯ ಸಾಧಿಸಿ ನೇರವಾಗಿ ಫೈನಲ್ ಗೆ ಅರ್ಹತೆ ಪಡೆದುಕೊಂಡಿತು.
ಎಲಿಮಿನೇಟರ್ ಪಂದ್ಯವು ಫಿನಿಕ್ಸ್ ಎಫ್ ಸಿ ಹಾಗೂ ಆರ್ ಆರ್ ಎಫ್ ಸಿ ತಂಡದ ನಡುವೆ ನಡೆದು ಫಿನಿಕ್ಸ್ ಎಫ್ ಸಿ ತಂಡವು ಪೆನಾಲ್ಟಿ ಶೂಟ್ ಔಟ್ ನಲ್ಲಿ 3-2 ರ ಜಯ ಪಡೆದು ಕೊಂಡು ಕ್ವಾಲಿಫಯರ್‌ಗೆ ಲಗ್ಗೆ ಇಟ್ಟಿತು.ದ್ವಿತೀಯ ಕ್ವಾಲಿಫಯರ್ ಪಂದ್ಯವು ಫಿನಿಕ್ಸ್ ಎಫ್ ಸಿ ಹಾಗೂ ಟೀಮ್ ಭಗವತಿ ತಂಡದ ನಡುವೆ ನಡೆದ ರೋಚಕ ಹಣಹಣಿಯಲ್ಲಿ ಟೀಮ್ ಭಗವತಿ ತಂಡವು 1-0 ಗೊಲುಗಳ ಅಂತರದಲ್ಲಿ ಗೆದ್ದು ಫೈನಲ್ ಗೆ ದ್ವಿತೀಯ ಅರ್ಹತೆ ಪಡೆದುಕೊಂಡಿತು.
ಫೈನಲ್ ಪಂದ್ಯವು ಟೀಮ್ ಭಗವತಿ ಹಾಗೂ ಕೂರ್ಗ್ ಚಾರ್ಮಾರ್ಸ್ ತಂಡದ ನಡುವೆ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಟೀಮ್ ಭಗವತಿ ತಂಡವು ಕೂರ್ಗ್ ಚಾರ್ಮಾರ್ಸ್ ವಿರುದ್ಧ 2-0 ಅಂತರದಲ್ಲಿ ಗೆದ್ದು ಎಸ್ ಆರ್ ವಿ ಫುಟ್ಬಾಲ್ ಚಾಂಪಿಯನ್ ಲೀಗ್ ಸೀಸನ್-2 ರ ಚಾಂಪಿಯನ್ ಪಟ್ಟ ಅಲಂಕರಿಸಿತು.ಕ್ರೀಡಾಕೂಟದಲ್ಲಿ ಹೈ ಸ್ಕೋರರ್ ಆಗಿ ಟೀಮ್ ಭಗವತಿ ತಂಡದ ಲೋಹಿತ್ ಪಿಕ ಪಡೆದು ಕೊಂಡರೆ ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಟೀಮ್ ಭಗವತಿ ತಂಡದ ವಿನೋದ್ ಪಡೆದು ಕೊಂಡರು.ಉತ್ತಮ ಗೋಲ್ ಕೀಪರ್ ಪ್ರಶಸ್ತಿ ಯನ್ನು ಫಿನಿಕ್ಸ್ ಎಫ್ ಸಿ ತಂಡದ ಶಾಹಿದ್ ಪಡೆದು ಕೊಂಡರೆ, ಉದಯೋನ್ಮೋಖ ಆಟಗಾರ ಪ್ರಶಸ್ತಿಯನ್ನು ಕೂರ್ಗ್ ಚಾರ್ಮಾರ್ಸ್ ತಂಡದ ಪೊಣ್ಣನ್ನ ಪಡೆದರೆ, ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಕೂರ್ಗ್ ಚಾರ್ಮಾರ್ಸ್ ತಂಡದ ಮಹೇಶ್ ಪಡೆದು ಕೊಂಡರು.
ಶ್ರೀ ರಾಜೇಶ್ವರಿ ವಿದ್ಯಾಲಯದ ಕಾರ್ಯದರ್ಶಿ ಸಚಿನ್ ವಾಸುದೇವ್ ಸಮ್ಮುಖದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಎಸ್ ಆರ್ ವಿ ಆಯೋಜಕರಿಂದ ಮಿನಿ ಒಲಿಂಪಿಕ್ ವಯೋಮಿತಿ 14 ವರ್ಷದ ಫುಟ್ಬಾಲ್ ಪಂದ್ಯವಳಿಯಲ್ಲಿ ಕೊಡಗು ಜಿಲ್ಲೆ ರನ್ನರ್ಸ್ ಸ್ಥಾನ ಪಡೆಯುವಲ್ಲಿ ಯಶಸ್ವಿಗೆ ಪ್ರಮುಖ ಕಾರಣರಾದ ತರಬೇತುದಾರ ಕ್ರಿಸ್ಟೋಫರ್ ಅವರನ್ನು ಸನ್ಮಾನಿಸಲಾಯಿತು.ಸಮಾರಂಭದಲ್ಲಿ ಪಾಲ್ಗೊಂಡ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕ್ರೀಡೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿ. ಕ್ರೀಡೆಯಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಹೊಂದಾಣಿಕೆ ಮನೋಭಾವ ಬರುತ್ತದೆ ಎಂದರು.
ಎಂಸಿಸಿ ಅಧ್ಯಕ್ಷ ಕ್ರಿಸ್ಟೋಫರ್ ಮಾತನಾಡಿ ದ್ವಿತೀಯ ಬಾರಿಗೆ ಹೊನಲು ಬೆಳಕಿನ ಪಂದ್ಯ ಆಯೋಜನೆಗೊಂಡಿರುವುದು ಸಂತೋಷದ ವಿಷಯ. ಕ್ರೀಡೆ ಎಂದ ಕೂಡಲೇ ಬಾಲ್ಯದ ಜೀವನ ಮತ್ತೆ ಮರುಕಳಿಸುತ್ತದೆ. ಕ್ರೀಡಾ ಮನೋಭಾವನೆಯಿಂದ ಆಟವಾಡಬೇಕು. ಕ್ರೀಡೆಯನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಿದಾಗ ಮಾತ್ರ ಸೋಲು- ಗೆಲವನ್ನು ಸಮಾನವಾಗಿ ಕಾಣಬಹುದು ಎಂದರು.ಶ್ರೀ ರಾಜೇಶ್ವರಿ ವಿದ್ಯಾಲಯದ ಅಧ್ಯಕ್ಷ ಗೋವಿಂದ ರಾಜು ಮಾತನಾಡಿದರು.
ಶ್ರೀ ರಾಜೇಶ್ವರಿ ವಿದ್ಯಾಲಯದ ಕಾರ್ಯದರ್ಶಿ ಸಚಿನ್ ವಾಸುದೇವ್ ಅಧ್ಯಕ್ಷತೆ ವಹಿಸಿದ್ದರು.ಎಸ್‌ಆರ್ಪಿ ಫುಟ್ಬಾಲ್ ಪಂದ್ಯಕ್ಕೆ ಟೈಟಲ್ ಸ್ಪೋನ್ಸರ್ ಮಾಡಿದ ಸೋನಾ ಟಿ ವಿ ಎಸ್ ನ ದೀಪ, ಲಕ್ಷ್ಮಿ ಸಚಿನ್ ಪ್ರಾಂಶುಪಾಲರು ಶ್ರೀ ರಾಜೇಶ್ವರಿ ವಿದ್ಯಾಲಯ, ಮಂದಣ್ಣ ಉಪಪ್ರಾಂಶುಪಾಲರು ಶ್ರೀ ರಾಜೇಶ್ವರಿ ವಿದ್ಯಾಲಯ, ಕ್ರಿಸ್ಟೋಫರ್ ಅಧ್ಯಕ್ಷರು ಎಂಸಿಸಿ, ಹಾಗೂ ಶ್ರೀ ರಾಜೇಶ್ವರಿ ವಿದ್ಯಾಲಯದ ಸದಸ್ಯರಾಗಿರುವ ಕಿರಣ್ ಕುಮಾರ್, ಪ್ರಶಾಂತ್ ಮತ್ತಿತರರು ಹಾಜರಿದ್ದರು.
ಎಸ್‌ಆರ್‌ವಿ ಫುಟ್ಬಾಲ್ ವತಿಯಿಂದ ಮಡಿಕೇರಿ ಶಾಲಾ ಮಕ್ಕಳಿಗೆ ಫುಟ್ಬಾಲ್ ಪಂದ್ಯ ಆಯೋಜಿಸಲಾಗಿತ್ತು. 10 ತಂಡಗಳು ಪಾಲ್ಗೊಂಡಿದ್ದವು. ಈ ಪಂದ್ಯದಲ್ಲಿ ಜನರಲ್ ತಿಮ್ಮಯ್ಯ ಶಾಲೆ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಸಂತ ಮೈಕಲರ ಶಾಲೆ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿತು.ಪಂದ್ಯದಲ್ಲಿ ಹೈ ಸ್ಕೋರರ್ ಆಗಿ ಮಡಿಕೇರಿ ಪ್ರೌಢಶಾಲೆಯ ವಿಶ್ವಾಸ್ ಸಿಂಗ್, ಉತ್ತಮ ಗೋಲ್ ಕೀಪರ್ ಆಗಿ ರಾಜೇಶ್ವರಿ ವಿದ್ಯಾಲಯದ ಮಹಸ್ವಿನ್ ಸ್ವಾಮಿ, ಉತ್ತಮ ಆಟಗಾರನಾಗಿ ಜನರಲ್ ತಿಮ್ಮಯ್ಯ ಶಾಲೆಯ ತರುಣ್ ಆಯ್ಕೆಯಾದರು.
ದೈಹಿಕ ಶಿಕ್ಷಣ ಶಿಕ್ಷಕ ಉನ್ನೈಸ್ ಎಂಎಂ, ಇಕ್ರಾ ಪಬ್ಲಿಕ್ ಸ್ಕೂಲ್ ಸಿದ್ದಾಪುರ, ಚೆಟ್ಟಳ್ಳಿಯ ಅಜಿತ್ ಹಾಗೂ ಬೆಂಗಳೂರಿನ ನರಸಿಂಹ (ನಾಣಿ ) ತೀರ್ಪುಗಾರರಾಗಿದ್ದರು.ವೀಕ್ಷಕ ವಿವರಣೆಯನ್ನು ಚಿಕ್ಕಮಗಳೂರಿನ ವೀಕ್ಷಕ ವಿವರಣೆಗಾರ ದಿನೇಶ್ ಹಾಗೂ ಹೆಬ್ಬಟ್ಟಗೇರಿಯ ರಮೇಶ್ ನಡೆಸಿಕೊಟ್ಟರು.
ಅಶೋಕ್ ಮಡಿಕೇರಿ ಹಾಗೂ ಅಜಿತ್ ಲೈವ್ ಸ್ಕೋರರ್‌ಗಳಾಗಿದ್ದರು.