ಮಂಗಳೂರು: ಫೆಬ್ರವರಿ 28ರಿಂದ ಆರಂಭವಾಗಲಿರುವ ಪಿಯು ಪರೀಕ್ಷೆಗೆ ದ.ಕ. ಜಿಲ್ಲೆಯ ಒಟ್ಟು 59 ಪರೀಕ್ಷಾ ಕೇಂದ್ರಗಳಲ್ಲಿ 37,337 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರೆ, ಮಾ.18ರಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 29,397 ಅಭ್ಯರ್ಥಿಗಳು ನೋಂದಾಯಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 18,559 ಮಂದಿ ನೋಂದಾಯಿಸಿದ್ದರೆ, ಈ ಪೈಕಿ ರೆಗ್ಯುಲರ್ 18401, ರಿಪೀಟರ್ 158 ಮಂದಿ ಇದ್ದಾರೆ. ಕಲಾವಿಭಾಗದಲ್ಲಿ 3,724 ಮಂದಿ, ವಾಣಿಜ್ಯ ವಿಭಾಗದಲ್ಲಿ 15,054 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳ ಸಾಗಾಟಕ್ಕೆ ಒಟ್ಟು 16 ಮಾರ್ಗಗಳನ್ನು ಕಲ್ಪಿಸಲಾಗಿದೆ. ಅದಕ್ಕೆ ತ್ರಿಸದಸ್ಯ ಸಮಿತಿ ಸದಸ್ಯರನ್ನೊಳಗೊಂಡ 16 ತಂಡಗಳನ್ನು ನಿಯೋಜಿಸಲಾಗಿದೆ. ಪರೀಕ್ಷೆಯ ಎಲ್ಲ ಪ್ರಕ್ರಿಯೆಗಳಿಗೆ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.ಎಸ್‌ಎಸ್‌ಎಲ್‌ಸಿಗೆ 29,397 ಅಭ್ಯರ್ಥಿಗಳು:
ದ.ಕ. ಜಿಲ್ಲೆಯಲ್ಲಿ ಮಾ.18ರಿಂದ ಆರಂಭವಾಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಾಯಿಸಿದ 29, 397 ಅಭ್ಯರ್ಥಿಗಳ ಪೈಕಿ ರೆಗ್ಯುಲರ್ 27,633, ಖಾಸಗಿ 979, ರೆಗ್ಯುಲರ್ ರಿಪೀಟರ್ 632, ರಿಪೀಟರ್ ಖಾಸಗಿ 153 ಆಗಿದ್ದು, ಜಿಲ್ಲೆಯ ಒಟ್ಟು 524 ಪ್ರೌಢಶಾಲೆಗಳ ಅಭ್ಯರ್ಥಿಗಳು 91 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.22 ಕ್ಲಸ್ಟರ್ ಹಾಗೂ 38 ಕ್ಲಸ್ಟರ್ ರಹಿತ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. 22 ಕ್ಲಸ್ಟರ್ ಗಳಲ್ಲಿ 53 ಪರೀಕ್ಷಾ ಕೇಂದ್ರಗಳಿವೆ. ಪ್ರತಿ ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಸುಮಾರು 1265 ಕೊಠಡಿಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗೆ ಸೂಕ್ತ ಆಸನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ, ಗಾಳಿ ಬೆಳಕು ಇತ್ಯಾದಿ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿದೆ. ವಿಕಲ ಚೇತನ ಮಕ್ಕಳಿಗೆ ನೆಲಮಹಡಿಯಲ್ಲಿ ಆಸನ ವ್ಯವಸ್ಥೆ ಸೇರಿದಂತೆ, ಮಂಡಳಿ ನಿಗದಿಪಡಿಸಿದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಜಿ.ಪಂ ಸಿಇಒ ವಿನಾಯಕ ನರ್ವಾಡೆ, ದ.ಕ. ಜಿಲ್ಲಾ ಎಸ್ಪಿ ಡಾ.ಅರುಣ್, ಡಿಡಿಪಿಐ ಶಶಿಧರ್ ಜಿ.ಎಸ್, ಡಿಡಿಪಿಯು ರಾಜೇಶ್ವರಿ ಇದ್ದರು.